ತ್ರಿವಳಿ ತಲಾಕ್, ಏಕ ಚುನಾವಣೆ, ಎನ್ ಸಿಆರ್ ರಾಷ್ಟ್ರಪತಿ ಕೋವಿಂದ್ ಭಾಷಣದಲ್ಲಿ ಬಂದ ಐದು ವರ್ಷಗಳ ನೀಲನಕ್ಷೆ!

ಡಿಜಿಟಲ್ ಕನ್ನಡ ಟೀಮ್:

ಬಿಜೆಪಿ ನೇತೃತ್ವದ ಎನ್ ಡಿಎ ಎರಡನೇ ಅವಧಿಗೆ ಸರ್ಕಾರ ರಚನೆ ಮಾಡಿದ ನಂತರ ನಡೆಯುತ್ತಿರುವ ಸಂಸತ್ ಅಧಿವೇಶನದ ಉಭಯ ಸದನಗಳನ್ನು ಉದ್ದೇಶಿಸಿ ಗುರುವಾರ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಭಾಷಣ ಮಂಡಿಸಿದ್ದು, ತ್ರಿವಳಿ ತಲಾಕ್ ನಿಷೇಧ, ನಿಖಾ ಹಲಾಲ್, ಏಕರೂಪ ನಾಗರೀಕ ಕಾಯಿದೆ (ಎನ್ ಸಿಆರ್), ಒಂದು ದೇಶ ಒಂದು ಚುನಾವಣೆ ಮತ್ತು ಸರ್ಜಿಕಲ್ ದಾಳಿಯಂತಹ ಪ್ರಮುಖ ವಿಚಾರಗಳನ್ನು ಹೇಳುತ್ತಾ ಮುಂದಿನ ಐದು ವರ್ಷಗಳ ನೀಲನಕ್ಷೆಯನ್ನು ಪರಿಚಯಿಸಿದರು.

ಜುಲೈ 26ರವರೆಗೆ ಬಜೆಟ್ ಅಧಿವೇಶನ ನಡೆಯಲಿದ್ದು, ಜುಲೈ 4ರಂದು ಆರ್ಥಿಕ ಸಮೀಕ್ಷೆಯನ್ನು ಮಂಡನೆ ಮಾಡಲಾಗುವುದು. ಜುಲೈ 5ರಂದು ಆರ್ಥಿಕ ಸಚಿವೆ ನಿರ್ಮಲಾ ಸೀತರಾಮನ್ ಬಜೆಟ್ ಮಂಡನೆ ಮಾಡಲಿದ್ದಾರೆ. ಇವು ಈ ಬಾರಿಯ ಅಧಿವೇಶನದ ಪ್ರಮುಖ ಅಂಶಗಳಾಗಿವೆ. ಇನ್ನು ಉಯ ಸದನಗಳಲ್ಲಿ ತ್ರಿವಳಿ ತಲಾಕ್ ನಿಷೇಧ ಕಾಯ್ದೆ ಜಾರಿ, ಏಕ ಚುನಾವಣೆ, ಸೇರಿದಂತೆ ಪ್ರಮುಖ ವಿಷಯಗಳ ಕುರಿತು ಚರ್ಚೆಯಾಗಲಿದ್ದು, ಈ ಎಲ್ಲ ಅಂಶಗಳ ಬಗ್ಗೆ ಚರ್ಚಿಸಿದ ರಾಷ್ಟ್ರಪತಿ ಭಾಷಣದ ಮುಖ್ಯಂಶಗಳು ಹೀಗಿವೆ…

 • ಲೋಕಸಭಾ ಚುನಾವಣೆಯಲ್ಲಿ ತಮ್ಮ ಮತದಾನದ ಹಕ್ಕು ಚಲಾವಣೆ ಮಾಡಿದ ಮತದಾರರು, ಸ್ಪರ್ಧಿಸಿ ಆಯ್ಕೆಯಾದ ಸಂಸದರಿಗೆ ಅಭಿನಂದನೆಗಳು.ಲೋಕಸಭೆಯ ಅರ್ಧದಷ್ಟು ಸಂಸದರು ಮೊದಲ ಬಾರಿಗೆ ಆಯ್ಕೆಯಾದವರಾಗಿದ್ದಾರೆ. ಇನ್ನು 78 ಮಹಿಳಾ ಸಂಸದರಿದ್ದು, ಇದು ಇವರೆಗಿನ ಗರಿಷ್ಠ ಸಂಖ್ಯೆ. ಇದು ನವ ಭಾರತದ ಪ್ರತೀಕ.
 • ಚುನಾವಣೆಯಲ್ಲಿ ಸುಮಾರು 61 ಕೋಟಿ ಜನರು ತಮ್ಮ ಮತಗಳನ್ನು ಚಲಾವಣೆ ಮಾಡಿದ್ದಾರೆ. ಇದು ಹೊಸ ದಾಖಲೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂಬ ಮಂತ್ರ ಹೊಂದಿರುವ ಸರ್ಕಾರಕ್ಕೆ ಸಂಪೂರ್ಣ ಜನಾದೇಶ ಸಿಕ್ಕಿದೆ.
 • ದೇಶದಲ್ಲಿ ನೀರಿನ ಸಮಸ್ಯೆ ಗಂಭೀರವಾಗುತ್ತಿದ್ದು, ಸರ್ಕಾರ ಈ ವಿಚಾರವನ್ನು ಗಮನ ಹರಿಸಿದ್ದು, ಇದಕ್ಕಾಗಿ ಜಲ ಶಕ್ತಿ ಸಚಿವಾಲಯವನ್ನು ಸ್ಥಾಪಿಸಿರುವುದು ಈ ಸಮಸ್ಯೆ ಬಗೆಹರಿಸಲು ಸರ್ಕಾರ ಉತ್ತಮ ಹೆಜ್ಜೆ ಇಟ್ಟಿದೆ.
 • ಗ್ರಾಮೀಣ ಭಾರತವನ್ನು ಬಲಪಡಿಸಲು, ಹಳ್ಳಿಗಳಲ್ಲಿ ಕೃಷಿ ಉತ್ಪಾದನೆ ಹೆಚ್ಚಿಸಲು 25 ಲಕ್ಷ ಕೋಟಿಯಷ್ಟು ಬಂಡವಾಳವನ್ನು ಮುಂದಿನ ವರ್ಷಗಳಲ್ಲಿ ಹೂಡಿಕೆ ಮಾಡಲಾಗುತ್ತದೆ.
 • ದೇಶದ ಎಲ್ಲ ಹೆಣ್ಣುಮಕ್ಕಳಿಗೆ ಸಮಾನ ಹಕ್ಕು ನೀಡಲು ತ್ರಿವಳಿ ತಲಾಕ್, ನಿಖಾ ಹಲಾಲ್ ನಂತಹ ಪದ್ಧತಿಗಳು ನಿಷೇಧವಾಗಬೇಕು. ಇದಕ್ಕಾಗಿ ಸದನದ ಎಲ್ಲ ಸದಸ್ಯರು ಕೈಜೋಡಿಸಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ. ಇದರಿಂದ ನಮ್ಮ ಹೆಣ್ಣು ಮಕ್ಕಳ ಜೀವನ ಇನ್ನಷ್ಟು ಸುಧಾರಣೆ ಹಾಗೂ ಗೌರವಯುತವಾಗಿರಲಿದೆ.
 • ಪ್ರಧಾನಮಂತ್ರಿ ಮುದ್ರಾ ಯೋಜನೆ ಮೂಲಕ 19 ಕೋಟಿ ಸಾಲ ನೀಡಲಾಗಿದ್ದು, ಇದರಿಂದ ಸ್ವಯಂ ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡಲಾಗಿದೆ. ಈಗ ಈ ಯೋಜನೆಯನ್ನು 30 ಕೋಟಿಗೆ ವಿಸ್ತರಿಸಲಾಗುವುದು.
 • ಕಪ್ಪು ಹಣ ಹಾಗೂ ಭ್ರಷ್ಟಾಚಾರದ ವಿರುದ್ಧದ ಹೋರಾಟ ಇನ್ನಷ್ಟು ತೀವ್ರವಾಗಲಿದೆ.
 • ಮಿಷನ್ ಶಕ್ತಿ ಪರೀಕ್ಷೆ ಯಶಸ್ವಿ ಮೂಲಕ ಭಾರತೀಯ ಬಾಹ್ಯಾಕಾಶ ತಂತ್ರಜ್ಞಾನ ಹಾಗೂ ದೇಶದ ಭದ್ರತಾ ಸಾಮರ್ಥ್ಯಕ್ಕೆ ಹೊಸ ಆಯಾಮ ಸಿಕ್ಕಿದೆ.
 • ದೇಶದ ಜನರ ರಕ್ಷಣೆಗೆ ಸರ್ಕಾರ ಸದಾ ಬದ್ಧವಾಗಿರಲಿದ್ದು, ಈಗಾಗಲೇ ಭಾರತ ಸರ್ಜಿಕಲ್ ದಾಳಿ ಹಾಗೂ ಎರ್ ಸ್ಟ್ರೈಕ್ ಮೂಲಕ ಮಹತ್ವದ ಹೆಜ್ಜೆ ಇಡಲಾಗಿದ್ದು, ಮುಂದಿನ ದಿನಗಳಲ್ಲೂ ಅಗತ್ಯ ಬಿದ್ದರೆ ಇಂತಹ ನಿರ್ಧಾರ ಕೈಗೊಳ್ಳಲು ಭಾರತ ಸಿದ್ಧವಿದೆ.
 • ವಿದೇಶಿಗರು ಭಾರತಕ್ಕೆ ಅಕ್ರಮವಾಗಿ ನುಸುಳುತ್ತಿದ್ದು, ಇದು ದೇಶದ ಭದ್ರತೆಗೆ ಮಾರಕ. ಹೀಗಾಗಿ ನಮ್ಮ ಸರ್ಕಾರ ಅಕ್ರಮ ನುಸುಳುಕೋರರ ಸಮಸ್ಯೆ ಇರುವ ಪ್ರದೇಶದ ಅನುಗುಣಾವಾಗಿ ರಾಷ್ಟ್ರೀಯ ಏಕರೂಪ ನಾಗರೀಕ ಮಸೂದೆಯನ್ನು ಜಾರಿಗೊಳಿಸಲಿದೆ.
 • ದೇಶ ಶೀಘ್ರವಾಗಿ ಅಭಿವೃದ್ಧಿ ಹೊಂದಬೇಕಾದರೆ ಒಂದು ದೇಶ ಒಂದು ಚುನಾವಣೆ ಪರಿಕಲ್ಪನೆ ಅಗತ್ಯವಿದೆ. ಇದರಿಂದ ಪ್ರಗತಿ ಹೆಚ್ಚಲಿದೆ.

Leave a Reply