ಕುಂದಗೋಳ ಮತದಾರರಿಗೆ ಕೊಟ್ಟ ಮಾತು ಉಳಿಸಿಕೊಳ್ಳುವುದು, ಋಣ ತೀರಿಸುವುದು ನನ್ನ ಕರ್ತವ್ಯ: ಸಚಿವ ಡಿಕೆಶಿ

ಡಿಜಿಟಲ್ ಕನ್ನಡ ಟೀಮ್:

ಕುಂದಗೋಳದ ಎಲ್ಲ ವರ್ಗದ ಜನರು ನಮಗೆ ಆಶೀರ್ವಾದ ಮಾಡಿ ಕೆಲಸ ಮಾಡಲು ಶಕ್ತಿ ನೀಡಿದ್ದಾರೆ. ಅವರಿಗೆ ಕೊಟ್ಟಿರುವ ಮಾತು ಉಳಿಸಿಕೊಳ್ಳುವುದು ಹಾಗೂ ಅವರ ಋಣವನ್ನು ತೀರಿಸುವುದು ನನ್ನ ಕರ್ತವ್ಯ ಎಂದು ಜಲಸಂಪನ್ಮೂಲ, ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಕುಂದಗೋಳ ತಾಲೂಕು ವಿವಿಧ ಕಾಮಗಾರಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಳ್ಳಲು ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಶುಕ್ರವಾರ ಬೆಳಕ್ಕೆ ಆಗಮಿಸಿದ ಸಚಿವರು ಮಾಧ್ಯಮದವರೊಂದಿಗೆ ಮಾತನಾಡಿ, ಕುಂದಗೋಳ ಕ್ಷೇತ್ರದ ಅಭಿವೃದ್ಧಿಗಾಗಿ ನಾನು ಶ್ರಮಿಸುತ್ತೇನೆ ಎಂದು ಪುನರುಚ್ಛರಿಸಿದರು. ಈ ವೇಳೆ ಅವರು ಹೇಳಿದ್ದಿಷ್ಟು…

‘ನಮಗೆ ಕ್ಷೇತ್ರದ ಎಲ್ಲ ವರ್ಗದ ಜನರ ಬೆಂಬಲ ಸಿಕ್ಕಿದೆ. ನಮ್ಮ ಜತೆ ಯಾರು ನಿಂತಿದ್ದಾರೆ ಅವರ ರಕ್ಷಣೆ ಮಾಡಬೇಕಿದೆ. ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ನಾನು ಕೆಲಸ ಮಾಡಬೇಕಿದೆ. ದೆಹಲಿಗೆ ಭೇಟಿ ನೀಡಿದಾಗ ಪ್ರಹ್ಲಾದ್ ಜೋಷಿ ಸಾಹೆಬರನ್ನು ಭೇಟಿ ಮಾಡಿದ್ದೆ. ಆಗ ನಾನು ಕುಂದಗೋಳಕ್ಕೆ ಹೋಗುತ್ತಿರುವುದಾಗಿಯೂ ತಿಳಿಸಿದ್ದೆ. ಸಂಸತ್ ಅಧಿವೇಶನ ನಡೆಯುತ್ತಿದ್ದು, ಅವರು ಕೆಲಸನಿರತರಾಗಿದ್ದಾರೆ. ಅವರಿಗೂ ಈ ಅಭಿವೃದ್ಧಿ ಕಾರ್ಯಗಳ ಬಗ್ಗೆ ಆಸೆ ಇದೆ. ಅವರು ಹೋಗಿ ಬನ್ನಿ ಎಂದರು. ಕ್ಷೇತ್ರದಲ್ಲಿ ಹಲವು ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ನಾವು ಮನವಿ ಮಾಡಿಕೊಳ್ಳುತ್ತೇವೆ. ಜನ ಆಶೀರ್ವಾದ ಮಾಡಿದ್ದಾರೆ. ಅವರ ಋಣ ತೀರಿಸಿ, ಅವರಿಗೆ ನಾವು ಕೊಟ್ಟಿರುವ ಮಾತನ್ನು ಉಳಿಸಿಕೊಳ್ಳುವುದು ನನ್ನ ಜವಾಬ್ದಾರಿ.’

‘ನನ್ನ ಇಲಾಖೆ ಸೇರಿದಂತೆ ಸರ್ಕಾರದ ಇತರೆ ಇಲಾಖೆ ಯೋಜನೆಗಳನ್ನು ನಾವು ಪರಿಶೀಲನೆ ಮಾಡುತ್ತೇವೆ. ಪ್ರಿಯಾಂಕ್ ಖರ್ಗೆ ಅವರು ಕೂಡ ಕ್ಷೇತ್ರಕ್ಕೆ ಆಗಮಿಸಿ ಅವರ ಇಲಾಖೆಗೆ ಸಂಬಂಧಿಸಿದಂತೆ ಪ್ರತ್ಯೇಕ ಸಭೆ ನಡೆಸಲಿದ್ದಾರೆ. ಜಿಲ್ಲಾ ಸಚಿವರು ಕೂಡ ಇಲ್ಲಿಗೆ ಆಗಮಿಸಬೇಕಿತ್ತು. ಆದರೆ ಅವರಿಗೆ ಪೂರ್ವ ನಿಯೋಜಿತ ಕಾರ್ಯಕ್ರಮವಿದ್ದ ಕಾರಣ ಅವರು ಬರಲು ಸಾಧ್ಯವಾಗಿಲ್ಲ. ಹೀಗಾಗಿ ನಾವೇ ಇಲ್ಲಿಗೆ ಬಂದು ಕಾರ್ಯಕ್ರಮ ನಡುತ್ತಿದ್ದೇವೆ. ಅಭಿವೃದ್ಧಿ ಪರಿಶೀಲನೆ ಸಭೆ ಮುಗಿದ ನಂತರ ಸಂಜೆ ಮತದಾರರಿಗೆ ಕೃತಜ್ಞತೆ ಅರ್ಪಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ನಮ್ಮ ಸಿಎಲ್ ಪಿ ನಾಯಕರು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದು, ಮಧ್ಯಾಹ್ನ ಅವರು ಆಗಮಿಸಲಿದ್ದಾರೆ.’

Leave a Reply