ಅಮೆರಿಕದ ಡ್ರೋನ್ ಹೊಡೆದು ಹಾಕಿದ ಇರಾನ್! ಕೆಂಗಣ್ಣಿನಿಂದ ಕೆಕ್ಕರಿಸುತ್ತಿರುವ ಅಮೆರಿಕ ಮುಂದಿನ ನಡೆ ಏನು?

ಡಿಜಿಟಲ್ ಕನ್ನಡ ಟೀಮ್:

ಅಮೆರಿಕದ ಡ್ರೋನ್ ಅನ್ನು ಇರಾನ್ ಅಧಿಕಾರಿಗಳು ಹೊಡೆದುರುಳಿಸಿದ್ದು, ಅಮೆರಿಕದ ಸಿಟ್ಟು ನೆತ್ತಿಗೇರುವಂತೆ ಮಾಡಿದೆ. ಅಮೆರಿಕದ ಡ್ರೋನ್ ತನ್ನ ಮಾಯು ಪ್ರದೇಶಕ್ಕೆ ಪ್ರವೇಶಿಸಿತ್ತು ಹೀಗಾಗಿ ಹೊಡೆದೆವು ಎಂದು ಇರಾನ್ ಅಧಿಕಾರಿಗಳು ಸಮಜಾಯಷಿ ನೀಡಿದರೆ, ಅತ್ತ ಅಮೆರಿಕ ಇಲ್ಲ ನಮ್ಮ ಡ್ರೋನ್ ಅಂತಾರಾಷ್ಟ್ರೀಯ ವಾಯು ಪ್ರದೇಶದಲ್ಲಿತ್ತು ಎಂದ ವಾದಿಸುತ್ತಿದೆ.

ಸದ್ಯ ಅಮೆರಿಕ ಹಾಗೂ ಇರಾನ್ ನಡುವಣ ಸಂಬಂಧ ಹದಗೆಟ್ಟಿದ್ದು, ಅಮೆರಿಕದ ಮುಂದಿನ ನಡೆ ಏನು ಎಂಬ ಕುತೂಹಲ ಮೂಡಿಸಿದೆ. ಇರಾನ್ ಡ್ರೋನ್ ಹೊಡೆದುರುಳಿಸಿರುವುದನ್ನು ಖಂಡಿಸಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ಇರಾನ್ ದೊಡ್ಡ ಪ್ರಮಾದವನ್ನೇ ಮಾಡಿದೆ’ ಎಂದು ಟ್ವೀಟ್ ಮಾಡಿದ್ದಾರೆ.

ಇನ್ನು ವರದಿಗಳ ಪ್ರಕಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಮೇಲೆ ಪ್ರತಿದಾಳಿ ನಡೆಸಲು ಅನುಮತಿ ನೀಡಿ ನಂತರ ಅದನ್ನು ಹಿಂಪಡೆದಿದ್ದಾರೆ. ಮೂಲಗಳ ಪ್ರಕಾರ ಟ್ರಂಪ್ ಇರಾನಿನ ರಾಡರ್, ಕ್ಷಿಪಣಿ ಬ್ಯಾಟೆರಿಗಳ ಮೇಲೆ ದಾಳಿ ನಡೆಸಲು ಅನುಮತಿ ನೀಡಿದ್ದರು. ನಂತರ ಕೆಲ ಹೊತ್ತಿನಲ್ಲೇ ಈ ನಿರ್ಧಾರವನ್ನು ಹಿಂಪಡೆದಿದ್ದಾರೆ. ಒಂದು ವೇಳೆ ಈ ದಾಳಿ ನಡೆಸಿದ್ದೆ ಆದಲ್ಲಿ ಇದು ಟ್ರಂಪ್ ಅಧಿಕಾರ ಅವಧಿಯಲ್ಲಿ ಮಧ್ಯಪ್ರಾಚ್ಯದ ಮೇಲೆ ನಡೆದ ಮೂರನೇ ದಾಳಿಯಾಗುತ್ತಿತ್ತು. ಈ ಹಿಂದೆ ಟ್ರಂಪ್ 2017 ಹಾಗೂ 2018ರಲ್ಲಿ ಸಿರಿಯಾ ಮೇಲೆ ದಾಳಿ ನಡೆಸಿದ್ದಾರೆ.

ಟ್ರಂಪ್ ಅವರು ತಮ್ಮ ನಿರ್ಧಾರವನ್ನು ಹಿಂಪಡೆದಿದ್ದು ಯಾಕೆ ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದ್ದು, ಇದು ತಂತ್ರಗಾರಿಕೆಯ ಭಾಗವೇ, ದಾಳಿಯ ನಂತರ ಆಗಬಹುದಾದ ಬೆಳವಣಿಗೆಗಳಿಂದ ಎಚ್ಚೆತ್ತುಕೊಂಡರೆ ಅಥವಾ ಟ್ರಂಪ್ ದಾಳಿಯ ಯೋಜನೆ ಇನ್ನು ಚಾಲ್ತಿಯಲ್ಲಿದೆಯೇ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲದಂತಾಗಿದೆ. ಹೀಗಾಗಿ ಅಮೆರಿಕದತ್ತ ಎಲ್ಲರ ಚಿತ್ತ ನೆಟ್ಟಿದೆ.

Leave a Reply