ಸಂಪುಟ ವಿಸ್ತರಣೆಯಾದ್ರೂ ಕಾಂಗ್ರೆಸ್‌ ಗೊಂದಲಗಳ ಗೂಡಾಗಿರೋದ್ಯಾಕೆ?

ಡಿಜಿಟಲ್ ಕನ್ನಡ ಟೀಮ್:

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಬಿರುಗಾಳಿಗೆ ಸಿಕ್ಕ ಹಡಗಿನಂತೆ ಅತ್ತಿಂದಿತ್ತ ವಾಲುತ್ತ ಯಾನ ಮುಂದುವರಿಸಿದೆ. ಆದ್ರೆ ಆ ಹಡಗಿನಲ್ಲಿರುವ ಪ್ರಯಾಣಿಕರು ಯಾರು ಏನು ಮಾಡ್ತಿದ್ದಾರೆ ಅನ್ನೋದು ಹಡಗಿನ ಕ್ಯಾಪ್ಟನ್‌ಗೂ ಗೊತ್ತಾಗುತ್ತಿಲ್ಲ. ಯಾಕಂದ್ರೆ ಹಡಗಿನ ಕ್ಯಾಪ್ಟನ್ ಕೂಡ ದಿಕ್ಕು ಕಾಣದಂತೆ ಕಂಗಾಲಾಗಿದ್ದಾರೆ. ಒಟ್ಟಾರೆ ಕಾಂಗ್ರೆಸ್ ಎಂಬ ಹಡಗು ದಿಕ್ಕು ತಪ್ಪಿದ ಹಡಗಿನಂತೆ ಹೇಗೆ ಬೇಕೋ ಹಾಗೆ ಸಾಗುತ್ತಿದೆ.

ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲುಂಡ ಬಳಿಕ ರಾಹುಲ್ ಗಾಂಧಿ ಅಧ್ಯಕ್ಷ ಪದವಿಗೆ ರಾಜೀನಾಮೆ ನೀಡಿದ್ದಾರೆ. ಆದ್ರೆ ಕಾಂಗ್ರೆಸ್ ವರ್ಕಿಂಗ್ ಕಮಿಟಿ ರಾಹುಲ್ ರಾಜೀನಾಮೆ ಅಂಗೀಕಾರ ಮಾಡಿಲ್ಲ. ಸೋಲಿನ ಹೊಣೆಯನ್ನು ಸಾಮೂಹಿಕವಾಗಿ ಹೊರೋಣ, ತಾವು ಅಧ್ಯಕ್ಷರಾಗಿ ಮುಂದುವರಿಯಿರಿ ಎಂದು ಒತ್ತಾಯ ಮಾಡಿದ್ದಾರೆ. ಆದ್ರೆ ಇನ್ನೂ ಕೂಡ ರಾಜೀನಾಮೆ ವಾಪಸ್ ಪಡೆದಿಲ್ಲ. ಅಂಗೀಕಾರವೂ ಆಗಿಲ್ಲ.

ದೇಶದ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಕಮಲದ ಬುಡವನ್ನು ಕಚ್ಚಿದೆ. ಹಾಗಾಗಿ ಸಾಕಷ್ಟು ರಾಜ್ಯ ಘಟಕದ ಹಲವು ಹುದ್ದೆಗಳಿಗೆ ನಾಯಕರು ರಾಜೀನಾಮೆ ನೀಡಿದ್ದಾರೆ. ಆ ರಾಜೀನಾಮೆಗಳೂ ಕೂಡ ಇನ್ನು ಅಂಗೀಕಾರ ಆಗಿಲ್ಲ. ಈ ನಡುವೆ ಕರ್ನಾಟಕ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೂಡ ಸೋಲಿನ ಹೊಣೆ ಹೊತ್ತು ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದ್ದು, ದಿನೇಶ್ ಗುಂಡೂರಾವ್ ಮಾತ್ರ ಅಲ್ಲಗಳೆದಿದ್ದಾರೆ. ನಾನು ರಾಜೀನಾಮೆ ನೀಡಿರುವ ವಿಚಾರ ಸತ್ಯಕ್ಕೆ ದೂರವಾದುದು ಎಂದು ನೇರವಾಗಿಯೇ ತಿರಸ್ಕರಿಸಿದ್ದಾರೆ.

ಸಚಿವ ಸಂಪುಟ ವಿಸ್ತರಣೆ ವೇಳೆ ಏನೋ ಎಡವಟ್ಟಾಗಿದ್ದು ಶುಕ್ರವಾರ ಸಂಜೆ ದಿನೇಶ್ ಗುಂಡೂರಾವ್ ಕಾಂಗ್ರೆಸ್‌ನ ಎಲ್ಲಾ ವಾಟ್ಸಪ್ ಗ್ರೂಪ್‌ಗಳಿಂದ ಹೊರಬಂದಿದ್ದಾರೆ ಎನ್ನಲಾಗಿದೆ. ಜೊತೆಗೆ ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ದಿನೇಶ್ ಗುಂಡೂರಾವ್ ಗರಂ ಆಗಿದ್ದು ಕೆಪಿಸಿಸಿ ಕಚೇರಿಗೂ ಭೇಟಿ ಕೊಟ್ಟಿಲ್ಲ. ಜೊತೆಗೆ ಬೆಂಗಳೂರಿನಲ್ಲೇ ಇದ್ದರೂ‌ ಸಂಪುಟ ವಿಸ್ತರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿಲ್ಲ. ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮೊದಲು ಮಾತನಾಡಿದ ದಿನೇಶ್ ಗುಂಡೂರಾವ್ ಪ್ರಮಾಣ ವಚನಕ್ಕೆ ಗೈರಾಗಿದ್ದು ಯಾಕೆ ಅನ್ನೋ ಅನುಮಾನ ದಟ್ಟವಾಗಿ ಕಾಡ್ತಿದೆ. ಒಟ್ಟಾರೆ ಕಾಂಗ್ರೆಸ್ ನಾಯಕರು ನಾವಿಕನಿಲ್ಲದ ಹಡಗಿನಲ್ಲಿ ದಿಕ್ಕಾಪಾಲಾಗಿ ಪಯಣ ಮಾಡುವ ರೀತಿ ಆಗಿದೆ.

Leave a Reply