ಸಿಎಂ ಗ್ರಾಮ ವಾಸ್ತವ್ಯ, ವಿಪಕ್ಷಗಳ ಡ್ರಾಮ ವಾಸ್ತವ್ಯ ಆಗಿದ್ಯಾಕೆ..?

ಡಿಜಿಟಲ್ ಕನ್ನಡ ಟೀಮ್:

ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂದು ಬರೋಬ್ಬರಿ ಒಂದು ವರ್ಷ ಪೂರ್ಣವಾಗಿದೆ. ಕುಮಾರಸ್ವಾಮಿ ಬಿಜೆಪಿ ಜೊತೆ ಸೇರಿ‌ ಇಪ್ಪತ್ತು ತಿಂಗಳು ನಡೆಸಿದ ಅಧಿಕಾರ ಜನರಿಗೆ ಇಷ್ಟವಾಗಿದ್ದ ಕಾರಣಕ್ಕೆ ಜನರು ಅದರಲ್ಲೂ ಹಳೇ ಮೈಸೂರು ಭಾಗದಲ್ಲಿ ಅತಿ ಹೆಚ್ಚು ಮತಗಳನ್ನು ನೀಡಿ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಿದರು. ಆದರೆ ಕಳೆದೊಂದು ವರ್ಷದ ಆಡಳಿತದಲ್ಲಿ ಸಿಎಂ ಕುಮಾರಸ್ವಾಮಿ ಅವರು ಕಳೆದ ಬಾರಿಯ ಆಡಳಿತ ನೆನಪು‌ ಮಾಡುವಂತಿಲ್ಲ ಅನ್ನೋದು‌ ಸ್ವತಃ ಜೆಡಿಎಸ್‌ ಕಾರ್ಯಕರ್ತರ ಮನದಾಳದ ಮಾತಾಗಿದೆ. ಇದಕ್ಕೆ‌ ಸಿಎಂ ಕುಮಾರಸ್ವಾಮಿ ಕೊಡುವ ಕಾರಣ ಅಂದ್ರೆ ಮೈತ್ರಿ‌ ಸರ್ಕಾರ. 2006ರಲ್ಲೂ‌ ಜೆಡಿಎಸ್ ಬಿಜೆಪಿ ಜೊತೆಗೂಡಿ‌ ಅಧಿಕಾರ ಹಿಡಿದಿತ್ತು. ಆಗಲೂ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿತ್ತು. ಆದ್ರೆ ಆಗ ಗ್ರಾಮ ವಾಸ್ತವ್ಯ, ಜನತಾ ದರ್ಶನ ಸೇರಿದಂತೆ ಹಲವು ಯೋಜನೆಗಳ ಮೂಲಕ ಕುಮಾರಸ್ವಾಮಿ ಖ್ಯಾತಿ ಪಡೆದಿದ್ರು. ಆದ್ರೆ ಈ ಬಾರಿ ಜನತಾ ದರ್ಶನ ಆರಂಭ ಮಾಡಿದರೂ ಮುಂದುವರಿಸಲಿಲ್ಲ, ಜಿಲ್ಲಾ ಕೇಂದ್ರದಲ್ಲಿಯೇ ಸಚಿವರು ಸಮಸ್ಯೆ ಆಲಿಸಿ ಪರಿಹಾರ ಕೊಡಬೇಕು ಎಂದು ಸೂಚಿಸಿದರೂ ಸಚಿವರು ಪಾಲಿಸಲಿಲ್ಲ. ಈ ಎಲ್ಲಾ ಕಾರಣಗಳಿಂದ ಸರ್ಕಾರ ಇದೆಯೋ ಇಲ್ಲವೋ ಅನ್ನೋ ಮನಸ್ಥಿತಿಗೆ ರಾಜ್ಯದ ಜನತೆ ಬಂದಿದ್ದಾರೆ. ಇದಕ್ಕೆ ಇತಿಶ್ರೀ ಹಾಡಲು ಸ್ವತಃ ಸಿಎಂ ಕುಮಾರಸ್ವಾಮಿ ಸಿದ್ಧರಾಗಿದ್ದಾರೆ. ಅದಕ್ಕಾಗಿ ಆಯ್ದುಕೊಂಡ ಮಾರ್ಗ ಗ್ರಾಮ ವಾಸ್ತವ್ಯ..

ಸಿಎಂ ಕುಮಾರಸ್ವಾಮಿ ಈ ಬಾರಿ ಮತ್ತೆ ಗ್ರಾಮ ವಾಸ್ತವ್ಯದ ಮೂಲಕ ಜನರ ಸಮಸ್ಯೆ ಆಲಿಸುವ ಮನಸ್ಸು ಮಾಡಿದ್ದಾರೆ. ಸಾಧ್ಯವಾದಷ್ಟು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡುವ ಕೆಲಸ ಮಾಡಲು ಇಡೀ ಜಿಲ್ಲಾಡಳಿತವನ್ನೇ ಗ್ರಾಮ ವಾಸ್ತವ್ಯದ ಹಳ್ಳಿಗೆ ಕರೆದುಕೊಂಡು ಹೋಗಲಿದ್ದಾರೆ. ಈ ಬಾರಿ ಗ್ರಾಮ ವಾಸ್ತವ್ಯ ಬೆಳಗ್ಗೆ 10 ಗಂಟೆಗೆ ಆರಂಭವಾಗಲಿದ್ದು, ಸಂಜೆ ತನಕ ನಡೆಯಲಿದೆ. ಕಳೆದ ಬಾರಿ ಬಡವರ ಮನೆಗಳಲ್ಲಿ ಮಲಗುತ್ತಿದ್ದ ಸಿಎಂ ಕುಮಾರಸ್ವಾಮಿ, ಈ ಬಾರಿ ಸರ್ಕಾರಿ ಶಾಲೆಯಲ್ಲಿ ಕೂರಲಿದ್ದಾರೆ. ಬಡವರ ಮನೆಗೆ ಹೋದರೆ ಅಲ್ಲಿ ಶೌಚಾಲಯ ಹಾಗೂ ಮಲಗುವ ವ್ಯವಸ್ಥೆಗಾಗಿ ಅವರು ಖರ್ಚು ಮಾಡಬೇಕಾಗುತ್ತದೆ. ಆದರೆ ಶಾಲೆಗಳಲ್ಲಿ ಉಳಿದುಕೊಂಡರೆ ಯಾರಿಗೂ ಹೊರೆಯಲ್ಲ ಅನ್ನೋದು ಸಿಎಂ ಮನದಾಳ. ಜೊತೆಗೆ ರಾತ್ರಿ ವೇಳೆಯಲ್ಲಿ ಗ್ರಾಮ ವಾಸ್ತವ್ಯ ಮಾಡುವುದರಿಂದ ನಿದ್ರೆ ಹಾಳಾಗುತ್ತದೆ. ಇದ್ರಿಂದ ಆರೋಗ್ಯ ಹದಗೆಡುತ್ತದೆ ಅನ್ನೋ ಕಾರಣಕ್ಕೆ ಹಗಲು ವೇಳೆಯಲ್ಲಿ ಗ್ರಾಮಸ್ಥರ ಸಮಸ್ಯೆ ಆಲಿಸಲು ನಿರ್ಧಾರ ಮಾಡಿದ್ದಾರೆ. ಆದ್ರೆ‌ ಬಿಜೆಪಿ ನಾಯಕರು ಮಾತ್ರ ಸಿಎಂ ಕುಮಾರಸ್ವಾಮಿ ಅವರಿಗೆ ಬಡವರ ಬಗ್ಗೆ ಕಾಳಜಿ ಇಲ್ಲ. ಕುಮಾರಸ್ವಾಮಿ ಡ್ರಾಮ ವಾಸ್ತವ್ಯ ಮಾಡಲು ಹೋಗ್ತಿದ್ದಾರೆ ಎಂದು ಟೀಕಿಸುತ್ತಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸದಾನಂದ ಗೌಡ, ಈಶ್ವರಪ್ಪ ಸೇರಿದಂತೆ ಬಿಜೆಪಿಯ ಎಲ್ಲಾ ನಾಯಕರೂ ಕೂಡ ಸಿಎಂ ಗ್ರಾಮ ವಾಸ್ತವ್ಯವನ್ನು ಡ್ರಾಮ ವಾಸ್ತವ್ಯ ಎಂದು ಜರಿದಿದ್ದಾರೆ. ಇದಕ್ಕೆ ಕಾರಣವೇನು ಅನ್ನೋದನ್ನು ಹುಡುಕಲು ಹೊರಟರೆ ನಿಮಗೆ ಎದುರಾಗುವ ಉತ್ತರ ರಾಜಕಾರಣ. ಕುಮಾರಸ್ವಾಮಿ ಕಳೆದ ಬಾರಿ‌ ಸಾಕಷ್ಟು ಕಡಿಮೆ ಅವಧಿಯಲ್ಲಿ ಅಷ್ಟೊಂದು ಜನಪ್ರಿಯತೆ ಗಳಿಸಿದ್ದು, ಕೇವಲ ಗ್ರಾಮ ವಾಸ್ತವ್ಯ ಹಾಗೂ ಜನತಾ ದರ್ಶನದಿಂದ. ಈ ಬಾರಿ ಸಿಎಂ ಕುಮಾರಸ್ವಾಮಿ ಅಷ್ಟೊಂದು ಜನಪ್ರಿಯ ಆಗದಂತೆ ನೋಡಿಕೊಳ್ಳಲಾಗಿದೆ. ಮತ್ತೆ ಗ್ರಾಮ ವಾಸ್ತವ್ಯದ ಮೂಲಕ ಜನರ ಹತ್ತಿರಕ್ಕೆ ಸರ್ಕಾರ ತೆಗೆದುಕೊಂಡು ಹೋದಾಗ ಅರ್ಧದಷ್ಟಾದರೂ ಜನರ ಸಮಸ್ಯೆ ನೀಗುತ್ತದೆ. ಗ್ರಾಮ ವಾಸ್ತವ್ಯ ಮಾಡುವ ಹಳ್ಳಿಯ ಸುತ್ತಮುತ್ತಲ ಪ್ರದೇಶಗಳಲ್ಲಿ ಜನರ ಮನಸ್ಸನ್ನು ಸಿಎಂ ಗೆಲ್ಲುತ್ತಾರೆ. ಇದರಿಂದ ಮುಂದಿನ ದಿನಗಳಲ್ಲಿ ರಾಜಕೀಯವಾಗಿ ತೊಂದರೆ ಆಗಲಿದೆ ಅನ್ನೋ ಕಾರಣಕ್ಕೆ ಬಿಜೆಪಿ ನಾಯಕರು ಡ್ರಾಮ ವಾಸ್ತವ್ಯ ಎಂದು ಟೀಕಿಸುತ್ತ ಜನರ ಮನಸ್ಸಲ್ಲಿ ಗ್ರಾಮ ವಾಸ್ತವ್ಯ ಪ್ರಯೋಜನ ಇಲ್ಲ ಎಂದು ಬಿಂಬಿಸುವ ಯತ್ನ ಮಾಡ್ತಿದೆಯಾ ಅನ್ನೋ ಗುಮಾನಿ ಎದುರಾಗ್ತಿದೆ. ಯಾಕಂದ್ರೆ ಸಿಎಂ ಜನರ ಬಳಿಕ ಆಡಳಿಯ ಯಂತ್ರವನ್ನು ಕೊಂಡೊಯ್ದಾಗ ಕನಿಷ್ಠ 50% ಸಮಸ್ಯೆ ಪರಿಹಾರ ಆಗುತ್ತೆ ಅನ್ನೋದನ್ನು ಯಾರೂ ಸಹ ಅಲ್ಲಗಳೆಯುವಂತಿಲ್ಲ. ಜೂನ್ 21 ರಿಂದ ಆರಂಭ ಆಗುವ ಗ್ರಾಮ ವಾಸ್ತವ್ಯದಿಂದ ರಾಜಕೀಯ ಲಾಭ ಯಾರಿಗಾದರೂ ಆಗಲಿ. ಜನರ ಸಮಸ್ಯೆ ಎಷ್ಟರ ಮಟ್ಟಿಗೆ ಬಗೆಹರಿಯುತ್ತೆ ಅನ್ನೋದಷ್ಟೆ ಕುತೂಹಲ.

Leave a Reply