ಯೋಗ ಮಾಡಿ ಮಧ್ಯಂತರ ಚುನಾವಣೆ ಬಾಂಬ್ ಸಿಡಿಸಿದ ದೊಡ್ಡ ಗೌಡ್ರು!

ಡಿಜಿಟಲ್ ಕನ್ನಡ ಟೀಮ್:

ರಾಜ್ಯ ದೋಸ್ತಿ ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಆಗಾಗ್ಗೆ ಮಾತುಗಳು ಕೇಳಿಬರುತ್ತಿದ್ದರೂ ಇಂದು ಮಾಜಿ ಪ್ರಧಾನಿ ದೇವೇಗೌಡರು ಮಧ್ಯಂತರ ಚುನಾವಣೆ ಬಗ್ಗೆ ನೀಡಿರುವ ಹೇಳಿಗೆ ಈ ಮಾತುಗಳು ನಿಜ ಎನ್ನುವಂತೆ ಮಾಡಿದೆ.

ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಪದ್ಮನಾಭನಗರ ನಿವಾಸದಲ್ಲಿ ಯೋಗಾಭ್ಯಾಸ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯುವುದರ ಬಗ್ಗೆ ಯಾವುದೇ ಸಂಶಯ ಇಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್ ಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಲೋಕಸಭೆ ಚುನಾವಣೆ ಸೋಲಿಗೆ ಜೆಡಿಎಸ್ ಜತೆಗಿನ ಮೈತ್ರಿಯೇ ಕಾರಣ ಎಂಬ ಆರೋಪ, ಪಕ್ಷದ ಶಾಸಕರು ಮೈತ್ರಿ ವಿಚಾರವಾಗಿ ಅಪಸ್ವರ ಎತ್ತುತ್ತಿರುವುದರಿಂದ ಬೇಸತ್ತಿರುವ ದೇವೇಗೌಡರು ಈ ಎಚ್ಚರಿಕೆ ಸಂದೇಶ ರವಾನಿಸಿದ್ದು, ಜೆಡಿಎಸ್ ಎಲ್ಲದಕ್ಕೂ ಸಿದ್ಧವಿದೆ. ನಿಮಗೆ ಅಧಿಕಾರ ಬೇಕೋ ಬೇಡವೋ ಎಂಬುದನ್ನು ತೀರ್ಮಾನಿಸಿ ಎಂಬ ಖಡಕ್ ಸಂದೇಶ ರವಾನಿಸಿದ್ದಾರೆ. ಈ ವೇಳೆ ದೇವೇಗೌಡರು ಹೇಳಿದ್ದಿಷ್ಟು…

‘ಕಾಂಗ್ರೆಸ್ ಮುಖಂಡರಿಗೆ ಸರ್ಕಾರ ನಡೆಸಬೇಕೆಂಬ ಮನಸ್ಸು ಇದೆಯೋ ಇಲ್ಲವೋ ನನಗೆ ಅರ್ಥವಾಗುತ್ತಿಲ್ಲ. ಪ್ರತಿಯೊಂದಕ್ಕೂ ಕ್ರಿಯೆಗೆ ಪ್ರತಿಕ್ರಿಯೆ ಎಂಬಂತೆ ಮಾತನಾಡುತ್ತಿದ್ದಾರೆ. ಇದರ ಅಗತ್ಯವಾದರೂ ಏನಿದೆ? ಸಮ್ಮಿಶ್ರ ಸರ್ಕಾರ ಎಷ್ಟು ದಿನ ಇರುತ್ತೋ ಯಾರಿಗೂ ಗೊತ್ತಿಲ್ಲ. ಎಲ್ಲವೂ ಕಾಂಗ್ರೆಸ್ ನಾಯಕರ ಕೈಯಲ್ಲೇ ಇದೆ. ಸಾರ್ವತ್ರಿಕ ಚುನಾವಣೆ ಬಳಿಕ ಕಾಂಗ್ರೆಸ್ ಸ್ವಲ್ಪ ಶಕ್ತಿಯನ್ನು ಕಳೆದುಕೊಂಡಿದೆ. ಆದರೂ ನಾವು ಎಲ್ಲವನ್ನೂ ಸಹಿಸಿಕೊಂಡು ಬಂದಿದ್ದೇವೆ.

ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡ ವೇಳೆ ಯಾವುದೇ ಪಕ್ಷಕ್ಕೂ ಸ್ಪಷ್ಟ ಜನಾದೇಶ ಬರಲಿಲ್ಲ. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಬಾರದೆಂಬ ಕಾರಣಕ್ಕೆ ಕಾಂಗ್ರೆಸ್ ನಾಯಕರು ಮೈತ್ರಿ ಮಾಡಿಕೊಳ್ಳಲು ಓಡೋಡಿ ಬಂದರು. ಸರ್ಕಾರ ರಚನೆ ಮಾಡಿ ಎಂದು ಅವರ ಬಳಿ ನಾವೇನು ಹೋಗಿದ್ದೇವಾ? ಸರ್ಕಾರ ರಚನೆ ಮಾಡಬೇಕೆಂಬ ಇಚ್ಛೆ ನಮಗೇನು ಇರಲಿಲ್ಲ. ಈ ಬಗ್ಗೆ ನಾವು ಯಾರೊಬ್ಬರ ಬಳಿಯೂ ಚರ್ಚೆ ಮಾಡಲಿಲ್ಲ. ದೆಹಲಿ ನಾಯಕರು ಬಂದು ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕೆಂಬ ಕಾರಣಕ್ಕಾಗಿ ನಮ್ಮ ಜತೆ ಮೈತ್ರಿ ಮಾಡಿಕೊಂಡರು.

ಜೆಡಿಎಸ್ ಜತೆ ಮೈತ್ರಿ ಮುಂದುವರೆದರೆ ಕಾಂಗ್ರೆಸ್ ಪಕ್ಷದ ಸಂಘಟನೆ ಮತ್ತು ಶಕ್ತಿ ಕುಂದುತ್ತದೆ ಎಂಬ ಸಂಕಟ ಕೆಲವರಲ್ಲಿ ಇದೆ. ಸರ್ಕಾರ ಸುಭದ್ರವಾಗಿರಲಿ ಎಂಬ ಕಾರಣಕ್ಕೆ ನಮಗೆ ಸಿಗಬೇಕಾದ ಒಂದು ಮಂತ್ರಿ ಸ್ಥಾನವನ್ನು ಕಾಂಗ್ರೆಸ್‍ನವರು ತೆಗೆದುಕೊಂಡಿದ್ದಾರೆ. ಮೂರನೇ ಒಂದು ನಿಯಮವೂ ಕೂಡ ಪಾಲನೆಯಾಗುತ್ತಿಲ್ಲ. ಆದರೂ ನಾನು ಎಲ್ಲವನ್ನೂ ಸಹಿಸಿಕೊಂಡು ಹೋಗುತ್ತಿದ್ದೇನೆ. ಈವರೆಗೂ ಸರ್ಕಾರದ ಬಗ್ಗೆ ನಾವು ಒಂದೇ ಒಂದು ಮಾತನ್ನು ಕೂಡ ಆಡಿಲ್ಲ. ಆದರೂ ಕಾಂಗ್ರೆಸ್ ನಾಯಕರ ಮಾತುಗಳು ಮಾತ್ರ ನಿಲ್ಲುತ್ತಿಲ್ಲ.

ಕಾಂಗ್ರೆಸ್‍ನವರಿಗೆ ಯಡಿಯೂರಪ್ಪ ಮುಖ್ಯಮಂತ್ರಿಯಾಗ ಬಾರದಿತ್ತು. ಅದಕ್ಕಾಗಿಯೇ ನಮ್ಮ ಬಳಿ ಓಡಿ ಬಂದು ಸರ್ಕಾರ ರಚನೆ ಮಾಡಲು ಮುಂದಾದರು. ನಾನು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡಿ ಎಂದು ಹೇಳಿದ್ದೆ. ಆದರೆ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಲಿ ಎಂದು ಅವರೇ ಮನವಿ ಮಾಡಿಕೊಂಡರು.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಹಿನ್ನಡೆಯಾಗಲು ಜೆಡಿಎಸ್ ಹೇಗೆ ಕಾರಣವಾಯಿತು ಎಂಬುದು ತಿಳಿಯುತ್ತಿಲ್ಲ. ಹಾಗೇನಾದರೂ ಇದ್ದರೆ ಅದನ್ನು ಬಹಿರಂಗವಾಗಿ ಹೇಳಬಹುದು. ನಿಮ್ಮ ಸಂಘಟನೆಗೆ ನಾವು ಎಲ್ಲಿಯೂ ಅಡ್ಡಿಪಡಿಸುತ್ತಿಲ್ಲ. ಆದರೂ ಇಂತಹ ಅನುಮಾನ ಏಕೆ ಮೂಡಿದೆ?

ಇಲ್ಲಿಯವರೆಗೂ ಮೈತ್ರಿ ಧರ್ಮದ ಪಾಲನೆಯನ್ನು ಮೀರದೆ ಎಲ್ಲವನ್ನೂ ಸಹಿಸಿಕೊಂಡಿದ್ದೇನೆ. ಹಾಲಿ ಸಂಸದರಿರುವ ಕ್ಷೇತ್ರ ನಮಗೆ ಬೇಡ ಎಂದಿದ್ದೇವೆ. ತುಮಕೂರು ಕ್ಷೇತ್ರವನ್ನು ನಾವು ಕೇಳಿಯೇ ಇರಲಿಲ್ಲ. ಕಾಂಗ್ರೆಸ್ ಸೋತಿರುವ ಕ್ಷೇತ್ರವನ್ನು ಕೇಳಿಕೊಂಡಿದ್ದೆ. ಆದರೆ ಕಾಂಗ್ರೆಸ್ ಸೋತಿರುವ ಕ್ಷೇತ್ರವನ್ನು ನೀಡುವ ಬದಲು ಹಾಲಿ ಸಂಸದರಿರುವ ಕ್ಷೇತ್ರವನ್ನು ನೀಡಿತು.

ಮೈಸೂರಿಗೋಸ್ಕರ ತುಮಕೂರು ಕ್ಷೇತ್ರವನ್ನು ಬಿಟ್ಟು ಕೊಟ್ಟರು. ಈಗ ಫಲಿತಾಂಶ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತು. ಸೋತ ನಂತರ ಇದರ ಬಗ್ಗೆ ಚರ್ಚೆ ಅಗತ್ಯವಿಲ್ಲ. ರಾಜಕಾರಣದಲ್ಲಿ ಅನೇಕ ಏಳು ಬೀಳುಗಳು ಇರುತ್ತವೆ. ನನ್ನ ಜತೆಯಲ್ಲೇ ಇದ್ದು ಜತೆಯಲ್ಲೇ ಬೆಳೆದು ನನ್ನನ್ನು ಬಿಟ್ಟು ಹೋಗಿದ್ದಾರೆ. ಆದರೂ ಧೃತಿಗೆಡದ ನಾನು ಮುಂದೆ ಬಂದಿದ್ದೇನೆ. ಇವೆಲ್ಲವೂ ಸರ್ವೇ ಸಾಮಾನ್ಯ.’

Leave a Reply