ಬ್ರಿಟೀಷರ ಸೀರೆ ಸೆರಗು ಹಿಡಿದು ಮತ್ತೆ ಸಿಎಂ ಆಗಲು ಸಿದ್ದರಾಮಯ್ಯ ಪ್ರಯತ್ನ! ಈಶ್ವರಪ್ಪ ಹೇಳಿಕೆಯ ಅರ್ಥವೇನು?

ಡಿಜಿಟಲ್ ಕನ್ನಡ ಟೀಮ್:

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕದ ರೆಬೆಲ್ ರಾಜಕಾರಣಿ. ಲೋಕಸಭೆಯಲ್ಲಿ ಹೀನಾಯ ಸೋಲಿನ ಬಳಿಕ ಬಾದಾಮಿ ಕ್ಷೇತ್ರದತ್ತ ಮುಖ ಮಾಡದ ಸಿದ್ದರಾಮಯ್ಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗಿತ್ತು. ಪರಿಣಾಮ ಐದು ದಿನಗಳ ಪ್ರವಾಸ ಕೈಗೊಂಡಿರುವ ಸಿದ್ದರಾಮಯ್ಯ ಕಳೆದ ಎರಡು ದಿನಗಳಿಂದ ಬಾದಾಮಿ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳಿಗಾಗಿ ಸಂಚಾರ ಮಾಡುತ್ತಿದ್ದಾರೆ.

ಬಾದಾಮಿಯಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ, ‘ಅಕ್ಕಿ ಕೊಟ್ಟಿದ್ದು ನಾನು, ಹಾಲು ಕೊಟ್ಟಿದ್ದು ನಾನು ಆದ್ರೆ ನೀವು ನಮ್ಮನ್ನೇ ಸೋಲಿಸಿದ್ದೀರಿ. ಮೋದಿ ಮುಖ ನೋಡಿ ಬಿಜೆಪಿಗೆ ಮತ ಹಾಕಿದ್ದೀರಿ’ ಎಂದು ಮತದಾರರನ್ನು ಪ್ರಶ್ನಿಸಿದ್ದರು. ಸಿದ್ದರಾಮಯ್ಯರ ಈ ಹೇಳಿಕೆಯನ್ನೇ ಬಿಜೆಪಿ ಟೀಕಾಸ್ತೃ ಮಾಡಿಕೊಂಡು ದಾಳಿ ಮಾಡುತ್ತಿದೆ.

ಕುರುಬ ಸಮುದಾಯ ಹೆಚ್ಚಾಗಿ ಇರುವ ಬಾಗಲಕೋಟೆಯಲ್ಲಿ ಸಿದ್ದರಾಮಯ್ಯ ಪ್ರಭಾವ ಹೆಚ್ಚಾಗದಂತೆ ತಡೆಯಲು ಮುಂದಾಗಿರುವ ಬಿಜೆಪಿ, ಸಿದ್ದರಾಮಯ್ಯ ಪ್ರವಾಸಕ್ಕೆ ಎದುರಾಗಿ ಈಶ್ವರಪ್ಪ ಪ್ರವಾಸ ಮಾಡಿದ್ದಾರೆ. ಬಾಗಲಕೋಟೆಯಲ್ಲಿ ಬಿಜೆಪಿ ಮುಖಂಡ ಕೆ.ಎಸ್ ಈಶ್ವರಪ್ಪ ಮಾತನಾಡಿದ್ದು, ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.

‘ಹೌದು, ಸಿದ್ದರಾಮಯ್ಯ ಸರಿಯಾಗಿ ಹೇಳಿದ್ದಾರೆ. ಕೆಲಸಗಾರ ನರೇಂದ್ರ ಮೋದಿಯನ್ನು ಜನರು ಗೆಲ್ಲಿಸಿದ್ದಾರೆ, ನಿದ್ದೆ ಮಾಡುವ ಸಿದ್ದರಾಮಯ್ಯನನ್ನು ಮನೆಗೆ ಕಳಿಸಿದ್ದಾರೆ ಎಂದು ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ. ಸಿದ್ದರಾಮಯ್ಯ ಅಂದ್ರೆ ನಿದ್ದೆರಾಮಯ್ಯ. ಕಳೆದ ಐದು ವರ್ಷ ನಿದ್ದೆ ಮಾಡಿದ್ರು. ಅದಕ್ಕೆ ಜನರು ಮನೆಗೆ ಕಳುಹಿಸಿದ್ದಾರೆ. ಸಿದ್ದರಾಮಯ್ಯ ಹಾಲು ಕೊಟ್ಟೆ ,ಮೊಟ್ಟೆ ಕೊಟ್ಟೆ, ಶೂ ಕೊಟ್ಟೆ ಎನ್ನುತ್ತಾರೆ. ಮೊಟ್ಟೆ , ಶೂ, ಹಾಲು, ಅಕ್ಕಿ ಎಲ್ಲವನ್ನೂ ಸಿದ್ದರಾಮಯ್ಯ ತನ್ನ ಜೇಬಿನ ಹಣದಿಂದ ಕೊಟ್ರಾ? ಅನ್ನಭಾಗ್ಯ ಯೋಜನೆಗೆ ಮೋದಿ ಸರ್ಕಾರ ಪ್ರತಿ ಕೆಜಿ ಅಕ್ಕಿಗೆ 28 ರೂಪಾಯಿ ಕೊಡ್ತಾರೆ. ಇದನ್ನು ಸಿದ್ದರಾಮಯ್ಯ ರಾಜ್ಯದ ಜನಕ್ಕೆ ಸ್ಪಷ್ಟಪಡಿಸಲಿ’ ಎಂದು ಆಗ್ರಹ ಮಾಡಿದ್ರು.

ಇನ್ನು ರಾಜ್ಯದಲ್ಲಿ ಯಾವುದೇ ಸಂದರ್ಭದಲ್ಲಿ ಮಧ್ಯಂತರ ಚುನಾವಣೆ ನಡೆದರೆ ಸಿದ್ದರಾಮಯ್ಯ ಹೇಳಿಕೆಯನ್ನೇ ಹಿಡಿದುಕೊಂಡು ಪ್ರಚಾರ ಮಾಡ್ತಿವಿ ಎಂದು ಸವಾಲು ಹಾಕಿರುವ ಈಶ್ವರಪ್ಪ, ‘ಕೆಲಸ ಮಾಡುವವರಿಗೆ ವೋಟ್ ಕೊಡಿ, ನಿದ್ದೆ ಮಾಡುವವರಿಗೆ ವೋಟ್ ಕೊಡ್ಬೇಡಿ ಅಂತ ಪ್ರಚಾರ ಮಾಡ್ತೀವಿ. ಸಿದ್ದರಾಮಯ್ಯ ಬಿಜೆಪಿಯನ್ನು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಗೆ ಹೋಲಿಕೆ ಮಾಡಿದ್ದಾರೆ. ಆದರೆ ದೇಶಕ್ಕೆ ಬ್ರಿಟಿಷರನ್ನು ದೇಶಕ್ಕೆ ಕರೆ ತಂದವರು ಯಾರು? ಅವರ ಜೊತೆ ಸಂಬಂಧ ಇಟ್ಟುಕೊಂಡುವರು ಯಾರು? ಎಂದು ಪ್ರಶ್ನಿಸಿದ್ದಾರೆ. ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರ ಬ್ರಿಟಿಷ್‌ರೊಂದಿಗೆ ಯಾರು ಸಂಬಂಧ ಇಟ್ಟುಕೊಂಡಿದ್ದಾರೆ ಎಂಬುದು ದೇಶದ ಜನಕ್ಕೆ ಗೊತ್ತಿದೆ. ಸಿದ್ದರಾಮಯ್ಯ ಏನೂ ಗೊತ್ತಿಲ್ಲದೆ ಬಾಯಿಗೆ ಬಂದಂಗೆ ಮಾತನಾಡ್ತಾರೆ. ಬ್ರಿಟಿಷರ ಸಂತತಿ ಇನ್ನೂ ನಮ್ಮ ದೇಶದಲ್ಲಿದೆ. ಯಾರಿದ್ದಾರೆ ಅನ್ನೋದು ನಿಮಗೂ ಗೊತ್ತಿದೆ. ಅವರ ಸೆರಗನ್ನೇ ಹಿಡಿದುಕೊಂಡು ಸಿದ್ದರಾಮಯ್ಯ ಓಡಾಡುತ್ತಿದ್ದಾರೆ. ಸಿದ್ದರಾಮಯ್ಯ ಬ್ರಿಟೀಷರ ಸೆರಗು ಹಿಡಿದುಕೊಂಡು ಮತ್ತೆ ಸಿಎಂ ಕನಸು ಕಾಣುತ್ತಿದ್ದಾರೆ’ ಎಂದು ಸೋನಿಯಾ ಗಾಂಧಿ‌ ಹೆಸರೇಳದೆ ಸಿದ್ದರಾಮಯ್ಯ ಅವರಿಗೆ ಮಾತಿನ ಚಾಟಿ ಬೀಸಿದ್ದಾರೆ.

Leave a Reply