ಟೀಂ ಇಂಡಿಯಾಗೆ ಕೇಸರಿ ಜೆರ್ಸಿ? ಕಾರಣ ಏನು ಗೊತ್ತಾ?

ಡಿಜಿಟಲ್ ಕನ್ನಡ ಟೀಮ್:

2019ರ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತನ್ನ ಮುಂದಿನ ಎರಡು ಪಂದ್ಯಗಳಲ್ಲಿ ಕೇಸರಿ ಬಣ್ಣದ ಜೆರ್ಸಿಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಇದೆ. ಶನಿವಾರ ನಡೆಯಲಿರುವ ಪಂದ್ಯದಲ್ಲಿ ಭಾರತ ಅಫ್ಘಾನಿಸ್ತಾನ ತಂಡವನ್ನು ಎದುರಿಸಲಿದ್ದು, ನಂತರ ಜು.30ರಂದು ಇಂಗ್ಲೆಂಡ್ ವಿರುದ್ಧ ಆಡಲಿದೆ. ಸದ್ಯದ ಮಾಹಿತಿ ಪ್ರಕಾರ ಟೀಂ ಇಂಡಿಯಾ ಈ ಎರಡೂ ಪಂದ್ಯಗಳಲ್ಲಿ ಹೆಚ್ಚು ಕೇಸರಿ ಇರುವ ಜೆರ್ಸಿಯೊಂದಿಗೆ ಕಣಕ್ಕಿಳಿಯಲಿದೆ. ಇಷ್ಟು ದಿನಗಳ ಕಾಲ ನೀಲಿ ಬಣ್ಣದ ಜೆರ್ಸಿಯಲ್ಲಿ ಆಡುತ್ತಿದ್ದ ಭಾರತ ಈ ಪಂದ್ಯಕ್ಕೆ ಕೇಸರಿ ಬಣ್ಣದ ಜೆರ್ಸಿ ಬಳಸುತ್ತಿರೋದ್ಯಾಕೆ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಅದಕ್ಕೆ ಕಾರಣ ಹೀಗಿದೆ…

ಫುಟ್ಬಾಲ್ ಕ್ರೀಡೆಯಲ್ಲಿ ಹೊಂ ಜೆರ್ಸಿ (ತವರಿನ ಪಂದ್ಯದಲ್ಲಿ ಆಡುವ ಪಂದ್ಯದಲ್ಲಿ ಬಳಸುವ ಜೆರ್ಸಿ), ಅವೇ ಜೆರ್ಸಿ (ತವರಿನ ಹೊರಗೆ ನಡೆಯಲಿರುವ ಪಂದ್ಯಗಳಲ್ಲಿ ಬಳಸುವ ಜೆರ್ಸಿ) ಎಂಬ ಪರಿಕಲ್ಪನೆ ಇದೆ. ಈ ಪರಿಕಲ್ಪನೆಗೆ ಕಾರಣವೂ ಇದೆ ಎರಡು ತಂಡಗಳ ಆಟಗಾರರು ಒಂದೇ ಬಣ್ಣದ ಜೆರ್ಸಿಯನ್ನು ಧರಿಸಿದರೆ ಟಿವಿಯಲ್ಲಿ ನೋಡುವವರಿಗೆ ಗೊಂದಲ ಏರ್ಪಡುತ್ತದೆ ಎಂಬ ಉದ್ದೇಶದೊಂದಿಗೆ ಎರಡು ಜೆರ್ಸಿಗಳನ್ನು ಬಳಸಲಾಗುತ್ತದೆ. ಈಗ ಐಸಿಸಿ ಕೂಡ ಇದೇ ಪರಿಕಲ್ಪನೆಯಿಂದ ಪ್ರೇರಿತಗೊಂಡಿದ್ದು, ವಿಶ್ವಕಪ್ ನಲ್ಲಿ ಎರಡು ಜೆರ್ಸಿ ಬಳಕೆಗೆ ಅವಕಾಶ ಮಾಡಿಕೊಟ್ಟಿದೆ.

ಸದ್ಯ ಇಂಗ್ಲೆಂಡ್ ತಂಡ ನೀಲಿ ಜೆರ್ಸಿ ಬಳಸುತ್ತಿದೆ. ಈ ಟೂರ್ನಿಯನ್ನು ಇಂಗ್ಲೆಂಡ್ ಆತಿಥ್ಯ ವಹಿಸಿರುವುದರಿಂದ ಇಲ್ಲಿ ನಡೆಯಲಿರುವ ಎಲ್ಲ ಪಂದ್ಯಗಳು ಇಂಗ್ಲೆಂಡ್ ಗೆ ತವರಿನ ಪಂದ್ಯಗಳೇ ಆಗಿರುತ್ತದೆ. ಹಾಗಾಗಿ ಇಂಗ್ಲೆಂಡ್ ತನ್ನ ನೀಲಿ ಬಣ್ಣದ ಜೆರ್ಸಿಯೊಂದಿಗೆ ಕಣಕ್ಕಿಳಿಯಲಿದೆ. ಅಂದಹಾಗೆ ಭಾರತಕ್ಕೆ ತವರಿನ ಹೊರಗಡೆ ನಡೆಯುತ್ತಿರುವ ಪಂದ್ಯವಾಗಿರುವುದರಿಂದ ಈ ಪಂದ್ಯದಲ್ಲಿ ಹೆಚ್ಚು ಕೇಸರಿ ಹಾಗೂ ಸ್ವಲ್ಪ ನೀಲಿ ಬಣ್ಣವಿರುವ ಜೆರ್ಸಿಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಇದೆ.

ಇನ್ನು ಪಾಕಿಸ್ತಾನ, ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ ತಂಡಗಳು ಹಸಿರು ಬಣ್ಣದ ಜರ್ಸಿ ಹೊಂದಿರುವುದರಿಂದ ಈ ತಂಡಗಳು ಕೂಡ ಎರಡು ಜೆರ್ಸಿಗಳನ್ನು ಹೊಂದಿವೆ. ಅಲ್ಲದೆ ಅವುಗಳನ್ನು ಅಧಿಕೃತವಾಗಿ ಪ್ರಕಟಿಸಿವೆ. ಆದರೆ ಆಸ್ಟ್ರೇಲಿಯಾ (ಹಳದಿ), ನ್ಯೂಜಿಲೆಂಡ್ (ಕಪ್ಪು) ಹಾಗೂ ವೆಸ್ಟ್ ಇಂಡೀಸ್ (ಕಂದು ಬಣ್ಣ) ವಿಭಿನ್ನ ಬಣ್ಣಗಳನ್ನು ಹೊಂದಿದ್ದು, ಈ ಬಣ್ಣವನ್ನು ಇತರೆ ದೇಶಗಳು ಜೆರ್ಸಿಯಲ್ಲಿ ಬಳಸದ ಕಾರಣ ಈ ತಂಡಗಳು ಎರಡು ಜೆರ್ಸಿ ಹೊಂದುವ ಅಗತ್ಯವಿಲ್ಲ.

ಟೀಂ ಇಂಡಿಯಾದ ಕೇಸರಿ ಜೆರ್ಸಿ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತ ಚರ್ಚೆ ನಡೆಯುತ್ತಿದೆಯಾದರೂ ಕಳೆದ ವಾರದವರೆಗೂ ಟೀಂ ಇಂಡಿಯಾ ಆಟಗಾರರು ಈ ಹೊಸ ಜೆರ್ಸಿಯನ್ನು ನೋಡಿಲ್ಲ. ಭಾರತ ಈ ಹೊಸ ಜೆರ್ಸಿಯನ್ನು ಅಧಿಕೃತವಾಗಿ ಬಿಡುಗಡೆಯನ್ನು ಮಾಡಿಲ್ಲ. ಹೀಗಾಗಿ ಈ ಜೆರ್ಸಿ ಕುರಿತು ಕುತೂಹಲ ಹೆಚ್ಚಾಗಿದೆ.

Leave a Reply