ಪಾಕ್ ವಿರುದ್ಧ ವಿಶ್ವದಾಖಲೆ ಸೃಷ್ಟಿ ಮಾಡ್ತಾರಾ ರನ್ ಮಷಿನ್ ಕೋಹ್ಲಿ?

ಡಿಜಿಟಲ್ ಕನ್ನಡ ಟೀಮ್:

ಪ್ರಸಕ್ತ ತಲೆಮಾರಿನ ವಿಶ್ವ ಕ್ರಿಕೆಟ್ ನಲ್ಲಿ ರನ್ ಮಷಿನ್ ಎಂದೇ ಖ್ಯಾತಿ ಪಡೆದಿರೋ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಶ್ವ ದಾಖಲೆಯ ಸನಿಹದಲ್ಲಿದ್ದಾರೆ. ಬ್ಯಾಟಿಂಗ್ ದಂತಕತೆ ಸಚಿನ್ ಅವರ ದಾಖಲೆಯನ್ನು ಮುರಿದು ಹೊಸ ದಾಖಲೆ ನಿರ್ಮಿಸಲು ಕೊಹ್ಲಿ ಸಜ್ಜಾಗಿದ್ದು, ಅದೂ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ವಿಶ್ವಕಪ್ ಪಂದ್ಯದಲ್ಲಿ ಆಗುವ ಅವಕಾಶವಿರೋದು ಇನ್ನಷ್ಟು ಕುತೂಹಲ ಮೂಡಿಸಿದೆ. ಅಂದಹಾಗೆ ಕೊಹ್ಲಿ ಮಾಡಲು ಹೊರಟಿರೋ ದಾಖಲೆ ಏನು ಎಂದರೆ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ನಲ್ಲಿ ವೇಗದ 11 ಸಾವಿರ ರನ್ ಗಳಿಕೆ.

ಸದ್ಯ 221 ಅಂತಾರಾಷ್ಟ್ರೀಯ ಏಕದಿನ ಇನಿಂಗ್ಸ್ ಆಡಿರುವ ವಿರಾಟ್ ಕೊಹ್ಲಿ 10,943 ರನ್ ಗುಡ್ಡೆ ಹಾಕಿದ್ದಾರೆ. ನಾಟಿಂಗ್ ಹ್ಯಾಮ್ ನಲ್ಲಿ ನಡೆಯಬೇಕಿದ್ದ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲೇ ಕೊಹ್ಲಿ ಈ ದಾಖಲೆ ಮಾಡುವ ನಿರೀಕ್ಷೆ ಇತ್ತು. ಆದರೆ ಮಳೆಯಿಂದಾಗಿ ಪಂದ್ಯ ರದ್ದಾದ ಪರಿಣಾಮ ಭಾರತ-ಪಾಕ್ ಪಂದ್ಯದಲ್ಲಿ ಈ ಸಾಧನೆ ಮಾಡುವ ಅವಕಾಶ ಒದಗಿ ಬಂದಿದೆ.

ಕೊಹ್ಲಿ ಇಂದು ನಡೆಯಲಿರುವ ಪಾಕ್ ವಿರುದ್ಧದ ಪಂದ್ಯದಲ್ಲಿ 57 ರನ್ ದಾಖಲಿಸಿದ್ದೇ ಆದರೆ 11 ಸಾವಿರ ರನ್ ಗಡಿ ದಾಟಿದ ವಿಶ್ವದ ಒಂಬತ್ತನೇ ಹಾಗೂ ಭಾರತದ ಮೂರನೇ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಲಿದ್ದಾರೆ. ವೇಗದ 11 ಸಾವಿರ ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಸಚಿನ್ ಅಗ್ರಸ್ಥಾನದಲ್ಲಿದ್ದು, ಸಚಿನ್ 276 ಇನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದರು. ಕೊಹ್ಲಿ ಈ ಪಂದ್ಯದಲ್ಲಿ 11 ಸಾವಿರ ರನ್ ಪೂರೈಸಿದರೆ ಕೊಹ್ಲಿ ಕೇವಲ 222 ಇನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದಂತಾಗಲಿದೆ. ಆ ಮೂಲಕ ಸಚಿನ್ ಅವರಿಗಿಂತ 54 ಇನಿಂಗ್ಸ್ ಗಳ ಅಂತರ ಕಾಯ್ದುಕೊಳ್ಳಲಿದ್ದಾರೆ. ಅಲ್ಲದೆ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ 11 ವರ್ಷಗಳಲ್ಲೇ ಈ ಸಾಧನೆ ಮಾಡಿದಂತಾಗಲಿದೆ.

ಭಾರತ ಹಾಗೂ ಪಾಕಿಸ್ತಾನದ ನಡುವಣ ವಿಶ್ವಕಪ್ ಪಂದ್ಯ ಎಂದರೆ ಅದು ಫೈನಲ್ ಪಂದ್ಯಕ್ಕೂ ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತದೆ. ಈವರೆಗೂ ಭಾರತ ವಿಶ್ವಕಪ್ ನಲ್ಲಿ ಪಾಕಿಸ್ತಾನದ ವಿರುದ್ಧ ಸೋಲನುಭವಿಸದೇ ಅಜೇಯವಾಗುಳಿದಿದ್ದು, ತನ್ನ ಗೆಲುವಿನ ಯಾತ್ರೆ ಮುಂದುವರಿಸುವ ವಿಶ್ವಾಸದಲ್ಲಿದೆ. ಇನ್ನು ಪಾಕಿಸ್ತಾನದಲ್ಲಿ ಮೊಹಮದ್ ಆಮೀರ್ ಸೇರಿದಂತೆ ಇತರೆ ವೇಗದ ದಾಳಿಯನ್ನು ಸಮರ್ಥವಾಗಿ ಎದುರಿಸಬೇಕಾದರೆ ನಾಯಕ ವಿರಾಟ್ ಕೊಹ್ಲಿ ಇನಿಂಗ್ಸ್ ಮಹತ್ವದ್ದಾಗಿದ್ದು, 2015ರ ವಿಶ್ವಕಪ್ ಪಂದ್ಯದಲ್ಲಿ ಕೊಹ್ಲಿ ಪಾಕಿಸ್ತಾನದ ವಿರುದ್ಧ ಶತಕ ಬಾರಿಸಿದ್ದರು. ಈಗ ಮತ್ತೊಮ್ಮೆ ಕೊಹ್ಲಿ ಅಂತಹುದೇ ಮಹತ್ವದ ಇನಿಂಗ್ಸ್ ಆಡಬೇಕು ಎಂಬ ನಿರೀಕ್ಷೆ ಅಭಿಮಾನಿಗಳದ್ದಾಗಿದೆ.

Leave a Reply