ಜಪಾನ್ ಪ್ರವಾಸದಲ್ಲಿ ಮೋದಿ! ಟ್ರಂಪ್ ಜತೆಗಿನ ಮಾತುಕತೆ ಮೇಲೆ ಎಲ್ಲರ ಕಣ್ಣು

ಡಿಜಿಟಲ್ ಕನ್ನಡ ಟೀಮ್:

ಜಿ20 ರಾಷ್ಟ್ರಗಳ ಶೃಂಗ ಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಜಪಾನ್ ಗೆ ತೆರಳಿದ್ದಾರೆ. ಈ ಸಭೆ ವೇಳೆ ಮೋದಿ ಹಾಗೂ ಟ್ರಂಪ್ ಮಾತುಕತೆ ನಡೆಸುವ ಸಾಧ್ಯತೆ ಇದ್ದು, ವಿವಿಧ ವಿಚಾರಗಳ ಕುರಿತಾಗಿ ಎರಡು ರಾಷ್ಟ್ರಗಳ ನಡುವೆ ಉದ್ಭವಿಸಿರುವ ವೈಮನಸನ್ನು ಬಗೆಹರಿಸಿಕೊಳ್ಳುವರೇ ಎಂ ಪ್ರಶ್ನೆ ಮೂಡಿದೆ.

ಮೋದಿ ಪ್ರಧಾನಾಗಿ ಎರಡನೇ ಬಾರಿಗೆ ಆಯ್ಕೆಯಾದ ನಂತರ ಇದೇ ಮೋದಲ ಬಾರಿಗೆ ಈ ಇಬ್ಬರು ನಾಯಕರು ಭೇಟಿಯಾಗುತ್ತಿದ್ದಾರೆ. ಸದ್ಯ ಭಾರತ ಹಾಗೂ ಅಮೆರಿಕ ನಡುವಣ ಸಂಬಂಧ ಹೇಳಿಕೊಳ್ಳುವಷ್ಟು ಆಪ್ತವಾಗಿಲ್ಲ. ಇರಾನ್ ನಿಂದ ತೈಲ ಖರೀದಿ, ರಷ್ಯಾದಿಂದ ಎಸ್ 400 ಟ್ರಯಂಪ್ ಕ್ಷೇಪಣಿ ಖರೀದಿ ಹಾಗೂ ಅಮೆರಿಕದ ವಸ್ತುಗಳ ಮೇಲಿನ ಭಾರತದ ಸುಂಕ, ಅಮೆರಿಕ ಭಾರತವನ್ನು ಸುಂಕ ವಿನಾಯಿತಿ ಪಟ್ಟಿಯಿಂದ ತೆಗೆದುಹಾಕಿರುವಂತಹ ವಿಚಾರಗಳು ಎರಡು ದೇಶಗಳ ನಡುವಣ ಸಂಬಂಧದಲ್ಲಿ ಬಿರುಕು ಮೂಡುವಂತೆ ಮಾಡಿದೆ.

ಸದ್ಯ ಅಮೆರಿಕದ ರಾಜ್ಯ ಕಾರ್ಯದರ್ಶಿ ಮೈಕ್ ಪೊಂಪೊಯ್ ಅವರು ಭಾರತ ಪ್ರವಾಸದಲ್ಲಿದ್ದು, ಭಾರತ ಹಾಗೂ ಅಮೆರಿಕ ನಡುವಣ ಸಂಬಂದ ಸುಧಾರಣೆಯ ಪ್ರಯತ್ನ ನಡೆಸಲಾಗುತ್ತಿದೆ. ಈ ಮಧ್ಯೆ ರಷ್ಯಾದಿಂದ ಎಸ್ 400 ಟ್ರಯಂಪ್ ಕ್ಷೇಪಣಿ ಖರೀದಿ ದೇಶದ ಹಿತಾಸಕ್ತಿಯ ವಿಚಾರವಾಗಿದ್ದು, ಅದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಭಾರತ ತನ್ನ ನಿಲುವು ಸ್ಪಷ್ಟಪಡಿಸಿದೆ. ಇನ್ನು ಭಾರತ ಕೂಡ ಇತ್ತೀಚೆಗೆ ಅಮೆರಿಕದ ಪ್ರತಿಷ್ಟಿತ ಬೈಕ್ ಹಾರ್ಲೆ ಡೇವಿಡ್ ಸನ್ ಬೈಕ್ ಮೇಲಿನ ಸುಂಕವನ್ನು ಶೇ.100ರಿಂದ ಶೇ.50ಕ್ಕೆ ಇಳಿಸಿತ್ತು. ಆದರೂ ತೃಪ್ತಿಯಾಗದ ಟ್ರಂಪ್, ಭಾರತ ಅಮೆರಿಕದ ಮೇಲೆ ವಿಧಿಸಿರುವ ಸುಂಕ ಸರಿಯಲ್ಲ ಎಂದು ಕಿಡಿ ಕಾರಿದ್ದರು.

ಈ ಎಲ್ಲ ಬೆಳವಣಿಗೆಗಳ ನಡುವೆ ಜಪಾನ್ ನಲ್ಲಿ ನಡೆಯುತ್ತಿರುವ ಜಿ20 ರಾಷ್ಟ್ರಗಳ ಸಭೆ ಭಾರತ ಹಾಗೂ ಅಮೆರಿಕ ನಡುವಣ ಬಾಂಧವ್ಯ ವೃದ್ಧಿಗೆ ಹೇಗೆ ಸಹಕಾರಿಯಾಗಲಿದೆ ಎಂಬ ಕುತೂಹಲ ಮೂಡಿಸಿದೆ.

Leave a Reply