ಗೆಲುವಿನ ಹಾದಿಗೆ ಬರಲು ನಿಖಿಲ್ ಕುಮಾರಸ್ವಾಮಿ ರಣತಂತ್ರ..!

ಡಿಜಿಟಲ್ ಕನ್ನಡ ಟೀಮ್:

ಮಂಡ್ಯ ಲೋಕಸಭಾ ಚುನಾವಣೆ ಸೋಲಿನ ಬಳಿಕ ಎದೆಗುಂದದ ನಿಖಿಲ್ ಕುಮಾರಸ್ವಾಮಿ, ಗೆಲುವಿನ ಹಳಿಗೆ ಬರಲು ರಣತಂತ್ರ ಮಾಡಿದ್ದಾರೆ. ಇತ್ತೀಚೆಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ಮೋಹನ ರೆಡ್ಡಿ‌ ಭೇಟಿ ಮಾಡಿದ್ದ ನಿಖಿಲ್ ಕುಮಾರಸ್ವಾಮಿ, ರಾಜಕೀಯ ಯಶಸ್ಸಿನ ಬಗ್ಗೆ ಮಾತನಾಡಿದ್ರು. ಇದೀಗ ಜಗನ್ಮೋಹನ ರೆಡ್ಡಿ ಆಂಧ್ರದಲ್ಲಿ ಅನುಸರಿಸಿದ ದಾರಿಯನ್ನೇ ತುಳಿಯುವ ಮೂಲಕ ಸೋಲಿನ ಬೀಡಿನಲ್ಲೇ ಗೆಲುವಿನ ಲಯಕ್ಕೆ ಮರಳುವ ಮೂಲಕ ರಾಜಕೀಯ ಎದುರಾಳಿಗಳಿಗೆ ಪಾಠ ಕಲಿಸಲು ಮುಂದಾಗಿದ್ದಾರೆ.

ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್‌ನ ವೈ.ಎಸ್ ರಾಜಶೇಖರ ರೆಡ್ಡಿ ನಿಧನದ ಬಳಿಕ ಕಾಂಗ್ರೆಸ್ ಜಗನ್ ಮೋಹನ ರೆಡ್ಡಿ ಕುಟುಂಬವನ್ನು ನಿರ್ಲಕ್ಷ್ಯ ಮಾಡಿತ್ತು‌ ಎಂದು ಆರೋಪಿಸಿದ್ದ ವೈಎಸ್‌ಆರ್ ಕುಟುಂಬ, ಕಾಂಗ್ರೆಸ್ ತ್ಯಜಿಸಿ ಹೊಸ ಪಕ್ಷ ಸ್ಥಾಪನೆ ಮಾಡಿತ್ತು. ಬಳಿಕ ಹಲವು ಪ್ರಕರಣಗಳಲ್ಲಿ ಸಿಲುಕಿದ ಜಗನ್ಮೋಹನ ರೆಡ್ಡಿ ಹಲವಾರು ತಿಂಗಳ ಕಾಲ ಸೆರೆವಾಸವನ್ನೂ ಅನುಭವಿಸಿದರು. ಕಾಂಗ್ರೆಸ್ ಇಬ್ಭಾಗವಾದ ಬಳಿಕ ಆಂಧ್ರಪ್ರದೇಶ ವಿಭಜಿಸಿ ರಾಜಕೀಯ ಲಾಭ ಮಾಡಿಕೊಳ್ಳು ಲೆಕ್ಕಾಚಾರ ಮಾಡಿದ ಕಾಂಗ್ರೆಸ್‌ಗೆ ಟಿಆರ್‌ಎಸ್ ಚಂದ್ರಶೇಖರ ರಾವ್ ಕೈಕೊಟ್ಟರು. ತೆಲಂಗಾಣದಲ್ಲಿ ಕೆ.ಚಂದ್ರಶೇಖರ್ ರಾವ್ ಅಧಿಕಾರ ಹಿಡಿದರೆ, ಇತ್ತ ಆಂಧ್ರದಲ್ಲಿ ಚಂದ್ರಬಾಬು ನಾಯ್ಡು ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ಇದೆಲ್ಲವನ್ನೂ ಮೆಟ್ಟಿನಿಂತ ಜಗನ್ಮೋಹನ ರೆಡ್ಡಿ ಈ ಬಾರಿ ಭರ್ಜರಿ ಜಯದೊಂದಿಗೆ ಅಧಿಕಾರ ಹಿಡಿದಿದ್ದಾರೆ ಅದೇ ತಂತ್ರಗಾರಿಕೆಯನ್ನು ಕರ್ನಾಟಕದಲ್ಲಿ ಜಾರಿ ಮಾಡಲು ನಿಖಿಲ್ ಕುಮಾರಸ್ವಾಮಿ ಮುಂದಾಗಿದ್ದಾರೆ.

ಆಂಧ್ರದಲ್ಲಿ ಜಗನ್ಮೋಹನ ರೆಡ್ಡಿ ಬರೋಬ್ಬರಿ 14 ಸಾವಿರ ಕಿಲೋ ಮೀಟರ್ ಪಾದಯಾತ್ರೆ ಮಾಡುವ ಮೂಲಕ ಜನರಿಗೆ ಹತ್ತಿರವಾದ್ರು. ಬಳಿಕ ವಿಧಾನಸಭೆ ಹಾಗೂ ಲೋಕಸಭೆಯಲ್ಲಿ ಭರ್ಜರಿ ಜಯ ದಾಖಲಿಸಿ, ಚಂದ್ರಬಾಬು ನಾಯ್ಡು ಸರ್ಕಾರವನ್ನು ಧೂಳಿಪಟ ಮಾಡುವ ಮೂಲಕ ಮುಖ್ಯಮಂತ್ರಿ ಆಗಿ ಅಧಿಕಾರದ ಚುಕ್ಕಾಣಿ ಹಿಡಿದರು. ಇದೇ ಫಾರ್ಮುಲ ಅನುಸರಿಸಲು ಮುಂದಾಗಿರುವ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿಜಗನ್ ಮೋಹನ್ ರೆಡ್ಡಿ ರೀತಿ ಪಾದಯಾತ್ರೆಗೆ ಸಿದ್ದತೆ ನಡೆಸಿದ್ದಾರೆ. ಜೆಡಿಎಸ್ ಭದ್ರಕೋಟೆ ಎನಿಸಿರುವ ಹಳೇ ಮೈಸೂರು ಪ್ರಾಂತ್ಯದಲ್ಲಿ ನಿಖಿಲ್ ಪಾದಯಾತ್ರೆ ಮಾಡಲಿದ್ದಾರೆ ಎನ್ನಲಾಗಿದೆ. ರಾಮನಗರ, ಮಂಡ್ಯ, ಮೈಸೂರು ಹಾಸನ, ಭಾಗದಲ್ಲಿ ಪಾದಯಾತ್ರೆ ನಡೆಸಲಿದ್ದು, ಆ ಮೂಲಕ ಹಳೇ ಮೈಸೂರು ಭಾಗದಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

ತಂದೆ ಗ್ರಾಮ ವಾಸ್ತವ್ಯ ಮಾಡುತ್ರ ಜನಪ್ರಿಯ ಆಗುತ್ತಿದ್ರೆ ಮಗ ನಿಖಿಲ್ ಕುಮಾರಸ್ವಾಮಿ, ಪಾದಯಾತ್ರೆ ಮೂಲಕ ಜನರ ಸಮಸ್ಯೆ ಆಲಿಸುತ್ತ ಪಾದಯಾತ್ರೆ ಮಾಡುವುದು ಜೆಡಿಎಸ್ ಪಕ್ಷದ ಲೆಕ್ಕಾಚಾರ. ಆಂಧ್ರದಲ್ಲಿ ಬೇರೊಂದು ಪಕ್ಷ ಅಧಿಕಾರದಲ್ಲಿ ಇದ್ದರೂ ಜಗನ್ಮೋಹನ ರೆಡ್ಡಿ ಪಾದಯಾತ್ರೆ ಯಶಸ್ಸು ಕಂಡಿದೆ. ಇಲ್ಲಿ ಜೆಡಿಎಸ್ ಸರ್ಕಾರ ಇರೋದ್ರಿಂದ ಜನರ ಸಮಸ್ಯೆ ಆಲಿಸುವ ಜೊತೆಗೆ ಸರ್ಕಾರದ ಮೂಲಕ ಜನರ ಸಮಸ್ಯೆಗೆ ಸಹಾಯ ಮಾಡುತ್ತ ಬಂದರೆ ಪಾದಯಾತ್ರೆ ಯಶಸ್ಸು ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ ಅನ್ನೋದು ಜೆಡಿಎಸ್ ನಾಯಕರ ಲೆಕ್ಕಾಚಾರ. ಆದ್ರೆ ಪಾದಯಾತ್ರೆಯ ರೂಪುರೇಷೆ ಹೇಗಿರುತ್ತೆ, ಯಾವ ಕಡೆಯಿಂದ ಸಾಗಲಿದೆ ಅನ್ನೋದ್ರ ಜೊತೆಗೆ ಪಾದಯಾತ್ರೆಯಲ್ಲಿ ಜನರಿಗೆ ಯಾವ ರೀತಿಯ ಸಹಾಯ ಸಿಗಲಿದೆ ಅನ್ನೋದರ ಮೇಲೆ ಯಶಸ್ಸು ನಿರ್ಧಾರ ಆಗಲಿದೆ.

Leave a Reply