ಸಿಎಂ ಕುಮಾರಸ್ವಾಮಿ ಅಮೆರಿಕ ಪ್ರವಾಸ ಯಾಕೆ..?

ಡಿಜಿಟಲ್ ಕನ್ನಡ ಟೀಮ್:

ಕಲಬುರಗಿ, ರಾಯಚೂರು ಹಾಗೂ ಬೀದರ್ ಜಿಲ್ಲೆಗಳಲ್ಲಿ ಗ್ರಾಮ ವಾಸ್ತವ್ಯ ಹಾಗೂ ಜನತಾ ದರ್ಶನ ನಡೆಸಿದ ಬಳಿಕ ಸಿಎಂ ಕುಮಾರಸ್ವಾಮಿ ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಏರ್ ಇಂಡಿಯಾ ವಿಮಾನದ ಮೂಲಕ ಮುಂಬೈಗೆ ತೆರಳಿದ ಸಿಎಂ ಕುಮಾರಸ್ವಾಮಿಗೆ ಪತ್ನಿ ಅನಿತಾ ಕುಮಾರಸ್ವಾಮಿ ಹಾಗೂ ಆಪ್ತ ಸಚಿವ ಸಾ.ರಾ ಮಹೇಶ್ ಸಾತ್ ನೀಡಿದ್ದಾರೆ. ಮುಂಬೈನಿಂದ ನ್ಯೂಯಾರ್ಕ್‌ಗೆ ಪ್ರಯಾಣ ಮಾಡಲಿದ್ದಾರೆ.

ಕೆಂಪೇಗೌಡ ವಿಮಾನ ನಿಲ್ದಾಣದ ವಿಮಾನ ಹಾರಾಟದಲ್ಲಿ‌ ವ್ಯತ್ಯಯ ಆಗಿದ್ದರಿಂದ ವಿಮಾನ ಒಂದು ಗಂಟೆ ತಡವಾಗಿ ಟೇಕ್ ಆಫ್ ಆಯ್ತು. ಆ ಕಾರಣದಿಂದ  ಸಿಎಂ ಕುಮಾರಸ್ವಾಮಿ ವಿಮಾನ ನಿಲ್ದಾಣದಲ್ಲಿ ಹಿರಿಯ ಅಧಿಕಾರಿಗಳ ಜೊತೆ‌ ಒಂದು ಸುತ್ತು ಸಭೆ ನಡೆಸಿದ್ರು. ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಸಭೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು, ವಿವಿಧ ಇಲಾಖೆ ಅಧಿಕಾರಿಗಳು, ರವಿಕಾಂತೇಗೌಡ ಜೊತೆ ಸುದೀರ್ಘ ಚರ್ಚೆ ನಡೆಸಿದ ಸಿ.ಎಂ ಕುಮಾರಸ್ವಾಮಿ, ಅಧಿಕಾರಿಗಳಿಗೆ ಸಾಕಷ್ಟು ಸೂಚನೆ‌ ನೀಡಿದ ಬಳಿಕ ಪ್ರಯಾಣ ಬೆಳೆಸಿದ್ದಾರೆ.

ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಆಹ್ವಾನದ ಮೇರೆಗೆ ಅಮೆರಿಕಕ್ಕೆ ತೆರಳಿರುವ ಸಿಎಂ ಕುಮಾರಸ್ವಾಮಿ, ಜೂನ್ 30 ರಂದು ನ್ಯೂಜೆರ್ಸಿಯಲ್ಲಿ ಶ್ರೀ ಕಾಲಭೈರವೇಶ್ವರಸ್ವಾಮಿ ದೇವಾಲಯದ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಬಳಿಕ ಜುಲೈ 5 ರಂದು ಅಮೆರಿಕದ ಒಕ್ಕಲಿಗರ ಪರಿಷತ್ ಸಮಾವೇಶದಲ್ಲಿ ಭಾಗವಹಿಸಿ ಹಿಂದಿರುಗಲಿದ್ದಾರೆ ಎಂದು ಸಿಎಂ ಕಚೇರಿ ಮೂಲಗಳು ಮಾಹಿತಿ ನೀಡಿದೆ.

ಪ್ರವಾಸದ ಬಗ್ಗೆ ಇಂದು ಬೆಳಗ್ಗೆ ಬೀದರ್‌ನಲ್ಲಿ ಪ್ರತಿಕ್ರಿಯೆ ಕೊಟ್ಟಿರುವ ಸಿಎಂ ಕುಮಾರಸ್ವಾಮಿ, ಇದು ಸಂಪೂರ್ಣ ಖಾಸಗಿ ಭೇಟಿಯಾಗಿದ್ದು, ಸರ್ಕಾರದಿಂದ  ಯಾವುದೇ ಭತ್ಯೆ ಪಡೆಯುವುದಿಲ್ಲ. ಸ್ವಂತ ಖರ್ಚಿನಲ್ಲಿ ಪ್ರವಾಸ ಕೈಗೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ಆದ್ರೆ‌ ಸಿಎಂ ಯಾವುದೇ ಅಧಿಕಾರಿಗಳನ್ನು ಕರೆದುಕೊಂಡು ಹೋಗುತ್ತಿಲ್ಲ. ಖಾಸಗಿ ಪ್ರವಾಸವಾದರೂ ಆಪ್ತ ಅಧಿಕಾರಿಗಳನ್ನು ಕರೆದುಕೊಂಡು ಹೋಗುವುದು ರೂಢಿ. ಆಡಳಿತಕ್ಕೆ ಸಂಬಂಧಿಸಿದ ಕೆಲಸಗಳನ್ನು ಅಲ್ಲಿಂದಲೇ ಮಾಡುವ ಉದ್ದೇಶದಿಂದ ಅಧಿಕಾರಿಗಳನ್ನು ಕರೆದುಕೊಂಡು ಹೋಗ್ತಾರೆ. ಆದ್ರೆ ಸಿಎಂ ಕುಮಾರಸ್ವಾಮಿ ಮಾತ್ರ ಪತ್ನಿ ಅನಿತಾ ಕುಮಾರಸ್ವಾಮಿ ಹಾಗೂ ಆಪ್ತ ಸಚಿವ ಸಾ.ರಾ ಮಹೇಶ್‌ರನ್ನು ಮಾತ್ರ ಜೊತೆಗೆ ಕರೆದುಕೊಂಡು ಹೋಗ್ತಿದ್ದಾರೆ.

ಸಿಎಂ ಈ ಮೊದಲು ಜನವರಿಯಲ್ಲಿ ವಿದೇಶ ಪ್ರವಾಸ ಕೈಗೊಂಡು ಆರೋಗ್ಯ ತಪಾಸಣೆಗೆ ಒಳಗಾಗಲಿದ್ದಾರೆ ಅನ್ನೋ ಮಾಹಿತಿ ಹರಿದಾಡುತ್ತು. ಆದರೆ ಸಿಎಂ ಕುಮಾರಸ್ವಾಮಿ ಆ ವರದಿಯನ್ನು ಅಲ್ಲಗಳೆದಿದ್ರು. ಆ ಬಳಿಕ ಚುನಾವಣೆ ಮುಗಿದ ಬಳಿಕ ವಿದೇಶಕ್ಕೆ ತೆರಳಿ ಆರೋಗ್ಯ ತಪಾಸಣೆಗೆ ಒಳಗಾಗಿ ವಾಪಸ್ ಆಗಿದ್ದರು.

Leave a Reply