ಮೈತ್ರಿ ಸರ್ಕಾರಕ್ಕೆ 6-8 ತಿಂಗಳು ಆಯಸ್ಸು! ಮಧ್ಯಂತರ ಚುನಾವಣೆ ಬಗ್ಗೆ ಕೋಳಿವಾಡ ಭವಿಷ್ಯ!

ಡಿಜಿಟಲ್ ಕನ್ನಡ ಟೀಮ್:

ಇಷ್ಟು ದಿನಗಳ ಕಾಲ ಮೈತ್ರಿ ಸರ್ಕಾರ ಪತನಕ್ಕೆ ಮುಹೂರ್ತ ಫಿಕ್ಸ್ ಮಾಡಿ ಸುಸ್ತಾಗಿರುವ ಬಿಜೆಪಿ ಈಗ ಕೈಚೆಲ್ಲಿ ಕೂತಿದೆ. ಮೈತ್ರಿ ಸರ್ಕಾರದ ಸಚಿವ ಸಂಪುಟಕ್ಕೆ ಪಕ್ಷೇತ್ರರನ್ನು ಸೇರಿಸಿಕೊಂಡು ಸರ್ಕಾರ ಸೇಫ್ ಆಗುವ ಹೊತ್ತಲ್ಲಿ ಮತ್ತೊಮ್ಮೆ ಮೈತ್ರಿ ಸರ್ಕಾರ ಪತನಕ್ಕೆ ಗಡವು ನೀಡಲಾಗಿದೆ. ಆದರೆ ಈ ಬಾರಿ ಗಡವು ನೀಡಿರುವುದು ಬಿಜೆಪಿಯವರಲ್ಲ ಬದಲಿಗೆ ಕಾಂಗ್ರೆಸ್ ನಾಯಕ ಹಾಗೂ ವಿಧಾನಸಭೆ ಮಾಜಿ ಸ್ಪೀಕರ್ ಕೆಬಿ ಕೇಳಿವಾಡ.

ಇಂದಿನ ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ‌ ಮಾತನಾಡಿದ ಮಾಜಿ ಸ್ಪೀಕರ್ ಕೆ.ಬಿ ಕೋಳಿವಾಡ, ಮೈತ್ರಿ ಸರ್ಕಾರದ ಭವಿಷ್ಯ ನುಡಿದಿದ್ದಾರೆ. ಈ ವೇಳೆ ಅವರು ಹೇಳಿರುವುದಿಷ್ಟು…

‘ರಾಜ್ಯ ಸರ್ಕಾರವನ್ನು ಉಳಿಸಿಕೊಳ್ಳಬೇಕೆಂಬ ಉದ್ದೇಶದಿಂದ ಪಕ್ಷೇತರ ಶಾಸಕರಿಗೆ ಅವಕಾಶ ನೀಡುತ್ತಿದ್ದು, ಈ ನಿರ್ಧಾರ ಕಾಂಗ್ರೆಸ್ ಹೈಕಮಾಂಡ್ ತೀರ್ಮಾನ. ಸಮ್ಮಿಶ್ರ ಸರ್ಕಾರ ರಚನೆಗೆ ನನ್ನ ಒಲವಿರಲಿಲ್ಲ. ಪ್ರತಿಪಕ್ಷದಲ್ಲಿ ನಾವು ಕೂರುವುದೇ ಉತ್ತಮವಾಗಿತ್ತು. ಜೆಡಿಎಸ್ – ಕಾಂಗ್ರೆಸ್ ಮೈತ್ರಿಯಿಂದ ಕಾಂಗ್ರೆಸ್ ಪಕ್ಷ ಸಂಘಟನೆಗೆ ಹಿನ್ನಡೆ ಆಗ್ತಿದೆ. ಪಕ್ಷೇತರ ಶಾಸಕ ಶಂಕರ್  ಕಾಂಗ್ರೆಸ್ ಪಕ್ಷದ ಜೊತೆ ವಿಲೀನ ಆಗುವ ಬಗ್ಗೆ ವ್ಯಂಗ್ಯವಾಡಿದ್ದು, ಕಾಂಗ್ರೆಸ್ ಗೆ ಬರ್ತಾರೆ, ಹೋಗ್ತಾರೆ., ಅದಕ್ಕೆಲ್ಲಾ ಲೆಕ್ಕಾ ಇಲ್ಲ. ಇನ್ನು ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಕಾಂಗ್ರೆಸ್ ಹೋಗಿದ್ದು ಕಾಂಗ್ರೆಸ್ ಪಕ್ಷದ ಹಿನ್ನಡೆಗೆ ಕಾರಣವಾಯ್ತು. ಸರ್ಕಾರ ಉಳಿಯಲಿ ಅನ್ನೋ ಕಾರಣಕ್ಕೆ ಈ ಬಾರಿ ಸಂಪುಟದಲ್ಲಿ ಪಕ್ಷೇತರರಿಗೆ ಮಣೆ ಹಾಕಿದ್ದಾರೆ‌. ಶಾಸಕ ಶಂಕರ ಒಬ್ಬ ಅವಕಾಶವಾದಿ. ಬಿಜೆಪಿಗೆ ಹೋದ್ರು.‌ ಮತ್ತೇ ಇಲ್ಲಿಗೆ ಬಂದ್ರು. ಅದಕ್ಕೆ ಅವರು ಅವಕಾಶವಾದಿ. ಈ ಹಿಂದೆ ಮಂತ್ರಿ ಮಂಡಲದಿಂದ ಸಿದ್ದರಾಮಯ್ಯನವರೇ ಶಂಕರ್ ರನ್ನು ತೆಗೆದಿದ್ರು. ಇದೀಗ ಅನಿವಾರ್ಯವಾಗಿ ಸಿದ್ದರಾಮಯ್ಯನವರೇ ಶಂಕರ್‌ನನ್ನು ಮತ್ತೊಂದು ಬಾರಿ ಮಂತ್ರಿ ಮಾಡ್ತಿದ್ದಾರೆ.

2020ರ ಮಾರ್ಚ್‌ನಲ್ಲಿ ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆಯೋದು ಗ್ಯಾರಂಟಿ.‌ ಚುನಾವಣೆ 100ಕ್ಕೆ 100 ರಷ್ಟು ನಡೆಯೋದು ಖಚಿತ. ಮೈತ್ರಿ ಸರ್ಕಾರ ಇರುವುದು ಇನ್ನು ಕೇವಲ 9 ತಿಂಗಳುಗಳ ಕಾಲ ಮಾತ್ರ ಎಂದು ಕೆ.ಬಿ ಕೋಳಿವಾಡ ಭವಿಷ್ಯ ನುಡಿದಿದ್ದಾರೆ. ಸಿದ್ದರಾಮಯ್ಯ ಕಾಲದಲ್ಲಾದ ಅಭಿವೃದ್ಧಿ ಕಾರ್ಯಗಳು ಮತ್ತೆ ಯಾವ ಕಾಲದಲ್ಲೂ ಆಗಿಲ್ಲ. ಸಿದ್ದರಾಮಯ್ಯ ಇಸ್ ವೆರಿ ಗುಡ್ ಲೀಡರ್. ಜೊತೆಗೆ ಸಿದ್ದರಾಮಯ್ಯ ಸೇರಿ ಬಹುತೇಕ ಕಾಂಗ್ರೆಸ್ ಶಾಸಕರು, ಮುಖಂಡರ ಒಲವು ಮತ್ತೆ ಚುನಾವಣೆಗೆ ಹೋಗುವುದೇ ಆಗಿದೆ. ಕಾಂಗ್ರೆಸ್ ಹೈಕಮಾಂಡ್ ಮುಂದೆಯೂ ಸಿದ್ದರಾಮಯ್ಯ ಮತ್ತೆ ಚುನಾವಣೆಗೆ ಹೋಗೋಣ ಎಂದಿದ್ದಾರೆ. ಆದರೆ ಹೈಕಮಾಂಡ್ ಬೇಡ ಎಂದಿರುವ ಹಿನ್ನಲೆಯಲ್ಲಿ ಸುಮ್ಮನಿದ್ದಾರೆ. ಮತ್ತೆ ಚುನಾವಣೆ ಗೆ ಹೋದರೆ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಗ್ಯಾರಂಟಿ.’

Leave a Reply