ಟೀಂ ಇಂಡಿಯಾ ಅಜೇಯ ಯಾತ್ರೆಗೆ ಆತಿಥೇಯ ಆಂಗ್ಲರ ಸವಾಲು! ಭಾರತ ಗೆಲುವಿನ ಹಿಂದಿದೆ ತುಂಬಾ ಲೆಕ್ಕಾಚಾರ!

ಡಿಜಿಟಲ್ ಕನ್ನಡ ಟೀಮ್:

ಆಂಗ್ಲರ ನೆಲದಲ್ಲಿ ನಡೆಯುತ್ತಿರುವ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿ ರೋಚಕ ಘಟ್ಟ ತಲುಪಿದೆ. ಆಸ್ಟ್ರೇಲಿಯಾ ಹೀಗಾಗಲೇ ಉಪಾಂತ್ಯಕ್ಕೆ ಪ್ರವೇಶಿಸಿದ್ದು, ಭಾರತ, ನ್ಯೂಜಿಲೆಂಡ್ ಸೆಮೀಸ್ ಹೊಸ್ತಿಲಲ್ಲಿ ನಿಂತಿದೆ. ಟೂರ್ನಿಯಲ್ಲಿ ಸೋಲರಿಯದ ತಂಡವಾಗಿರುವ ಭಾರತ ಮುಂದಿನ ಮೂರು ಪಂದ್ಯಗಳಲ್ಲಿ ಒಂದರಲ್ಲಿ ಗೆದ್ದರೆ ಸಾಕು. ಈ ಪೈಕಿ ಮುಂದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೆಣಸಲಿರುವ ಕೊಹ್ಲಿ ಬಳಗ, ನಂತರ ಶ್ರೀಲಂಕಾ ಹಾಗೂ ಬಾಂಗ್ಲಾ ವಿರುದ್ಧ ಆಡಲಿದೆ.

ಭಾರತ ಸದ್ಯ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದು, ಸೆಮೀಸ್ ಪ್ರವೇಶ ಬಹುತೇಕ ಖಚಿತವಾಗಿದೆ. ಆದರೆ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡ ಎನಿಸಿಕೊಂಡಿದ್ದ ಇಂಗ್ಲೆಂಡ್ ಆಗಲೇ 3 ಪಂದ್ಯಗಳಲ್ಲಿ ಸೋತಿರುವುದು ಉಪಾಂತ್ಯಕ್ಕೆ ಪ್ರವೇಶಿಸಬೇಕಾದರೆ ಮುಂದಿನ ಎರಡೂ ಪಂದ್ಯಗಳನ್ನು ಗೆಲ್ಲಲೇಬೇಕಾಗಿದೆ. ಇಂಗ್ಲೆಂಡ್ ಪಂದ್ಯದ ಸೋಲಿನ ಫಲಿತಾಂಶ ನಿರೀಕ್ಷೆಯಲ್ಲಿ ಪಾಕಿಸ್ತಾನ ತಂಡವಿದ್ದು, ಇಂಗ್ಲೆಂಡ್ ಸೋತರೆ ಪಾಕಿಸ್ತಾನ ಸೆಮೀಸ್ ಹಾದಿ ತೆರೆದುಕೊಳ್ಳಲಿದೆ.

ಹೀಗಾಗಿ ಭಾರತ ಇಂಗ್ಲೆಂಡ್ ವಿರುದ್ಧ ಸೋತರೂ ಸರಿ ಪಾಕಿಸ್ತಾನ ಸೆಮಿಫೈನಲ್ ಪ್ರವೇಶಿಸಬಾರದು ಎಂಬುದು ಕೆಲವು ಅಭಿಮಾನಿಗಳ ನಿರೀಕ್ಷೆಯಾಗಿದೆ. ಆದರೆ ಭಾರತ ತಂಡ ತನಗೆ ಸಿಕ್ಕಿರುವ ಗೆಲುವಿನ ಲಯವನ್ನು ಕಳೆದುಕೊಳ್ಳಲು ಇಚ್ಛಿಸುವುದಿಲ್ಲ. ಇಂಗ್ಲೆಂಡ್ ತಂಡದಲ್ಲಿ ಆಡುವ ಹನ್ನೊಂದು ಆಟಗಾರರು ಮ್ಯಾಚ್ ವಿನ್ನರ್ ಗಳಾಗಿದ್ದರೂ ಅನಿರೀಕ್ಷಿತ ಸೋಲುಗಳು ತಂಡವನ್ನು ಒತ್ತಡಕ್ಕೆ ಸಿಲುಕುವಂತೆ ಮಾಡಿದೆ. ಹೀಗಾಗಿ ಆತ್ಮ ವಿಶ್ವಾಸದಲ್ಲಿ ಬೀಗುತ್ತಿರುವ ಭಾರತಕ್ಕೆ ಆಂಗ್ಲರು ಎಷ್ಟರ ಮಟ್ಟಿಗೆ ಸವಾಲೊಡ್ಡುವರು ಎಂಬ ಕುತೂಹಲ ಮೂಡಿದೆ.

ಭಾರತ ಇಂಗ್ಲೆಂಡ್ ವಿರುದ್ಧ ಗೆಲುವು ಸಾಧಿಸಿದರೆ ಭಾರತಕ್ಕೆ ಫೈನಲ್ ಪ್ರವೇಶದ ಹಾದಿ ಸುಲಭ. ಹೇಗೆಂದರೆ, ಇಂಗ್ಲೆಂಡ್ ತಂಡ ಸೋತು ಟೂರ್ನಿಯಿಂದ ಹೊರಬಿದ್ದು, ಪಾಕಿಸ್ತಾನ ನಾಲ್ಕನೇ ಸ್ಥಾನಕ್ಕೇರಿ ಉಪಾಂತ್ಯಕ್ಕೆ ಪ್ರವೇಶಿಸಿದರೆ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ಮತ್ತೆ ಮುಖಾಮುಖಿಯಾಗಲಿದೆ. ಭಾರತ ಇಂಗ್ಲೆಂಡ್ ವಿರುದ್ಧ ಗೆದ್ದರೆ, ನಂತರದ ಎರಡು ಪಂದ್ಯಗಳಲ್ಲಿ ಗೆಲುವು ಸುಲಭವಾಗಲಿದೆ. ಆಗ ಭಾರತ ಅಗ್ರಸ್ಥಾನ ಪಡೆಯಲಿದೆ. ಸೆಮಿಫೈನಲ್ ನಲ್ಲಿ ಮೊದಲ ಪಂದ್ಯ ಅಂಕಪಟ್ಟಿಯಲ್ಲಿ ಮೊದಲ ಹಾಗೂ ನಾಲ್ಕನೇ ಸ್ಥಾನದ ತಂಡಗಳ ನಡುವೆ ನಡೆಯಲಿದೆ. ಪೀಗಾಗಿ ಭಾರತ ಮತ್ತು ಪಾಕ್ ಮತ್ತೆ ಕಾದಾಟ ನಡೆಸುವ ಸಾಧ್ಯತೆ ಇದೆ. ಇನ್ನು ಎರಡನೇ ಸೆಮೀಸ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಕಾದಾಡಲಿವೆ.

ಉಪಾಂತ್ಯದಲ್ಲಿ ಭಾರತಕ್ಕೆ ಪಾಕಿಸ್ತಾನ ಸಿಕ್ಕರೆ ಉತ್ತಮ. ಏಕೆಂದರೆ ಪಾಕಿಸ್ತಾನ ಈವರೆಗೂ ವಿಶ್ವಕಪ್ ಪಂದ್ಯದಲ್ಲಿ ಭಾರತವನ್ನು ಸೋಲಿಸಿಲ್ಲ. ಇನ್ನು ಈ ಟೂರ್ನಿಯಲ್ಲಿನ ಸೋಲು ಪಾಕಿಸ್ತಾನದ ಮೇಲಿನ ಒತ್ತಡವನ್ನು ಹೆಚ್ಚಿಸಿದೆ. ಈ ಒತ್ತಡದಲ್ಲಿರುವ ಪಾಕಿಸ್ತಾನದ ವಿರುದ್ಧ ಸಂಘಟಿತ ಪ್ರದರ್ಶನ ನೀಡುತ್ತಿರುವ ಭಾರತ ಗೆಲುವು ಸುಲಭವಾಗಲಿದೆ. ಹೀಗಾಗಿ ಭಾರತಕ್ಕೆ ಉಪಾಂತ್ಯದಲ್ಲಿ ಆತಿಥೇಯ ಆಂಗ್ಲರಿಗಿಂತ ಪಾಕಿಸ್ತಾನವೇ ಸುಲಭ ಎದುರಾಳಿ. ಹೀಗಾಗಿ ಕೊಹ್ಲಿ ಪಡೆ ತಮ್ಮ ಅಜೇಯ ಯಾತ್ರೆ ಮುಂದುವರಿಸುವುದರ ಜತೆಗೆ ಫೈನಲ್ ಹಾದಿ ಸುಗಮ ಮಾಡಿಕೊಳ್ಳುವತ್ತಲೂ ಯೋಚಿಸಿ ಪಂದ್ಯ ಗೆಲ್ಲಲು ಪ್ರಯತ್ನಿಸಲಿದೆ.

Leave a Reply