ನಾವಂತೂ ಕೊಟ್ಟ ಮಾತು ತಪ್ಪೋದಿಲ್ಲ, ದೇವೇಗೌಡರು ತಲೆಕೆಡಿಸಿಕೊಳ್ಳೋದು ಬೇಡ: ಡಿಕೆಶಿ

ಡಿಜಿಟಲ್ ಕನ್ನಡ ಟೀಮ್:

ಕೊಟ್ಟ ಮಾತಿಗೆ ನಾನಾಗಲಿ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರಾಗಲಿ ಎಂದಿಗೂ ತಪ್ಪುವುದಿಲ್ಲ. ಹೀಗಾಗಿ ದೇವೇಗೌಡರು ತಲೆಕೆಡಿಸಿಕೊಳ್ಳುವುದು ಬೇಡ. ನಮ್ಮ ಸರ್ಕಾರ ಸುಭದ್ರ ಎಂದು ಜಲಸಂಪನ್ಮೂಲ, ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.

ರಾಜ್ಯದಲ್ಲಿ ಮೈತ್ರಿ ಸರ್ಕಾರ ಎಷ್ಟು ದಿನ ಉಳಿಯುತ್ತದೋ ಗೊತ್ತಿಲ್ಲ. ಮಧ್ಯಂತರ ಚುನಾವಣೆ ನಿಶ್ಚಿತ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ದೇವೇಗೌಡರು ಅಸಮಾಧಾನ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಸಚಿವರು ಹೇಳಿದ್ದಿಷ್ಟು:

‘ಕೊಟ್ಟ ಮಾತಿಗೆ ನಮ್ಮ ಪಕ್ಷ ಬದ್ಧ. ನಾನಾಗಲಿ, ರಾಹುಲ್ ಗಾಂಧಿ ಅವರಾಗಲಿ ಮಾತು ತಪ್ಪುವುದಿಲ್ಲ. ದೇವೇಗೌಡರು ಯಾವ ಅರ್ಥದಲ್ಲಿ ಈ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. ಈ ಸರ್ಕಾರ ಸುಭದ್ರವಾಗಿರಲಿದೆ. ಈ ಬಗ್ಗೆ ನನಗೆ ನಂಬಿಕೆ ಇದೆ.’

ನಮ್ಮ ಪಕ್ಷ ಕುಮಾರಸ್ವಾಮಿ ಅವರನ್ನು ಐದು ವರ್ಷ ಮುಖ್ಯಮಂತ್ರಿಯನ್ನಾಗಿ ಮಾಡಲು ತೀರ್ಮಾನಿಸಿ, ಮೈತ್ರಿ ಮಾಡಿಕೊಂಡಿದೆ. ನಾವು ಅದಕ್ಕೆ ಬದ್ಧವಾಗಿರುತ್ತೇವೆ. ಬಿಜೆಪಿಯವರು ನಮ್ಮ ಸರ್ಕಾರ ತೆಗೆಯಲು ಪಾಪ ಬಹಳ ಪ್ರಯತ್ನ ಪಡುತ್ತಿದ್ದಾರೆ. ಇತ್ತೀಚೆಗೆ ಯಡಿಯೂರಪ್ಪನವರು ನಾವು ಸರ್ಕಾರ ಬೀಳಿಸಲು ಯಾವುದೇ ಪ್ರಯತ್ನ ಮಾಡುವುದಿಲ್ಲ ಅಂತ ಹೇಳಿದ್ದಾರೆ. ಇಷ್ಟು ದಿನ ಸರ್ಕಾರ ಕೆಳಗಿಳಿಸುತ್ತೇವೆ. ಸರ್ಕಾರ ಮುಳುಗಿಹೋಗಿದೆ ಎನ್ನುತ್ತಿದ್ದರು. ಈಗ ನಾವು ಯಾವುದಕ್ಕೂ ಕೈಹಾಕಲ್ಲ ಎಂದಿದ್ದಾರೆ. ಹೀಗಾಗಿ ದೇವೇಗೌಡರು ತಲೆಕೆಡಿಸಿಕೊಳ್ಳಬಾರದು.’

‘ನಮ್ಮ ಪಕ್ಷದ ವಿಚಾರವಾಗಿ ಯಾರೂ ಏನನ್ನೂ ಹೇಳಬಾರದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾಯರು ಆದೇಶ ನೀಡಿದ್ದಾರೆ. ಅವರ ಮಾತಿಗೆ ಬೆಲೆ ಕೊಟ್ಟು ನಾನು ಬಾಯಿಗೆ ಬೀಗ ಹಾಕಿಕೊಂಡು, ಸೆಲ್ಲೊ ಟೇಪ್ ಅಂಟಿಸಿಕೊಂಡಿದ್ದೇನೆ. ಪಕ್ಷದ ವಿಚಾರವಾಗಿ ದಿನೇಶ್ ಗುಂಡುರಾಯರು, ವರಿಷ್ಠರು ಮಾತನಾಡುತ್ತಾರೆ.’

‘ಸರ್ಕಾರದಲ್ಲಿ ಯಾವ ಅಸಮಾಧಾನವೂ ಇಲ್ಲ. ನಮ್ಮ ಸರ್ಕಾರ ಗಟ್ಟಿಯಾಗಿರುತ್ತದೆ. ಈ ವಿಚಾರವಾಗಿ ನೀವು ತಲೆಕೆಡಿಸಿಕೊಳ್ಳಬೇಡಿ, ಬಿಜೆಪಿಯವರೂ ತಲೆಕೆಡಿಸಿಕೊಳ್ಳುವುದು ಬೇಡ, ನಾವು ತಲೆಕೆಡೆಸಿಕೊಳ್ಳುವುದಿಲ್ಲ. ಜನರ ಸೇವೆ ಮಾಡಲು ಬಂದಿದ್ದೇವೆ ಅದನ್ನು ಮಾಡೋಣ.’

Leave a Reply