ರೋಷನ್ ಬೇಗ್‌ ಮುಂದೆ ಇರೋದು ಇದೊಂದೇ ಹಾದಿ..!?

ಡಿಜಿಟಲ್ ಕನ್ನಡ ಟೀಮ್:

ಕಾಂಗ್ರೆಸ್ ಪಕ್ಷದಿಂದ ಶಿವಾಜಿನಗರ ಶಾಸಕ ರೋಷನ್ ಬೇಗ್ ಅವರನ್ನು ಅಮಾನತು ಮಾಡಲಾಗಿದೆ. ಲೊಕಸಭಾ ಚುನಾವಣೆಯಲ್ಲಿ ಹೀನಾಯ ಸೋಲಿಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ‌ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರೇ ಕಾರಣ ಎಂದು ಟೀಕೆ ಮಾಡಿದ್ದ ಕಾರಣಕ್ಕೆ ರೋಷನ್ ಬೇಗ್ ಅವರಿಗೆ ರಾಜ್ಯ ಕಾಂಗ್ರೆಸ್ ನೋಟಿಸ್ ಜಾರಿ ಮಾಡಿತ್ತು. ಆದ್ರೆ ಯಾವಾಗ ನೋಟಿಸ್‌ಗೆ ಉತ್ತರ ಕೊಡದೆ ದರ್ಪ ಮೆರೆದರೋ ಕ್ರಮ ಕೈಗೊಳ್ಳುವಂತೆ ಎಐಸಿಸಿಗೆ ಶಿಫಾರಸು ಮಾಡಲಾಗಿತ್ತು. ನಿನ್ನೆ ಶಿಫಾರಸಿಗೆ ಒಪ್ಪಿಗೆ ಕೊಟ್ಟಿರುವ ಎಐಸಿಸಿ ಅಮಾನತು ಮಾಡಿ ಆದೇಶ ಮಾಡಿದೆ.

ಮಾಜಿ ಸಿಎಂ ಸಿದ್ದರಾಮಯ್ಯ ಸದ್ದಿಲ್ಲದೇ ದೆಹಲಿ ಪ್ರವಾಸ ಕೈಗೊಂಡಿದ್ದರು. ಮಾಧ್ಯಮ ಮಂದಿ ಪ್ರವಾಸದ ಹಿಂದಿನ ಉದ್ದೇಶ ಕೆಣಕಿದಾಗಲೂ ವೈಯಕ್ತಿಕ ಕಾರಣ ಎಂದು ಹೇಳುವ ಮೂಲಕ ಗುಟ್ಟನ್ನು ತನ್ನೊಳಗೆ ಮುಚ್ಚಿಟ್ಟಿದ್ದರು. ಆದ್ರೆ ರೋಷನ್ ಬೇಗ್ ಅವರನ್ನು ಪಕ್ಷದಿಂದ ಅಮಾನತು ಮಾಡುವಂತೆ ಒತ್ತಡ ಹೇರಲು ಸಿದ್ದರಾಮಯ್ಯ ದೆಹಲಿಗೇ ಆಗಮಿಸಿದ್ರು ಅನ್ನೋ ಮಾಹಿತಿ ಇದೀಗ ಬಹಿರಂಗ ಆಗಿದೆ.

ಮೊನ್ನೆ ಎಐಸಿಸಿ ಶಿಸ್ತು ಸಮಿತಿ ಅಧ್ಯಕ್ಷರಾಗಿರುವ ಎ.ಕೆ ಆ್ಯಂಟನಿ ಅವರನ್ನು ಭೇಟಿ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಕೆಲವೇ ಗಂಟೆಗಳಲ್ಲಿ ಅಮಾನತು ಆದೇಶ ಹೊರಬೀಳುವಂತೆ ಮಾಡಿದ್ದಾರೆ. ಒಂದು ವೇಳೆ ಸಿದ್ದರಾಮಯ್ಯ ದೆಹಲಿ ಪ್ರವಾಸ ರೋಷನ್ ಬೇಗ್ ಅವರನ್ನು ಅಮಾನತು‌ ಮಾಡಿಸಲು ಅನ್ನೋದು ಗೊತ್ತಾಗಿದ್ದರೆ ರೋಷನ್ ಬೇಗ್ ಕೂಡ ಮತ್ತೊಂದು ದಿಕ್ಕಿನಿಂದ ದಾಳ ಉರುಳಿಸುತ್ತಿದ್ದರು. ಅದೇ ಕಾರಣಕ್ಕಾಗಿ ಸಿದ್ದರಾಮಯ್ಯ ತನ್ನ ಆಪ್ತರಿಗೂ ಉದ್ದೇಶದ ವಾಸನೆ ಬಾರದಂತೆ ಎಚ್ಚರ ವಹಿಸಿದ್ದರು ಎನ್ನಲಾಗ್ತಿದೆ. ಇದೀಗ ಸಿದ್ದರಾಮಯ್ಯ ಉದ್ದೇಶ ಫಲಪ್ರದವಾಗಿದೆ. ಆದ್ರೆ ರೋಷನ್ ಬೇಗ್ ಮುಂದೇನು ಮಾಡ್ತಾರೆ ಅನ್ನೋ ಪ್ರಶ್ನೆ ಎದುರಾಗಿದೆ.

ರೋಷನ್ ಬೇಗ್ ರಾಜಕಾರಣಿಯಾಗಿ ಏನನ್ನೂ ಸಂಪಾದಿಸುವ ಉದ್ದೇಶವಿಲ್ಲ. ಈಗಾಗಲೇ ರೋಷನ್ ಬೇಗ್ ಅಗರ್ಭ ಶ್ರೀಮಂತ ಆಗಿದ್ದು ಅಧಿಕಾರ ತನ್ನಲ್ಲಿ ಇರಬೇಕು ಇಚ್ಛಿಸುವ ವ್ಯಕ್ತಿ. ಕಾಂಗ್ರೆಸ್‌ನಿಂದ ಹೊರಬಿದ್ದಿದ್ದು, ಐಎಂಎ ಕೇಸ್‌ನಿಂದ ಇಡೀ ಮುಸ್ಲಿಂ ಸಮುದಾಯಕ್ಮೆ ವಂಚನೆ ಎಸಗಲು ರೋಷನ್ ಬೇಗ್ ಸಾಥ್ ನೀಡಿದ್ದಾರೆ ಅನ್ನೋದು ಇಡೀ ಶಿವಾಜಿನಗರ ಕ್ಷೇತ್ರ ಸೇರಿದಂತೆ ರಾಜ್ಯದ ಇತರೆ ಭಾಗದ ಮುಸ್ಲಿಂ ಜನಾಂಗದಲ್ಲಿ ಕೋಪಾಕ್ರೋಷಕ್ಕೆ ಕಾರಣವಾಗಿದೆ. ಪರಿಸ್ಥಿತಿ ಹೀಗಿರುವಾಗ ಶಾಸಕ ರೋಷನ್ ಬೇಗ್ ಏನ್ಮಾಡ್ತಾರೆ ಅನ್ನೋ ಪ್ರಶ್ನೆ ಸಾಮಾನ್ಯವಾಗಿ ಮೂಡಲಿದೆ. ಇದಕ್ಕೆ ಕಾಣ್ತಿರೋ ಉತ್ತರ ಮಾತ್ರ ಒಂದೆ ಅದು ಜೆಡಿಎಸ್ ಪಕ್ಷ, ಮಾಜಿ ಪ್ರಧಾನಿ ದೇವೇಗೌಡರು.

ರೋಷನ್ ಬೇಗ್ ಕಾಂಗ್ರೆಸ್ ಪಕ್ಷದಲ್ಲಿ ಇರೋದು ಬೇಡ ಅನ್ನೋ ಉದ್ದೇಶದಿಂದಲೇ ಕಾಂಗ್ರೆಸ್ ಪಕ್ಷದ ನಾಯಕರ ವಿರುದ್ಧ ವಾಗ್ದಾಳಿ ಮಾಡಿದ್ದಾರೆ ಅನ್ನೋದು ಖಚಿತ. ಇಲ್ಲದಿದ್ದರೆ ಆ ಮಟ್ಟದಲ್ಲಿ ವಾಗ್ದಾಳಿ ಮಾಡೋದು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಜಮೀರ್ ದರ್ಬಾರ್ ಶುರುವಾಗಿದ್ದು, ಸಿದ್ದರಾಮಯ್ಯ ಅವರೂ ಕೂಡ ಜಮೀರ್ ಎದುರು ತಂಡ ಹೊಡೆದು ಹೋಗಿದ್ದಾರೆ. ಇದೇ ಕಾರಣಕ್ಕೆ ರೋಷನ್ ಬೇಗ್ ಬೆಂಕಿಯುಂಡೆ ಆಗಿದ್ದಾರೆ. ಇದೀಗ ಕಾಂಗ್ರೆಸ್ ರೋಷನ್ ಬೇಗ್‌ ಅವರನ್ನು ಅಮಾನತು ಮಾಡಿದ್ದು, ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದತ್ತ ಮುಖ ಮಾಡೋದು ಅನಿವಾರ್ಯ ಆಗಿದೆ.

ಮಾಜಿ ಪ್ರಧಾನಿ ದೇವೇಗೌಡರನ್ನು ಮುಂದಿನ‌ ದಿನಗಳ ರಾಜಕೀಯ ಲೆಕ್ಕಾಚಾರ ಮಾಡಿದ್ರೆ ಮಾತ್ರ ರಾಜಕಾರಣದಲ್ಲಿ ಉಳಿಯ ಬಹುದಾಗಿದೆ. ಇಲ್ಲದಿದ್ದರೆ ಐಎಂಎ ಸೇರಿದಂತೆ ಬೇರೆ ಬೇರೆ ವಿಚಾರದಲ್ಲಿ ರೋಷನ್ ಬೇಗ್ ಸಂಕಷ್ಟಕ್ಕೆ ಸಿಲುಕೋದು ಕಾಮನ್ ಎನ್ನಲಾಗ್ತಿದೆ. ಬಿಜೆಪಿ ಪಕ್ಷಕ್ಕೆ ರೋಷನ್ ಬೇಗ್ ಸೇರಬಹುದಾ ಅನ್ನೋ ಪ್ರಶ್ನೆಯೂ ನಿಮ್ಮಲ್ಲಿ ಮೂಡಬಹುದು. ಆದರೆ ಆರ್‌ಎಸ್‌ಎಸ್ ನಾಯಕನ ಹತ್ಯೆ ಪ್ರಕರಣದಲ್ಲಿ ರೋಷನ್ ಬೇಗ್ ಅವರ ನೆರಳು ಇರಬಹುದು ಅನ್ನೋದು ಸಂಘ ಪರಿವಾರದ ಸಣ್ಣ ಅನುಮಾನ. ಆ ಕಾರಣಕ್ಕೆ ಬಿಜೆಪಿ ಸೇರ್ಪಡೆಗೆ ಕಮಲ ಪಾಳಯ ಒಪ್ಪೋದು ಅನುಮಾನ. ರಾಜಕೀಯ ಲಾಭ ನಷ್ಟದ ಲೆಕ್ಕಾಚಾರದಲ್ಲಿ ಒಪ್ಪಿಕೊಂಡರೂ ಅಚ್ಚರಿಯಿಲ್ಲ ಎನ್ನಲಾಗ್ತಿದೆ. ಒಟ್ಟಾರೆ ಕಾಂಗ್ರೆಸ್ ಬಾಗಿಲು ಜಮೀರ್ ಇರುವ ತನಕ ರೋಷನ್ ಬೇಗ್ ಪಾಲಿಗೆ ಮುಂಚಿದಂತೆ ಅನ್ನೋದ್ರಲ್ಲಿ ಎರಡನೇ ಮಾತೇ ಇಲ್ಲ.

Leave a Reply