ಬಾಯಿಗೆ ಪ್ಲಾಸ್ಟರ್ ಹಾಕಿಕೊಂಡಿದ್ದೇನೆ: ಡಿ.ಕೆ. ಶಿವಕುಮಾರ್

ಡಿಜಿಟಲ್ ಕನ್ನಡ ಟೀಮ್:

ಕಾಂಗ್ರೆಸ್ ಹಾಗೂ ರಾಜಕೀಯ ವಿಚಾರಗಳ ಬಗ್ಗೆ ಮಾತನಾಡದಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನಾನು ಬಾಯಿಮುಚ್ಚಿಕೊಂಡು ಇದ್ದೇನೆ ಎಂದು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ತಿಳಿಸಿದರು.

ಸಮೀಪದ ಸೋಮನಹಳ್ಳಿಯಲ್ಲಿ ಎಸ್.ಎಂ. ಕೃಷ್ಣ ಅವರ ಸಹೋದರ, ಕಾಂಗ್ರೆಸ್ ಮುಖಂಡ ದಿವಂಗತ ಎಸ್.ಎಂ. ಶಂಕರ್ ಅವರ ನಿವಾಸಕ್ಕೆ ಸೋಮವಾರ ಭೇಟಿ ನೀಡಿ, ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದ ಸಂದರ್ಭ ಮಾಧ್ಯಮದವರ ಜತೆ ಮಾತನಾಡಿದರು.

ಕಾಂಗ್ರೆಸ್ ಬಗ್ಗೆ ಮಾತನಾಡಬಾರದು ಎಂಬ ಹಿನ್ನೆಲೆಯಲ್ಲಿ ಬಾಯಿಗೆ ಪ್ಲಾಸ್ಟರ್ ಹಾಕಿಕೊಂಡಿದ್ದೇನೆ. ನೀವು ಕೂಡ ಒಂದು ಪ್ಲಾಸ್ಟರ್ ಕೊಟ್ಟರೆ ಅದನ್ನು ಹಾಕಿಕೊಳ್ಳುತ್ತೇನೆ ಎಂದು ತಮಾಷೆ ಮಾಡಿದರು.

ಶ್ರೀರಾಮುಲು ಅವರು, ‘ಡಿ.ಕೆ. ಶಿವಕುಮಾರ್ ಎಲ್ಲಿದ್ದೀಯಪ್ಪ ಎಂದು ಬಳ್ಳಾರಿ ಜನ ಕೇಳುತ್ತಿದ್ದಾರೆ  ಹಾಗೂ ಸರ್ಕಾರ ಪತನವಾಗಲು ನೀವೆ ಕಾರಣರಾಗುತ್ತೀರಿ’ ಎಂದು ಟ್ವೀಟ್ ಮಾಡಿದ್ದಾರಲ್ಲಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಶ್ರೀರಾಮುಲು ಅಣ್ಣನವರಿಗೆ ಮುಂದೆ  ಉತ್ತರ ನೀಡುತ್ತೇನೆ ಎಂದು ತಿಳಿಸಿದರು.

ಮಂಡ್ಯ ಜಿಲ್ಲೆಯಲ್ಲಿ ಬೆಳೆಗಳಿಗೆ ನೀರು ಹರಿಸುವಂತೆ ರೈತ ಸಂಘದವರು ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿರುವ ಸಂಬಂಧ ಗಮನ ಸೆಳೆದಾಗ,  ಕಾವೇರಿ ನೀರನ್ನು ಹರಿಸುವ ಅಧಿಕಾರ ನಮ್ಮ ಅಧಿಕಾರಿಗಳಿಗೆ ಇಲ್ಲ. ಈ ಬಗ್ಗೆ ಜೂನ್ 25 ರಂದು ಸಭೆ ಕರೆದಿದ್ದು,  ಅಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದರು.

ಕಳೆದ ತಿಂಗಳು ತಮಿಳುನಾಡಿಗೆ ಹರಿಸಬೇಕಾದ ನೀರನ್ನು ಮಳೆ ಕೊರತೆಯಿಂದ ಹರಿಸಿಲ್ಲ. ಈ ಹಿನ್ನೆಲೆಯಲ್ಲಿ ಆ ಭಾಗದ ರೈತರು ಅಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ ಹಾಗೂ ಇಲ್ಲಿ ನಮ್ಮ ರೈತರು ನೀರು ಬೇಕು ಎಂದು ಒತ್ತಾಯ ಮಾಡುತ್ತಿರುವುದರಿಂದ ಈ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ರೈತರು ಮೊದಲಿನಂತೆ ಇಷ್ಟ ಬಂದ ರೀತಿಯಲ್ಲಿ ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಪ್ರಮುಖ ಕಾರಣ ಮಳೆಯ ಕೊರತೆ. ಕೆಆರ್ ಎಸ್ ಅಣೆಕಟ್ಟೆಯಲ್ಲಿರುವ ನೀರನ್ನು ಕುಡಿಯಲು ಸದ್ಬಳಕೆ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.

Leave a Reply