ಸಿದ್ರಾಮಯ್ಯ ವರ್ಸಸ್ ದೇವೇಗೌಡ! ಯಾರ ಮಾತಿಗೆ ರಾಹುಲ್ ಬೆಲೆ?

ಡಿಜಿಟಲ್ ಕನ್ನಡ ಟೀಮ್:

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ದೇಹಲಿಗೆ ಪ್ರಯಾಣ ಬೆಳೆಸಿದ್ದು, ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲಿದ್ದಾರೆ. ಸಿದ್ದರಾಮಯ್ಯನವರ ಈ ಭೇಟಿ ರಾಜ್ಯ ರಾಜಕಾರಣದಲ್ಲಿ ನಿರೀಕ್ಷೆ ಮೂಡಿಸಿದೆ. ಕಾರಣ ರಾಹುಲ್ ಗಾಂಧಿ ಮಾಜಿ ಪ್ರಧಾನಿ ದೇವೇಗೌಡರ ಮಾತಿಗೆ ಬೆಲೆ ಕೊಡ್ತಾರೋ ಅಥವಾ ಸಿದ್ದರಾಮಯ್ಯ ಅವರ ಮಾತಿಗೆ ಬೆಲೆ ಕೊಡ್ತಾರೋ ಎಂಬ ಕುತೂಹಲಕ್ಕೆ ಕಾರಣವಾಗಿದೆ.

ಹೌದು, ಕಳೆದ ವಾರ ದೆಹಲಿಗೆ ತೆರಳಿದ್ದ ದೇವೇಗೌಡರು, ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಲೋಕಸಭೆ ಚುನಾವಣೆಯಲ್ಲಿನ ಸೋಲು, ರಾಜ್ಯ ರಾಜಕಾರಣ ಹಾಗೂ ಮೈತ್ರಿ ಸರ್ಕಾರದ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದ್ದರು. ಅಲ್ಲದೆ ದೇವೇಗೌಡರು ಸಿದ್ದರಾಮಯ್ಯ ವಿರುದ್ಧ ದೂರು ನೀಡಿ, ಸಮನ್ವಯ ಸಮಿತಿ ಅಧ್ಯಕ್ಷರನ್ನಾಗಿ ಖರ್ಗೆ ಅವರನ್ನು ಆಯ್ಕೆ ಮಾಡಬೇಕು ಎಂದು ಹೇಳಿದ್ದಾರೆ ಎಂಬ ವರದಿಗಳು ಬಂದಿದ್ದವು.

ಈಗ ಸಿದ್ದರಾಮಯ್ಯ ಹಾಗೂ ರಾಹುಲ್ ಗಾಂಧಿ ಭೇಟಿಯಾಗಿ ಮಾತುಕತೆ ನಡೆಸುತ್ತಿದ್ದು, ದೇವೇಗೌಡರ ವಿರುದ್ಧ ಪ್ರತಿದೂರು ನೀಡುವ ಸಾಧ್ಯತೆ ಇದೆ. ಇನ್ನು ರಾಜ್ಯದಲ್ಲಿ ಜೆಡಿಎಸ್ ಜತೆಗಿನ ಮೈತ್ರಿಯಿಂದಲೇ ಪಕ್ಷಕ್ಕೆ ಹಿನ್ನಡೆಯಾಗಿದೆ, ನಾಯಕರಲ್ಲೂ ಮೈತ್ರಿ ಬಗ್ಗೆ ಅಸಮಾಧಾನವಿದೆ ಎಂಬ ಪಟ್ಟಿಯನ್ನು ಮುಂದಿಡುವ ನಿರೀಕ್ಷೆ ಇದೆ. ಕೇವಲ ರಾಹುಲ್ ಗಾಂಧಿ ಮಾತ್ರವಲ್ಲದೇ ಸಿದ್ದರಾಮಯ್ಯ ಅವರು ಪಕ್ಷದ ಹಿರಿಯ ನಾಯಕರಾದ ಅಹ್ಮದ್ ಪಟೇಲ್, ಎಕೆ ಆಂಟನಿ, ಗುಲಾಂ ನಬಿ ಅಜಾದ್ ಅವರನ್ನು ಭೇಟಿ ಮಾಡಿ ಈ ನಾಯಕರ ಮೂಲಕ ರಾಹುಲ್ ಮೇಲೆ ಒತ್ತಡ ಹೇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಎಲ್ಲ ಬೆಳವಣಿಗೆಗಳ ನಂತರ ರಾಹುಲ್ ಗಾಂಧಿ ಅವರ ನಡೆ ಯಾವ ರೀತಿ ಇರಲಿದೆ ಎಂಬುದು ಸದ್ಯ ಎಲ್ಲರ ಚಿತ್ತ ಆಕರ್ಷಿಸಿದೆ. ದೇವೇಗೌಡರ ಮಾತಿಗೆ ಬೆಲೆ ಕೊಟ್ಟು ರಾಜ್ಯದಲ್ಲಿ ಮಾತ್ರಿ ಗಟ್ಟಿ ಮಾಡಿಕೊಳ್ಳುವತ್ತ ಗಮನಹರಿಸುತ್ತಾರೋ ಅಥವಾ ಸಿದ್ದರಾಮಯ್ಯನವರ ಸಮರ್ಥನೆ ಹಾಗೂ ಪ್ರತಿದೂರುಗಳನ್ನು ಆಧರಿಸಿ ತಮ್ಮ ಮುಂದಿನ ಹೆಜ್ಜೆ ಇಡುತ್ತಾರೋ ಎಂಬ ಕುತೂಹಲ ಮೂಡಿಸಿದೆ.

Leave a Reply