ಡಿಜಿಟಲ್ ಕನ್ನಡ ಟೀಮ್:
ಮೇಕೆದಾಟು ಯೋಜನೆಗೆ ಒಪ್ಪಿಗೆ ನೀಡಬಾರದು ಎಂದು ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಆ ಮೂಲಕ ಎರಡು ರಾಜ್ಯಗಳ ಹಿತ ಕಾಯುವ ಯೋಜನೆಗೆ ವಿನಾ ಕಾರಣ ಅಡಗಾಲು ಹಾಕುತ್ತಿದೆ. ತಮಿಳುನಾಡು ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಇರಾದೆಯನ್ನು ತೋರುತ್ತಿಲ್ಲ. ಜತೆಗೆ ಕರ್ನಾಟಕದ ಪ್ರಯತ್ನಕ್ಕೂ ಸಹಕರಿಸದೆ ಮಗ್ಗುಲ ಮುಳ್ಳಾಗಿ ಪರಿಣಮಿಸಿದೆ.
ಪ್ರಸ್ತುತ ಮುಂಗಾರು ದೇಶದ ಶೇ.85ರಷ್ಟು ಪ್ರದೇಶಗಳಲ್ಲಿ ಕೈಕೊಟ್ಟಿದೆ. ಪರಿಣಾಮ ದೇಶದಲ್ಲಿ ಭೀಕರ ಜಲ ಸಂಕಷ್ಟ ತಲೆದೋರಿದೆ. ಇನ್ನು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಕರ್ನಾಟಕ ಮತ್ತು ತಮಿಳುನಾಡು ನಡುವೆ ಕಾವೇರಿ ನೀರು ಹಂಚಿಕೆ ವಿಚಾರಕ್ಕೆ ಹಗ್ಗಜಗ್ಗಾಟ ಶುರುವಾಗಿದೆ.
ಈ ವರ್ಷ ಮುಂಗಾರು ಕೊರತೆ ಪರಿಣಾಮ ಕೆಆರ್ ಎಸ್ ಜಲಾಶಯ ಜೂನ್ ಅಂತ್ಯದಲ್ಲೂ ಬರಿದಾಗಿ ನಿಂತಿದೆ. ಈ ಮಧ್ಯೆ ತಮಿಳುನಾಡು ತಮಗೆ ನೀರು ಬೇಕು ಎನ್ನುತ್ತಿದೆ. ಜಲಾಶಯದಲ್ಲಿ ಇಲ್ಲದ ನೀರನ್ನು ಬಿಡಿ ಎಂದರೆ ಎಲ್ಲಿಂದ ಸ್ವಾಮಿ ಬಿಡೋದು?
ಇನ್ನು ತಮಿಳುನಾಡಿನಲ್ಲಿ ವರ್ಷಕ್ಕೆ ಮೂರರಿಂದ ನಾಲ್ಕು ಬಾರಿ ಸೈಕ್ಲೋನ್, ಪ್ರವಾಹ ಉಂಟಾಗುತ್ತದೆ. ಆ ನೀರೆಲ್ಲಾ ಕೆಲವೇ ದಿನಗಳಲ್ಲಿ ಸಮುದ್ರ ಸೇರುತ್ತದೆ. ಈ ನೀರನ್ನು ಹಿಡಿದಿಟ್ಟುಕೊಳ್ಳುವ ಬಗ್ಗೆ ಚಿಂತೆಯನ್ನು ಮಾಡುತ್ತಿಲ್ಲ. ಇನ್ನು ಮೇಕೆದಾಟು ಮೂಲಕ ತಮಿಳುನಾಡಿಗೆ ಹೋದ ನೀರು ನಂತರ ಹೆಚ್ಚಿನ ಪ್ರಮಾಣದಲ್ಲಿ ಸಮುದ್ರ ಸೇರುತ್ತಿದೆ. ಇದನ್ನು ಹಿಡಿದಿಟ್ಟು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕರ್ನಾಟಕ ಪ್ರಯತ್ನಿಸುತ್ತಿದ್ದಾರೆ ಅದಕ್ಕೂ ತಮಿಳುನಾಡು ಕ್ಯಾತೆ ತೆಗೆಯುತ್ತಿದೆ.
ಬಂದ ನೀರನ್ನು ತಾನು ಹಿಡಿದಿಟ್ಟುಕೊಳ್ಳದೆ, ಕರ್ನಾಟಕ ನೀರನ್ನು ಸಂಗ್ರಹಿಸುವ ಕೆಲಸಕ್ಕೂ ಸಹಕರಿಸದೆ, ಜಲಾಶಯಗಳಲ್ಲಿ ಇಲ್ಲದ ನೀರನ್ನು ಬಿಡಿ ಎನ್ನುತ್ತಿದೆ. ಜನರ ಹಿತಾಸಕ್ತಿ ಮರೆತು ರಾಜಕೀಯ ಹಿತಾಸಕ್ತಿ ಬಗ್ಗೆ ತಮಿಳುನಾಡು ನಾಯಕರು ಯೋಚಿಸುತ್ತಿರುವುದು ಸಮಸ್ಯೆಯನ್ನು ಮತ್ತಷ್ಟು ಕಗ್ಗಂಟಾಗಿ ಮಾಡುತ್ತಿದೆ.