ಪ್ರಮಾಣ ವಚನದಲ್ಲೂ ವಿವಾದ ಮಾಡಿಕೊಂಡ ಸಾಧ್ವಿ!

ಡಿಜಿಟಲ್ ಕನ್ನಡ ಟೀಮ್:

ಸಾಧ್ವಿ ಪ್ರಜ್ಞಾ ಸಿಂಗ್…! ವಿವಾದಗಳನ್ನು ಇವರೇ ಹುಡುಕಿಕೊಂಡು ಹೋಗ್ತಾರೋ… ಇಲ್ಲ ವಿವಾದಗಳೇ ಇವರ ಬೆನ್ನಟ್ಟಿ ಬರುತ್ತಾವೊ ಗೊತ್ತಿಲ್ಲ. ಆದರೆ ಇವರು ಏನೇ ಮಾಡಿದರೂ ವಿವಾದ ಮಾತ್ರ ಶೇ.100ರಷ್ಟು ಖಚಿತ.

ಸೋಮವಾರ ಆರಂಭವಾದ ಸಂಸತ್ ಅಧಿವೇಶನದಲ್ಲಿ ಪ್ರಮಾಣ ವಚನ ಸ್ವೀಕರಿಸುವಾಗಲೂ ಸಾದ್ವಿ ವಿವಾದದ ಕೇಂದ್ರ ಬಿಂದುವಾದರು. ಕಾರಣ ಅವರು ಪ್ರಮಾಣ ವಚನ ಸ್ವೀಕರಿಸುವಾಗ ತಮ್ಮ ಹೆಸರನ್ನು ಹೇಳಿದ ರೀತಿಗೆ.

ಹೌದು, ಭೋಪಾಲ್ ಲೋಕಸಭಾ ಕ್ಷೇತ್ರದಿಂದ ಗೆದ್ದಿರುವ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಅವರು ಲೋಕಸಭಾ ಸದಸ್ಯರಾಗಿ ಪ್ರಮಾಣವಚನವನ್ನು ಸಂಸ್ಕೃತದಲ್ಲಿ ಸ್ವೀಕರಿಸಿದರು. ಈ ವೇಳೆ ಸಾಧ್ವಿ ಪ್ರಜ್ಞಾ ಸಿಂಗ್ ತಮ್ಮ ಆಧ್ಯಾತ್ಮಿಕ ಹೆಸರನ್ನು (ಸ್ವಾಮಿ ಪೂರ್ಣಚೇತನಾನಂದ ಅವಧೇಶಾನಂದ ಗಿರಿ) ಉಲ್ಲೇಖಿಸಿದರು. ಇದಕ್ಕೆ ಕಾಂಗ್ರೆಸ್ ಸದಸ್ಯರು ಆಕ್ಷೇಪಿಸಿದರು.

ಚುನಾವಣೆಗೆ ಸ್ಪರ್ಧಿಸುವಾಗ ದಾಖಲೆಯಲ್ಲಿ ಉಲ್ಲೇಖಿಸಿದ ಹೆಸರನ್ನೇ ಹೇಳಿ ಪ್ರಮಾಣವಚನ ಸ್ವೀಕರಿಸುವಂತೆ ಆಗ್ರಹಿಸಿದರು. ಆಗ ಹಂಗಾಮಿ ಸ್ಪೀಕರ್‌ ವೀರೇಂದ್ರ ಕುಮಾರ್ ಅವರು ಸದಸ್ಯೆಯ ಪೂರ್ಣ ಹೆಸರು ಓದಿ ಹೇಳುವಂತೆ ಲೋಕಸಭಾ ಕಾರ್ಯದರ್ಶಿಗೆ ಸೂಚಿಸಿದರು. ಪ್ರತಿಪಕ್ಷ ಸದಸ್ಯರ ಗದ್ದಲದ ನಡುವೆ, ಚುನಾವಣೆ ಆಯೋಗದ ಪ್ರಮಾಣ ಪತ್ರದಲ್ಲಿ ಉಲ್ಲೇಖಿಸಿದ ಹೆಸರೇ ದಾಖಲೆಯಲ್ಲಿ ಉಳಿಯುತ್ತದೆ ಎಂದು ರೂಲಿಂಗ್ ನೀಡಿದರು.

ಮಾಲೆಗಾಂವ್‌ ಸ್ಫೋಟ ಪ್ರಕರಣದಲ್ಲಿ ಆರೋಪ ಹೊತ್ತು ದೋಷಮುಕ್ತರಾದ ಸಾದ್ವಿ ಪ್ರಜ್ಞಾ ಸಿಂಗ್ ಠಾಕೂರ್, ಚುನಾವಣೆ ಸಂದರ್ಭದಲ್ಲಿ ಗೋಡ್ಸೆ ಒಬ್ಬ ದೇಶ ಭಕ್ತ ಎಂದು ಅವರ ಪರ ಬ್ಯಾಟಿಂಗ್ ಮಾಡಿ ವಿವಾದ ಸೃಷ್ಟಿಸಿದರು. ಈ ವಿವಾದದ ಹೊಡೆತ ಬೀಳುತ್ತಿದ್ದಂತೆ ಬಿಜೆಪಿ ನಾಯಕರ ಒತ್ತಡದ ಮೇರೆಗೆ ಕ್ಷಮೆ ಕೋರಿದ್ದರು. ಈಗ ಪ್ರಮಾಣವಚನದಲ್ಲೂ ವಿವಾದ ಮಾಡಿಕೊಂಡಿದ್ದಾರೆ.

ಇನ್ನು ಸಾದ್ವಿ ಸೇರಿದಂತೆ ಬಹುತೇಕ ಬಿಜೆಪಿ ನಾಯಕರು ತಮ್ಮ ಪ್ರಮಾಣ ವಚನ ಸ್ವೀಕಾರ ಅಂತ್ಯದಲ್ಲಿ ಭಾರತ್ ಮಾತಾ ಕಿ ಜೈ ಎಂದು ಕೂಗಿದ್ದು, ವಿಶೇಷ.

Leave a Reply