ಸಿದ್ದರಾಮಯ್ಯ ಶಿಷ್ಯರ ಸಿಡಿಮಿಡಿಗೆ ರೇವಣ್ಣ ಗಿರ್‌ಮಿಟ್..!?

ಡಿಜಿಟಲ್ ಕನ್ನಡ ಟೀಮ್:

ಕುಮಾರಸ್ವಾಮಿಯ ಒಂದು‌ ಕಾಲದ ಆಪ್ತರು, ಕಾಲಚಕ್ರ ಬದಲಾದಂತೆ ವಿರೋಧಿಗಳಾಗಿ ರೂಪುಗೊಂಡಿದ್ದಾರೆ. ಜೆಡಿಎಸ್‌ನಿಂದ ಹೊರ ಹೋದ ಕುಮಾರಸ್ವಾಮಿ ಆಪ್ತ ಬಳಗ ಇದೀಗ ರಾಜಕಾರಣದ ಅನಿವಾರ್ಯತೆಯಲ್ಲಿ ಕಾಂಗ್ರೆಸ್ ಸೇರಿ ಒಂದು ಕಾಲದ ರಾಜಕೀಯ ವಿರೋಧಿ ಸಿದ್ದರಾಮಯ್ಯನ ಶಿಷ್ಯರಾಗಿದ್ದಾರೆ. ಕಳೆದ ವಿಧಾನಸಭೆಯಲ್ಲಿ ಸಿದ್ದರಾಮಯ್ಯನ ಶಿಷ್ಯರಿಗೆ ಸೋಲುಣಿಸಿ ಅಬ್ಬರಿಸಿದ ಜೆಡಿಎಸ್, ಅತಂತ್ರ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ಬೆಂಬಲದಿಂದಲೇ ಸರ್ಕಾರ ರಚನೆ ಮಾಡಿ ಅಧಿಕಾರ ಅನುಭವಿಸುತ್ತಿದೆ. ಇದೀಗ ಇಕ್ಕಟ್ಟಿಗೆ ಸಿಲುಕಿರುವುದು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿರುವ ಕುಮಾರಸ್ವಾಮಿಯ ಒಂದು ಕಾಲದ ಮಿತ್ರಕೂಟ. ಮಾತನಾಡುವಂತಿಲ್ಲ, ಮಾತನಾಡದಂತೆಯೂ ಇಲ್ಲ ಅನ್ನೋ ಪರಿಸ್ಥಿತಿಯಲ್ಲಿ ತೊಳಲಾಡುತ್ತಿದೆ. ಇದೀಗ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರ್ಕಾರದ ವಿರುದ್ಧವೇ ಆಗೊಮ್ಮೆ ಈಗೊಮ್ಮೆ ವಾಗ್ದಾಳಿಗಳು ಹೊರಬರುತ್ತಿವೆ. ಇವತ್ತು ಚಲುವರಾಯಸ್ವಾಮಿ ಹಾಗೂ ಬಾಲಕೃಷ್ಣ ವಾಗ್ದಾಳಿ ನಡೆಸಿದ್ದಾರೆ.

ಮಂಡ್ಯದಲ್ಲಿ ಮಾತನಾಡಿದ ಚಲುವರಾಸ್ವಾಮಿ, ಮಗನ ಸೋಲಿನ‌ ನಂತರ ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡ್ಯ ಜಿಲ್ಲೆಯನ್ನು ಕಡೆಗಣಿಸುತ್ತಿದ್ದಾರೆ ಅನ್ನೋ ರೀತಿ ಮಾತನಾಡಿದ್ದಾರೆ. ಪರೋಕ್ಷವಾಗ ಚಾಟಿ ಬೀಸಿರುವ ಮಾಜಿ‌ ಸಚಿವ ಚಲುವರಾಯಸ್ವಾಮಿ, ವೈಯಕ್ತಿಕ ಕಾರಣ ಏನೇ ಇರಲಿ ಮಂಡ್ಯ ಜಿಲ್ಲೆಯನ್ನು ಕಡೆಗಣಿಸಬೇಡಿ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿಗೆ ನೇರವಾಗಿ ಮನವಿ ಮಾಡಿದರು. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬಿಂಡಿಗನವಿಲೆಯಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಭಾಷಣ ಮಾಡಿದ ಚಲುವರಾಯಸ್ವಾಮಿ, ಮಂಡ್ಯ ರೈತರ ಬೆಳೆಗೆ 10 – 15 ದಿನಗಳ ಕಾಲ ನೀರು ಬಿಡುವ ಅವಕಾಶ ಇತ್ತು. ಆದ್ರೆ ಇಂದಿನ ದುರಾದೃಷ್ಟ ಜಿಲ್ಲೆಯ ಒಬ್ಬ ಜನಪ್ರತಿನಿಧಿಯೂ ಕಾವೇರಿ ಸಭೆ ಕರೆಯಲಿಲ್ಲ. ಮುಖ್ಯಮಂತ್ರಿ ಬಳಿ ಜಿಲ್ಲೆಯ ಸಮಸ್ಯೆ ಬಗ್ಗೆ ಹೇಳಲಿಲ್ಲ. ಅದಕ್ಕೆ ಕಾರಣ ಕಳೆದ ಚುನಾವಣೆಯಲ್ಲಿ ವ್ಯತ್ಯಾಸ ಮಾಡಿದರು ಅಂತಾ ಸಿಟ್ಟು ಬಂದಿದೆಯೋ, ಜನಕ್ಕೆ ಸಹಾಯ ಮಾಡೋದು ಬೇಡ ಎಂಬ ಅಸಮಾಧಾನ ಆಗಿದೆಯೋ ಗೊತ್ತಿಲ್ಲ ಅಂದ್ರು. ಇದೀಗ ಪ್ರಾಧಿಕಾರದ ಒಪ್ಪಿಗೆ ಬೇಕು ಎಂಬ ಸಬೂಬು ಹೇಳುತ್ತಿದ್ದಾರೆ. ಆದರೆ ಪ್ರಾಧಿಕಾರ ರಚನೆ ಆದ ಮೇಲೂ ಚುನಾವಣೆ ವೇಳೆ ಪ್ರಾಧಿಕಾರದ ಅನುಮತಿ ಪಡೆಯದೇ ಮೂರು ಬಾರಿ ನೀರು ಬಿಟ್ಟಿದ್ದಾರೆ. ಆ ಬಳಿಕ ಪ್ರಾಧಿಕಾರಕ್ಕೆ ಮಾಹಿತಿ ನೀಡಿದ ನಿದರ್ಶನ, ಇದೇ ಸರ್ಕಾರದಲ್ಲಿ ಇದೆ ಎಂದಿದ್ದಾರೆ. ಇನ್ನು ವೈಯಕ್ತಿಯ ಕಾರಣ ಏನೇ ಇರಲಿ. ಅವಕಾಶ ಎಲ್ಲ ಸಮಯದಲ್ಲೂ ಬರಲ್ಲ. 120 ಜನ ಗೆದ್ದು ಮುಖ್ಯಮಂತ್ರಿ ಆದರೂ ಒಂದೇ, 30 ಜನ ಗೆದ್ದು ಮುಖ್ಯಮಂತ್ರಿ ಆದರೂ ಒಂದೇ. ನಿಮ್ಮ‌ ಸಹಿ ಬದಲಾಗಲ್ಲ. ಅಧಿಕಾರ ಶಾಶ್ವತವಲ್ಲ. ಯಾವುದೇ ಕಾರಣದಿಂದಲೂ ಜಿಲ್ಲೆಯನ್ನು ಕಡೆಗಣಿಸಬೇಡಿ ಎಂದು ಚಾಟಿ ಮೂಲಕವೇ ಮನವಿ ಸಲ್ಲಿಸಿದ್ದಾರೆ.

ಇತ್ತ ರಾಮನಗರ ಜಿಲ್ಲೆ ಮಾಗಡಿಯಲ್ಲಿ‌ಮತ್ತೋರ್ವ ಮಾಜಿ ಆಪ್ತ ಸಿಎಂ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ನನ್ನನ್ನ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಸಿಎಂ ವಿರುದ್ಧ ಮಾಗಡಿಯ ಮಾಜಿ ಶಾಸಕ ಹೆಚ್.ಸಿ.ಬಾಲಕೃಷ್ಣ ವಾಗ್ದಾಳಿ ನಡೆಸಿದ್ದು, ನನ್ನ ತಮ್ಮನನ್ನ ಬಿಡಿಸಿಸಿ ಬ್ಯಾಂಕ್‌ನಿಂದ ವಜಾ ಮಾಡಿಸಿದ್ರು. ಸ್ವತಃ ದೇವೇಗೌಡರೇ ಅಧಿಕಾರಿಗಳಿಗೆ ಒತ್ತಡ ತಂದು ವಜಾ ಮಾಡಿಸಿದ್ರು. ನಂತರ ನನ್ನ ಬೆಂಬಲಿಗ ಬಮೂಲ್ ಎಲೆಕ್ಷನ್‌ನಲ್ಲಿ ಗೆದ್ದಿದ್ದವರನ್ನ ಅನೂರ್ಜಿತ ಮಾಡಿಸಿದ್ರು. ಈಗ ನನ್ನ ಬೆಂಬಲಿಗನ ಜಮೀನನ್ನ ವಶಕ್ಕೆ ಪಡೆಸಿಕೊಂಡು ಒಕ್ಕಲೆಬ್ಬಿಸಲು ಸೂಚಿಸಿದ್ದಾರೆ ಎಂದು ಕಿಡಿಕಾರಿದ್ದಾರೆ. ಈ ಸರ್ಕಾರದಲ್ಲಿ ಸಾಕಷ್ಟು ಲೋಪದೋಷಗಳಿವೆ‌ ಆದರೆ ನಾವು ಒಂದು ವರ್ಷದಿಂದ ಈ ಬಗ್ಗೆ ಮಾತನಾಡಿಲ್ಲ. ಆದರೆ ಇವರು ನಮಗೆ ತೊಂದರೆ ಕೊಡ್ತಿದ್ದಾರೆ. ಮುಂದಿನ ದಿನಗಳಲ್ಲಿ ಮಾಗಡಿ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರನ್ನ ಉಳಿಸಿ ಎಂದು ಬೆಂಗಳೂರಿನ ಕೆಪಿಸಿಸಿ ಕಚೇರಿ ಎದುರು ಪ್ರತಿಭಟನೆ ಮಾಡ್ತೀವಿ ಎಂದಿರುವ ಬಾಲಕೃಷ್ಣ, ಇವರೇನು 125 ಸೀಟ್ ಗೆದ್ದು ಸಿಎಂ ಆಗಿಲ್ಲ. ನಮ್ಮ ಹಂಗಿನಲ್ಲಿ ಸಿಎಂ ಆಗಿದ್ದು ನಮಗೇ ಹೊಡೆದ್ರೆ ಸುಮ್ಮನಿರಲ್ಲ. ಜೆಡಿಎಸ್‌ನಲ್ಲಿ ಭದ್ರತೆಯಿಲ್ಲ ಎಂದು ಕಾಂಗ್ರೆಸ್ ಸೇರಿಕೊಂಡಿದ್ದೇವೆ. ಈ ಸರ್ಕಾರದ ಕಥೆ ಯಾವಾಗ ಏನೋ ಗೊತ್ತಿಲ್ಲ.ನಮಗೂ ಗತಿಯಿಲ್ಲದೆ ಜೆಡಿಎಸ್‌ನವರಿಗೆ ಸಿಎಂ ಸ್ಥಾನ ಬಿಟ್ಟುಕೊಟ್ಟಿದ್ದೇವೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಮಂಡ್ಯದಲ್ಲಿ ಚಲುವರಾಸ್ವಾಮಿ ಮಾತಿಗೆ ತಿರುಗೇಟು ಕೊಟ್ಟಿರುವ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ, ಕೆಲವರು ಆಪಾದನೆ ಮಾಡ್ತಾನೆ ಇರ್ತಾರೆ. ಅವರ ಆಪಾದನೆಗೆ ಉತ್ತರ ಕೊಡ್ತಾ ಹೋದ್ರೆ ಪೊಳ್ಳೆದ್ದು ಹೋಗ್ತೀವಿ. ಮಂಡ್ಯ ಜಿಲ್ಲೆಗೆ ಕಾವೇರಿ ನೀರಿನ ಅವಶ್ಯಕತೆ ಬಗ್ಗೆ ಸಂಸತ್‌ನಲ್ಲಿ ಸಂಸದ ಪ್ರಜ್ವಲ್ ಮಾತನಾಡಿದ್ದಾರೆ. ನೀರಿನ ಹೆಸಲ್ಲಿ ರೈತರು ಪ್ರತಿಭಟನೆ ರಾಜಕೀಯ ಮಾಡಿದ್ರೆ ನಾವ್ಯಾಕೆ ಅಲ್ಲಿಗೆ ಹೋಗಬೇಕು‌ ಎನ್ನುವ ಮೂಲಕ ಪ್ರತಿಭಟನಾ ಸ್ಥಳಕ್ಕೆ ತೆರಳಿ ಅಹವಾಲು ಸ್ವೀಕರಿಸದ ಮಂಡ್ಯದ ಜನಪ್ರತಿನಿಧಿಗಳ ಕ್ರಮವನ್ನು ಸಮರ್ಥಿಸಿಕೊಂಡರು. ಜೊತೆಗೆ ನೀರು ಬಿಡೋದು ನಮ್ಮ ಕೈಯಲ್ಲಿ ಇಲ್ಲ. ಕೆಲವರಿಗೆ ದೇವೇಗೌಡರ ಕುಟುಂಬದ ಬಗ್ಗೆ ಮಾತನಾಡದಿದ್ದರೆ ನಿದ್ರೆ ಬರೋಲ್ಲ. ಅದಕ್ಕೆ ಸುಮ್ಮನೆ ಎಲ್ಲದಕ್ಕೂ ದೇವೇಗೌಡರ ಕುಟುಂಬದ ಬಗ್ಗೆ ಮಾತನಾಡುತ್ತಾರೆ. ದೇವೇಗೌಡರು ನೀರು ಬಿಡಿಸೋಕೆ ಆಗುತ್ತಾ.? ಪಾಪ ಅವರೇ ಸೋತು ಮನೆಲ್ಲಿ ಕುಳಿತಿದ್ದಾರೆ ಎನ್ನುವ ಮೂಲಕ ಮಂಡ್ಯದಲ್ಲಿ ಯಾರನ್ನು ಗೆಲ್ಲಿಸಿದ್ದೀರಿ ಅವರು ನೀರು ಬಿಡಿಸುತ್ತಾರೆ ಎಂದು ಸುಮಲತಾಗೆ ಪರೋಕ್ಷ ಟಾಂಗ್ ಕೊಟ್ಟಿದ್ದಾರೆ.

Leave a Reply