ಮಳೆ ಬಿದ್ರೆ ಮಾತ್ರ ನೀರು ಬಿಡಿ: ಕರ್ನಾಟಕಕ್ಕೆ ನಿರಾಳತೆ ತಂದ ಪ್ರಾಧಿಕಾರದ ನಿರ್ಧಾರ!

ಡಿಜಿಟಲ್ ಕನ್ನಡ ಟೀಮ್:

ಮುಂಗಾರು ಕೈಕೊಟ್ಟಿರುವುದರಿಂದ ಜಲ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿರುವುದರಿಂದ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಎಂಬ ಕರ್ನಾಟಕದ ವಾದಕ್ಕೆ ಕಾವೇರಿ ನೀರು ನಿರ್ವಾಹಣ ಪ್ರಾಧಿಕಾರ ಮನ್ನಣೆ ನೀಡಿದೆ.

ಪ್ರಾಧಿಕಾರದ ಈ ಆದೇಶ ರಾಜ್ಯದ ಪಾಲಿಗೆ ಸ್ವಲ್ಪ ನೆಮ್ಮದಿ ತಂದಿದೆ. ಮುಂಗಾರು ಮಳೆ ಕೊರತೆ ಇದ್ದು, ಜಲಾಶಯಗಳಲ್ಲಿ ನೀರು ಇಲ್ಲವಾದರೂ ತಮಿಳುನಾಡು ಮಾತ್ರ ಕರ್ನಾಟಕ ನೀರು ಬಿಡಬೇಕು ಎಂದು ಆಗ್ರಹಪಡಿಸಿತ್ತು. ಆದರೆ ವಾಸ್ತವದ ಪರಿಸ್ಥಿತಿ ಅಧ್ಯಯನ ಮಾಡಿರುವ ಪ್ರಾಧಿಕಾರ ಮಂಗಳವಾರ ನಡೆಸಿದ ಸಭೆಯಲ್ಲಿ ಮುಂದಿನ ದಿನಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮಳೆ ಬಂದು ಳಹರಿವು ಹೆಚ್ಚಿದಾಗ ತಮಿಳುನಾಡಿಗೆ ಬಿಡಬೇಕಾದ ನೀರನ್ನು ಹರಿಸುವಂತೆ ತಿಳಿಸಿದೆ. ಇದರೊಂದಿಗೆ ಸದ್ಯಕ್ಕೆ ತಮಿಳುನಾಡಿಗೆ ನೀರು ಬಿಡುವ ಒತ್ತಡ ರಾಜ್ಯದ ಮೇಲಿಲ್ಲದಂತಾಗಿದೆ.

ಕಳೆದ ಸಭೆಯಲ್ಲಿ ಪ್ರಾಧಿಕಾರ ಜೂನ್ ತಿಂಗಳಲ್ಲಿ ಉತ್ತಮ ಮಳೆಯಾದರೆ ತಮಿಳುನಾಡಿಗೆ 9.19 ಟಿಎಂಸಿ ನೀರು ಬಿಡುವಂತೆ ಆದೇಶಿಸಿತ್ತು. ಹೀಗಾಗಿ ಪ್ರಾಧಿಕಾರದ ಆದೇಶದಂತೆ ಕರ್ನಾಟಕ 9.19 ಟಿಎಂಸಿ ನೀರನ್ನು ಮೆಟ್ಟೂರು ಜಲಾಶಯಕ್ಕೆ ಹರಿಸಿಲ್ಲ, ಜುಲೈ ತಿಂಗಳ ವೇಳೆಗೆ 31.24 ಟಿಎಂಸಿ ನೀರನ್ನು ಹರಿಸಬೇಕು ಎಂದು ತಮಿಳುನಾಡು ಪ್ರಾಧಿಕಾರದ ಮುಂದೆ ದೂರು ನೀಡಿತ್ತು. ರಾಜ್ಯದಲ್ಲಿ ಜೂನ್ 20ರವರೆಗೂ ಈ ಭಾಗದಲ್ಲಿ ಮಳೆ ಬೀಳದ ಪರಿಣಾಮ ಹಾಗೂ ಜಲಾಶಯಗಳಲ್ಲಿನ ಪರಿಸ್ಥಿತಿಯ ಅಂಕಿ ಅಂಶಗಳನ್ನು ಪರಿಶೀಲನೆ ನಡೆಸಿದಾಗ ಜೂನ್ 23ರವರೆಗೂ ಜಲಾಶಯದಲ್ಲಿದ್ದ ನೀರಿನ ಪ್ರಮಾಣ ಕೇವಲ 1.885 ಟಿಎಂಸಿ ನೀರು ಮಾತ್ರ. ಹೀಗಾಗಿ ಜಲಾಶಯಗಳಲ್ಲಿ ಇಲ್ಲದ ನೀರನ್ನು ಬಿಡಲು ಸಾಧ್ಯವಿಲ್ಲ ಎಂಬುದು ರಾಜ್ಯದ ವಾದವಾಗಿತ್ತು. ರಾಜ್ಯದ ಪರಿಸ್ಥಿತಿ ಅರಿತ ಪ್ರಾಧಿಕಾರ ಮಳೆ ಬಿದ್ದು, ಜಲಾಶಯಗಳಿಗೆ ಒಳ ಹರಿವು ಹೆಚ್ಚಾದಾಗ ತಮಿಳುನಾಡಿಗೆ ನೀರು ಹರಿಸುವಂತೆ ತಿಳಿಸಿದೆ.

Leave a Reply