ಬಿಜೆಪಿ ಕಾರ್ಯಧ್ಯಕ್ಷರಾಗಿ ಜೆಪಿ ನಡ್ಡಾ ಆಯ್ಕೆ! ಕಮಲ ಪಡೆಯ ಮತ್ತೊಂದು ‘ಮಾಸ್ಟರ್ ಬ್ರೈನ್’ ಹಾದಿ ಹೇಗಿದೆ ಗೊತ್ತಾ?

ಡಿಜಿಟಲ್ ಕನ್ನಡ ಟೀಮ್:

ಜಗತ್ ಪ್ರಕಾಶ್ ನಡ್ಡಾ…! ಹಿಮಾಚಲ ಪ್ರದೇಶ ಮೂಲದ ಈ ಬಿಜೆಪಿ ನಾಯಕ, ಇತರೆ ನಾಯಕರಾದ ಅಮಿತ್ ಶಾ, ನಿತಿನ್ ಗಡ್ಕರಿಯಂತೆ ಹೆಚ್ಚು ಸದ್ದು ಮಾಡಿದವರಲ್ಲ. ಆದರೆ ಇವರ ಮಾಸ್ಟರ್ ಬ್ರೈನ್ ಮಾತ್ರ ಬಿಜೆಪಿಯ ಗೆಲುವಿನ ಯಾತ್ರೆಗೆ ತೆರೆಮರೆ ಹಿಂದೆ ಕೆಲಸ ಮಾಡಿದ್ದೇ ಹೆಚ್ಚು. ಬಿಜೆಪಿ ಅಧ್ಯಕ್ಷರಾಗಿ ಅಮಿತ್ ಶಾ ಅವರ ಅವಧಿ ಮುಗಿಯುತ್ತಿದ್ದಂತೆ ಈ ಸ್ಥಾನಕ್ಕೆ ನಡ್ಡಾ ಹೆಸರು ಕೇಳಿ ಬಂದಿತ್ತಾದರೂ ಸದ್ಯ ಅಮಿತ್ ಶಾ ಅದೇ ಸ್ಥಾನದಲ್ಲಿ ಮುಂದುವರಿಯುತ್ತಿರುವ ಕಾರಣ ನಡ್ಡಾ ಅವರನ್ನು ಬಿಜೆಪಿ ಕಾರ್ಯಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಜೆಪಿ ನಡ್ಡಾ ಯಾರು, ಅವರ ಸಾಮರ್ಥ್ಯ ಏನು? ಈವರೆಗೂ ಅವರು ನಡೆದು ಬಂದಿರುವ ಹಾದಿ ಏನು? ಎಂಬುದರ ಬಗ್ಗೆ ಹೆಚ್ಚಿನ ಮಂದಿಗೆ ಗೊತ್ತಿಲ್ಲ. ಹೀಗಾಗಿ ಅವರ ಹಿನ್ನೆಲೆ ಏನು? ಈವರೆಗಿನ ಹಾದಿ ಹೇಗಿದೆ ನೋಡೋಣ ಬನ್ನಿ…

ಜೆಪಿ ನಡ್ಡಾ ಅವರು ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದ್ದು ಆರ್ ಎಸ್ಎಸ್ ಹಾಗೂ ಬಿಜೆಪಿಯ ವಿದ್ಯಾರ್ಥಿ ಸಂಘಟನೆ ಎಬಿವಿಪಿ ಮೂಲಕ. ಇವರ ತಂದೆ ಪಾಟ್ನಾ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದು, ಈ ವಿವಿಯ ಎಬಿವಿಪಿಯಲ್ಲಿ ನಡ್ಡಾ ಸಕ್ರಿಯವಾಗಿ ಭಾಗವಹಿಸಿದರು. ನಂತರ 1993ರಲ್ಲಿ ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಯಾಗುವ ಮೂಲಕ ಚುನಾವಣೆ ರಾಜಕೀಯಕ್ಕೆ ಪ್ರವೇಶಿಸಿದರು. ಮೊದಲ ಬಾರಿಗೆ ಅವರು ಆರೋಗ್ಯ ಸಚಿವರಾದರು. ನಂತರ 2007ರ ಚುನಾವಣೆಯಲ್ಲಿ ಮತ್ತೆ ಪುನರಾಯ್ಕೆಯಾದ ಅವರು ಪ್ರೇಮ್ ಕುಮಾರ್ ಧುಮಲ್ ಅವರ ಸರ್ಕಾರದಲ್ಲಿ ಅರಣ್ಯ, ಪರಿಸರ ಸಚಿವರಾದರು.

2010ರಲ್ಲಿ ನಿತೀನ್ ಗಡ್ಕರಿ ಅವರ ನೇತ್ತ್ವದ ಬಿಜೆಪಿಯ ತಂಡದಲ್ಲಿ ಗುರುತಿಸಿಕೊಂಡ ನಡ್ಡಾ, 2012ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸದೇ ರಾಜ್ಯಸಭೆಗೆ ಆಯ್ಕೆಯಾಗಿ ರಾಷ್ಟ್ರ ರಾಜಕಾರಣದತ್ತ ಮುಖ ಮಾಡಿದರು.

2014ರಲ್ಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ರಾಜನಾಥ್ ಸಿಂಗ್ ಅವರ ಸ್ಥಾನವನ್ನು ತುಂಬಬೇಕಾಗಿತ್ತು. ಆದರೆ ಲೋಕಸಭೆ ಚುನವಣೆ ವೇಳೆ ಉತ್ತರ ಪ್ರದೇಶದಲ್ಲಿ ಅಬೂತಪೂರ್ವ ಯಶಸ್ಸು ಸಾಧಿಸಿದ ಹಿನ್ನೆಲೆಯಲ್ಲಿ ಅಮಿತ್ ಶಾ ಅವರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ಸಿಕ್ಕಿತು. 2014ರಲ್ಲಿ ಮೋದಿ ಸಚಿವ ಸಂಪುಟ ಪುನರಚನೆ ಮಾಡಿದಾಗ ನಡ್ಡಾ ಅವರಿಗೆ ಆರೋಗ್ಯ ಇಲಾಖೆಯ ಜವಾಬ್ದಾರಿ ನೀಡಲಾಯಿತು.

ಸಚಿವ ಸ್ಥಾನ ನೀಡುವುದರ ಜತೆಗೆ ಬಿಜೆಪಿ ಸಂಸದೀಯ ಮಂಡಳಿ ಸದಸ್ಯರನ್ನಾಗಿ ಮಾಡಲಾಯಿತು. ಜತೆಗೆ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳ ವಿಚಾರವಾಗಿ ಅಂತಿಮ ನಿರ್ಧಾರ ಕೈಗೊಳ್ಳುವ ಬಿಜೆಪಿ ಚುನಾವಣಾ ಸಮಿತಿಯ ಸದಸ್ಯರನ್ನಾಗಿಯೂ ಆಯ್ಕೆ ಮಾಡಲಾಯಿತು.

2019ರ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಹಿನ್ನಡೆಯಾಗುವ ಆತಂಕ ಸೃಷ್ಟಿಯಾಗಿತ್ತು, ಹೀಗಾಗಿ ಬಿಜೆಪಿ ಈ ರಾಜ್ಯದ ಉಸ್ತುವಾರಿಯನ್ನು ಗುಜರಾತ್ ಮಾಜಿ ಸಚಿವ ಗೋರ್ಧನ್ ಜಡಾಫಿಯಾ ಹಾಗೂ ನಡ್ಡಾ ಅವರಿಗೆ ವಹಿಸಿತು. ಗೋರ್ಧನ್ ಜತೆ ಸೇರಿಕೊಂಡು ಉತ್ತರ ಪ್ರದೇಶ ಚುನಾವಣೆ ಎದುರಿಸಿದ ನಡ್ಡಾ, ಎಸ್ಪಿ ಬಿಎಸ್ಪಿ ಮಹಾಮೈತ್ರಿ ಹೊರತಾಗಿಯೂ ಬಿಜೆಪಿಗೆ ಶೇ.50ಕ್ಕೂ ಹೆಚ್ಚು ಮತಗಳು ಬೀಳುವಂತೆ ನೋಡಿಕೊಂಡು 64 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಲು ನೇರವಾದರು.

ಮೋದಿ ಅವರ ಎರಡನೇ ಅವಧಿ ಸರ್ಕಾರದ ಸಚಿವ ಸಂಪುಟದಲ್ಲಿ ನಡ್ಡಾ ಹೆಸರು ನಾಪತ್ತೆಯಾದಾಗಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗುವ ಮಾತುಗಳು ಕೇಳಿಬಂದಿದ್ದವು. ಆದರೆ ಮಹರಾಷ್ಟ್ರ ಸೇರಿದಂತೆ ಮೂರು ರಾಜ್ಯಗಳ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಇನ್ನು ಆರು ತಿಂಗಳ ಕಾಲ ಅಮಿತ್ ಶಾ ಬಿಜೆಪಿ ಅದ್ಯಕ್ಷರಾಗಿ ಮುಂದುವರಿಯಲಿದ್ದು, ಹೀಗಾಗಿ ನಡ್ಡಾ ಅವರನ್ನು ಕಾರ್ಯಧ್ಯಕ್ಷರನ್ನಾಗಿ ನೇಮಕ ಮಾಡಿದೆ.

Leave a Reply