ಕಂಪನಿಗಳಿಗೆ ಸಬ್ಸಿಡಿ ನೀಡಿದ್ದಕ್ಕೆ ರೈತರಿಗೆ ಸಕಾಲದಲ್ಲಿ ರಸಗೊಬ್ಬರ ಪೂರೈಕೆ; ಸಂಸದ ಡಿಕೆ ಸುರೇಶ್ ಪ್ರಶ್ನೆಗೆ ಸಚಿವ ಸದಾನಂದ ಗೌಡ ಉತ್ತರ

ಡಿಜಿಟಲ್ ಕನ್ನಡ ಟೀಮ್:

‘ಕೇಂದ್ರ ಸರ್ಕಾರ ಕಂಪನಿಗಳಿಗೆ ಸಬ್ಸಿಡಿ ನೀಡುತ್ತಿರುವುದರಿಂದ ರೈತರಿಗೆ ಎಂಆರ್ ಪಿ ದರದಲ್ಲಿ ಸಕಾಲಕ್ಕೆ ರಸಗೊಬ್ಬರ ಪೂರೈಕೆಯಾಗುತ್ತಿದೆ’ ಇದು ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಅವರ ಪ್ರಶ್ನೆಗೆ ಕೇಂದ್ರ ರಸಗೊಬ್ಬರ ಸಚಿವ ಡಿವಿ ಸದಾನಂದಗೌಡ ನೀಡಿದ ಉತ್ತರ.

ಸಂಸತ್ ನಲ್ಲಿ ಬಜೆಟ್ ಅಧಿವೇಶನ ನಡೆಯುತಿದ್ದು, ಅಧಿವೇಶನದಲ್ಲಿ ಕಾಂಗ್ರೆಸ್ ಸಂಸದ ಡಿಕ ಸುರೇಶ್ ಅವರು ಲೋಕಸಭೆಯಲ್ಲಿ ‘ಕಳೆದ ಮೂರು ವರ್ಷಗಳಿಂದ ಕೇಂದ್ರ ಸರ್ಕಾರ ರಸಗೊಬ್ಬರ ಕಂಪನಿಗಳಿಗೆ ಸರ್ಕಾರ ಸಬ್ಸಿಡಿ ನೀಡುತ್ತಿದ್ದೀರಿ. ಯಾವ ಕಂಪನಿಗಳಿಗೆ ಎಷ್ಟು ಸಬ್ಸಿಡಿ ನೀಡಿದ್ದೀರಿ? ಇದರಿಂದ ರೈತರಿಗೆ ಅನುಕೂಲವಾಗಿದೆಯೇ? ಒಂದುವೇಳೆ ಆಗಿದ್ದರೆ ಅದು ಹೇಗೆ? ರೈತರಿಗೆ ಅನುಕೂಲವಾಗಿಲ್ಲವಾದರೆ ಆ ಬಗ್ಗೆ ಸರ್ಕಾರ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಲಿದೆ?’ ಎಂದು ರಸಗೊಬ್ಬರ ಸಚಿವರಿಗೆ ಪ್ರಶ್ನಿಸಿದ್ದರು.

ಇದಕ್ಕೆ ಸಚಿವರು ಮಂಗಳವಾರ ಲಿಖಿತ ಉತ್ತರ ನೀಡಿದ್ದು, ಅದು ಹೀಗಿದೆ…

ಪ್ರಸಕ್ತ ವರ್ಷ ಸೇರಿದಂತೆ ಕಳೆದ ಮೂರು ವರ್ಷಗಳಲ್ಲಿ ಕೇಂದ್ರ ಸರ್ಕಾರ ಖಾಸಗಿ, ಸಾರ್ವಜನಿಕ ಹಾಗೂ ಸಹಕಾರಿ ಕ್ಷೇತ್ರಗಳ ರಸಗೊಬ್ಬರ ಕಂಪನಿಗೆ ನೀಡಲಾಗುತ್ತಿದ್ದ ಸಬ್ಸಿಡಿ ವಿವರಗಳ ಪಟ್ಟಿಯನ್ನು ನೀಡಲಾಗಿದೆ.

ರೈತರಿಗೆ ಯೂರಿಯಾವನ್ನು ಗರಿಷ್ಠ ವರ್ತಕ ಬೆಲೆ(ಎಂಆರ್ ಪಿ)ಗೆ ಮಾರಾಟ ಮಾಡಲಾಗುತ್ತಿದೆ. ಪ್ರತಿ 45 ಕೆಜಿ ಯೂರಿಯಾ ಗೊಬ್ಬರದ ಚೀಲವನ್ನು 242 ರೂ.ಗೆ (ಬೇವು ಲೇಪನ ಹಾಗೂ ತೆರಿಗೆ ಪ್ರತ್ಯೇಕ) ಮಾರಾಟ ಮಾಡಲಾಗುತ್ತದೆ. ಇನ್ನು 50 ಕೆ.ಜಿ ಯೂರಿಯಾ ಚೀಲವನ್ನು 268 ರೂ.ಗೆ (ಬೇವು ಲೇಪನ ಹಾಗೂ ತೆರಿಗೆ ಪ್ರತ್ಯೇಕ) ಮಾರಾಟ ಮಾಡಲಾಗುತ್ತಿದೆ. ಇಲ್ಲಿ ರೈತರ ಜಮೀನಿಗೆ ಯೂರಿಯಾ ಗೊಬ್ಬರ ತಲುಪಲು ತಗುಲುವ ಹಾಗೂ ಮಾರುಕಟ್ಟೆ ಅವಲಂಬಿತ ದರಗಳಿಗೆ ಸಂಬಂಧಿಸಿದಂತೆ ಕಂಪನಿಗಳಿಗೆ ಸರ್ಕಾರ ಸಬ್ಸಿಡಿ ನೀಡುತ್ತಿದೆ. ಹೀಗಾಗಿ ರೈತರು ಹೆಚ್ಚುವರಿ ಹಣವನ್ನು ಪಾವತಿಸದೇ ಕೇವಲ ಎಂಆರ್ ಪಿ ದರದಲ್ಲಿ ಯೂರಿಯಾ ಖರೀದಿಸುವಂತಾಗಿದೆ. ಇದು ರೈತರಿಗೆ ಅನುಕೂಲವಾಗಿದೆ.

ಇನ್ನು ಫೊಸ್ಫಟಿಕ್ ಮತ್ತು ಪೊಟಾಸಿಕ್ ಗೊಬ್ಬರದ ಬಗ್ಗೆ ಹೇಳುವುದಾದರೆ ಈ ಗೊಬ್ಬರಗಳಿಗೆ 2010ರಿಂದ ಭಾರತ ಸರ್ಕಾರ ನ್ಯೂಟ್ರಿಯೆಂಟ್ ಬೇಸ್ಡ್ ಸಬ್ಸಿಡಿಯನ್ನು ಜಾರಿಗೊಳಿಸಿದೆ. ಈ ಯೋಜನೆಯಲ್ಲಿ ವಾರ್ಷಿಕವಾಗಿ ಸಬ್ಸಿಡಿ ಮೊತ್ತವನ್ನು ನಿಗದಿಪಡಿಸಿದ್ದು, ಆ ಗೊಬ್ಬರಗಳ ಪೋಷಕಾಂಶಗಳ ಪ್ರಮಾಣದ ಮೇಲೆ ಸಬ್ಸಿಡಿ ನೀಡಲಾಗುವುದು. ಭಾರತ ಸರ್ಕಾರ ನೀಡುತ್ತಿರುವ ಸಬ್ಸಿಡಿಯಿಂದಾಗಿ ಕಂಪನಿಗಳು ಗೊಬ್ಬರ ಉತ್ಪಾದನೆಗೆ ತಗಲುವ ವೆಚ್ಚಕ್ಕೆ ಮಾರಾಟ ಮಾಡದೇ ಅದಕ್ಕಿಂತ ಕಡಿಮೆ ದರವಾಗಿರುವ ಎಂಆರ್ ಪಿ ದರಕ್ಕೆ ಗೊಬ್ಬರಗಳನ್ನು ರೈತರಿಗೆ ಮಾರಾಟಮಾಡಲಾಗುತ್ತಿದೆ. ಇದರಿಂದ ದುಬಾರಿ ಗೊಬ್ಬರಗಳು ಕೂಡ ರೈತರಿಗೆ ಎಂಆರ್ ಪಿ ಬೆಲೆಯಲ್ಲಿ ಸಿಗುವಂತಾಗಿದೆ. ಒಂದುವೇಳೆ ಸಬ್ಸಿಡಿ ನೀಡದಿದ್ದರೆ ರೈತರಿಗೆ ಈ ಗೊಬ್ಬರಗಳು ಎಂಆರ್ ಪಿ ಬೆಲೆಗೆ ಸಿಗದೆ ದುಬಾರಿಯಾಗುತ್ತಿತ್ತು.

ಸರ್ಕಾರ ರಸಗೊಬ್ಬರ ಕಂಪನಿಗಳಿಗೆ ನೀಡುವ ಸಬ್ಸಿಡಿ ರೈತರಿಗೆ ಅನುಕೂಲವಾಗಲು ಅನೇಕ ಕ್ರಮಗಳನ್ನು ಕೈಗೊಂಡಿದ್ದು, ಅವುಗಳು ಹೀಗಿವೆ…

• ರಸಗೊಬ್ಬರಗಳ ಪೂರೈಕೆ, ಅವುಗಳ ಸರಬರಾಜು ಹಾಗೂ ಅವುಗಳ ಲಭ್ಯತೆಗಳನ್ನು ಪರಿಶೀಲಿಸಲು ಡಿಬಿಟಿ ವ್ಯವಸ್ಥೆ ಅಳವಡಿಸಲಾಗಿದೆ.
• ಫೊಸ್ಫಟಿಕ್ ಮತ್ತು ಪೊಟಾಸಿಕ್ ಗೊಬ್ಬರಗಳ ಬೆಲೆಗಳನ್ನು ಪರಿಶೀಲಿಸುವುದರಿಂದ ಗೊಬ್ಬರ ಉತ್ಪಾದಕರು ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವಂತಿಲ್ಲ.
• ರಸಗೊಬ್ಬರಗಳಿಗೆ ಸಂಬಂಧಿಸಿದಂತೆ ಸಬ್ಸಿಡಿಗಳನ್ನು ಬಜೆಟ್ ನಲ್ಲಿ ಪ್ರತ್ಯೇಕವಾಗಿ ಮೀಸಲಿಡುವುದರಿಂದ ಕಂಪನಿಗಳು ಕಾಲ ಕಾಲಕ್ಕೆ ಸರಿಯಾಗಿ ಗೊಬ್ಬರಗಳ ಪೂರೈಕೆಗೆ ನೆರವಾಗಿದೆ.
• 1973ರ ರಸಗೊಬ್ಬರ ಪೂರೈಕೆ ನಿಯಂತ್ರಣ ಆದೇಶ ಪಾಲನೆಯಿಂದ ದೇಶದ ಮೂಲೆ ಮೂಲೆಗೂ ಗೊಬ್ಬರ ಪೂರೈಕೆ ಸರಿಯಾಗಿ ನಡೆಯುತ್ತಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಬಹುದು.
• ಕೃಷಿಯೇತ್ತರ ಚಟುವಟಿಕೆಗಳಿಗೆ ಹೆಚ್ಚಿನ ಪ್ರಮಾಣದ ಯೂರಿಯಾ ಪೂರೈಕೆಯನ್ನು ತಡೆಗಟ್ಟಲು ಯೂರಿಯ ಮಾರಾಟಕ್ಕೆ ಆಧಾರ್ ಕಾರ್ಡ್ ಅನ್ನು ಕಡ್ಡಾಯವಾಗಿ ಪಡೆಯಲಾಗುವುದು. ಒಂದುವೇಳೆ ಆಧಾರ್ ಕಾರ್ಡ್ ಇಲ್ಲವಾದರೆ ಕಿಸಾನ್ ಕಾರ್ಡ್ ಅಥವಾ ಮತದಾರ ಗುರುತಿನ ಚೀಟಿಯನ್ನು ಪಡೆಯಲಾಗುವುದು.

Leave a Reply