ಪಕ್ಷೇತರ ಶಾಸಕರಿಗೆ ಮಾತ್ರ ಮಂತ್ರಿ ಪಟ್ಟ ಸಿಕ್ಕಿದ್ಯಾಕೆ..?

ಡಿಜಿಟಲ್ ಕನ್ನಡ ಟೀಮ್:

ರಾಜ್ಯ ಸರ್ಕಾರ ಉರುಳುತ್ತೆ ಅಂತ ಬಿಜೆಪಿ ನಾಯಕರು ಹೇಳುತ್ತಲೇ ಇದ್ದಾರೆ. ಆದ್ರೆ ಸರ್ಕಾರ ಮಾತ್ರ ಪಟ್ಟು ಬಿಡದ ಜಟ್ಟಿಯಂತೆ ಕುಂಟುತ್ತಾ ನಿಲ್ಲುತ್ತಾ ಸಾಗುತ್ತಲೇ ಇದೆ. ಒಂದು ವರ್ಷ ಪೂರೈಸಿ ಎರಡನೇ ವರ್ಷಕ್ಕೆ ಕಾಲಿಟ್ಟಿರುವ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಸಂಪುಟ ವಿಸ್ತರಣೆ ಮಾಡುವ ಮೂಲಕ ಆಪರೇಷನ್ ಕಮಲಕ್ಕೆ ತಡೆಯೊಡ್ಡಿದೆ.

ಮುಳಬಾಗಿಲು ಪಕ್ಷೇತರ ಶಾಸಕ ನಾಗೇಶ್ ಹಾಗೂ ರಾಣೆಬೆನ್ನೂರು ಶಾಸಕ ಶಂಕರ್ ಸಂಪುಟ ದರ್ಜೆ ಸಚಿವರಾಗಿ ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಇದ್ರಲ್ಲಿ ರಾಣೆಬೆನ್ನೂರು ಶಾಸಕ ಶಂಕರ್ ಕೆಪಿಜೆಪಿಯಿಂದ ಆಯ್ಕೆಯಾಗಿದ್ದು, ಇದೀಗ ಕಾಂಗ್ರೆಸ್ ಪಕ್ಷದ ಜೊತೆಗೆ ವಿಲೀನ ಮಾಡಿದ್ದಾರೆ. ಹೀಗಾಗಿ ಕಾನೂನು ಪ್ರಕಾರ ಶಂಕರ್ ಕಾಂಗ್ರೆಸ್ ಪಕ್ಷದ ಶಾಸಕರಾಗಿದ್ದಾರೆ. ನಾಗೇಶ್ ಮಾತ್ರ ಪಕ್ಷೇತರ ಶಾಸಕರಾಗಿಯೇ ಮುಂದುವರಿದಿದ್ದಾರೆ. ಆದ್ರೆ ಸಂಪುಟ ವಿಸ್ತರಣೆ ನಾನಾ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಕಾಂಗ್ರೆಸ್ ಪಕ್ಷದಲ್ಲಿ ಸಚಿವ ಸ್ಥಾನ ಸಿಕ್ಕಿಲ್ಲ ಎನ್ನುವ ಕಾರಣಕ್ಕೆ ಸಾಕಷ್ಟು ಹಿರಿಯ ನಾಯಕರು ಹಾಗೂ ಯುವ ಶಾಸಕರು ಅಸಮಾಧಾನ ಹೊರ ಹಾಕಿದ್ರು. ಆದ್ರೆ ಜೆಡಿಎಸ್-ಕಾಂಗ್ರೆಸ್‌ನಿಂದ ಆಯ್ಕೆಯಾದ ಯಾವುದೇ ಶಾಸಕರನ್ನು ಸಚಿವ ಸಂಪುಟ ವಿಸ್ತರಣೆಯಲ್ಲಿ ಪರಿಗಣಿಸದ ನಾಯಕರು, ಕೇವಲ ಪಕ್ಷೇತರ ಶಾಸಕರನ್ನು ಸಚಿವರನ್ನಾಗಿ ಮಾಡುವ ಮೂಲಕ ಮಾಸ್ಟರ್ ಪ್ಲಾನ್ ಮಾಡಿದ್ದಾರೆ ಎನ್ನಲಾಗ್ತಿದೆ. ಬೆಳಗಾವಿ ಸಾಹುಕಾರ್ ರಮೇಶ್ ಜಾರಕಿಹೊಳಿ ಅಂಡ್ ಟೀಂ ಸಕ್ರಿಯವಾಗಿ ಬಿಜೆಪಿ ಜೊತೆ ಇಲ್ಲದಿದ್ದರೂ ಕಾಂಗ್ರೆಸ್ ಜೊತೆಗೂ ಉಳಿದುಕೊಂಡಿಲ್ಲ. ಆದ್ರೆ ಸರ್ಕಾರ ಅಲ್ಪಮತಕ್ಕೆ ಕುಸಿಯುವಂತೆ ಮಾಡುವಷ್ಟು ಸಂಖ್ಯಾಬಲ ಹೊಂದಿಸಲು ಬಿಜೆಪಿಗೆ ಸಾಧ್ಯವಾಗ್ತಿಲ್ಲ. ಆದ್ರೆ ಪಕ್ಷೇತರ ಶಾಸಕರಾದ ನಾಗೇಶ್ ಹಾಗೂ ಶಂಕರ್ ಅವರನ್ನು ಸೆಳೆದುಕೊಂಡರೆ ಉಳಿದ 7-8 ಶಾಸಕರನ್ನು ಸೆಳೆಯಲು ಪ್ರಯತ್ನ ಮಾಡಬಹುದು. ಅದೇ ಕಾರಣದಿಂದ ಪಕ್ಷೇತರ ಶಾಸಕರನ್ನೇ ಮೊದಲು ಹಿಡಿದು ಸರ್ಕಾರಕ್ಕೆ ಸೇರಿಸಿಕೊಂಡರೆ ಬರೋಬ್ಬರಿ 10 ಶಾಸಕರಿಂದ ರಾಜೀನಾಮೆ ಕೊಡಿಸಬೇಕಾಗುತ್ತದೆ. ಇದು ಅಷ್ಟೊಂದು ಸುಲಭದ ಕೆಲಸವಲ್ಲ ಅನ್ನೋದು ನಾಯಕರ ಲೆಕ್ಕಾಚಾರ ಎನ್ನಲಾಗ್ತಿದೆ.

ಅದು ಅಲ್ಲದೆ ಕಾಂಗ್ರೆಸ್ ಹಾಗೂ ಜೆಡಿಎಸ್‌ನ 10 ಶಾಸಕರು ರಾಜೀನಾಮೆ ನೀಡಿದರೆ ಅವರ ಮೇಲೆ ಪಕ್ಷಕ್ಕೆ ಕೆಲವೊಂದು ಅಧಿಕಾರ ಇರುತ್ತದೆ. ಆ ಕಾನೂನಾತ್ಮಕ ಅಸ್ತ್ರಗಳನ್ನು ಬಳಸಿ ಶಾಸಕರನ್ನು ಕೋರ್ಟ್ ಕಟಕಟೆಗೆ ಎಳೆದು ತರಬಹುದು. ಆದ್ರೆ ಪಕ್ಷೇತರ ಶಾಸಕರು ಯಾವುದೇ ಪಕ್ಷದ ಮುಲಾಜಿಗೆ ಒಳಗಾಗುವುದಿಲ್ಲ. ಹೀಗಾಗಿ ಅವರ ಮೇಲೆ ಕ್ರಮ ಅಸಾಧ್ಯ. ಪಕ್ಷೇತರ ಶಾಸಕರನ್ನು ಸಚಿವರನ್ನಾಗಿ ಮಾಡಿದರೆ ಅವರು ಯಾವುದೇ ಕಾರಣಕ್ಕೂ ಆಪರೇಷನ್‌ಗೆ ಬಲಿಯಾಗುವ ಸಾಧ್ಯತೆ ಇರುವುದಿಲ್ಲ. ಹಾಗಾಗಿ ಆಪರೇಷನ್ ಕಮಲ ಯಶಸ್ಸು ಆಗುವುದಕ್ಕೆ ಅವಕಾಶ ಇಲ್ಲ ಅನ್ನೋದು ಕಾಂಗ್ರೆಸ್ ಜೆಡಿಎಸ್ ನಾಯಕರ ಲೆಕ್ಕಾಚಾರ. ಒಂದು ವೇಳೆ ಉಮೇಶ್ ಜಾಧವ್ ರೀತಿ ಯಾರಾದರೂ ಶಾಸಕರು ಭಂಡ ಧೈರ್ಯ ಮಾಡಿ ರಾಜೀನಾಮೆ ಕೊಟ್ಟರೆ ಅವರ ರಾಜೀನಾಮೆ ಅಂಗಿಕರಿಸದೆ ವಿಳಂಬ ಮಾಡುವುದು. ಅಷ್ಟರೊಳಗೆ ಪಕ್ಷಾಂತರ ಕಾಯ್ದೆ ಅನ್ವಯ ಕ್ರಮಕ್ಕೆ ಶಿಫಾರಸು ಮಾಡುವುದು. ಬಳಿಕ ಅನರ್ಹತೆ ಅಸ್ತ್ರ ಪ್ರಯೋಗ ಮಾಡಿ ಸರ್ಕಾರ ಉಳಿಸಿಕೊಳ್ಳುವುದು ಮೈತ್ರಿ ನಾಯಕರ ಮಾಸ್ಟರ್ ಪ್ಲಾನ್ ಎನ್ನಲಾಗಿದೆ. ಯಾವುದೇ ಶಾಸಕ ರಾಜೀನಾಮೆ ಕೊಟ್ಟು ಮತ್ತೆ ಉಪಚುನಾವಣೆಯಲ್ಲಿ ಗೆದ್ದು ಬರುವ ಧೈರ್ಯ ತೋರುವುದು ಕಷ್ಟಸಾಧ್ಯ ಅನ್ನೋದು ಮೈತ್ರಿ ನಾಯಕರ ನಂಬಿಕೆ. ಇದೇ ಕಾರಣಕ್ಕಾಗಿ ಕೇವಲ ಇಬ್ಬರು ಪಕ್ಷೇತರ ಶಾಸಕರನ್ನು ಮಂತ್ರಿಗಳನ್ನಾಗಿ ಮಾಡಲಾಗಿದೆ ಎನ್ನುವುದು ಸದ್ಯಕ್ಕೆ ಸಿಕ್ಕಿರುವ ಮಾಹಿತಿ.

Leave a Reply