ಆನಂದ್ ಸಿಂಗ್ ರಾಜೀನಾಮೆ!? ಮೈತ್ರಿ ಸರ್ಕಾರಕ್ಕೆ ದೊಡ್ಡ ಶಾಕ್

ಡಿಜಿಟಲ್ ಕನ್ನಡ ಟೀಮ್:

ಕಾಂಗ್ರೆಸ್​ ಅತೃಪ್ತರ ಬಣದಲ್ಲಿ ಗುರುತಿಸಿಕೊಂಡಿದ್ದ ಕಾಂಗ್ರೆಸ್​ ಶಾಸಕ ಆನಂದ್​ ಸಿಂಗ್ ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅದರೊಂದಿಗೆ ಲೋಕಸಭೆ ಚುನಾವಣೆ ಸೋಲು, ಪಕ್ಷದ ಆಂತರಿಕ ಕಚ್ಚಾಟದಿಂದ ಕಂಗೆಟ್ಟಿದ್ದ ಕಾಂಗ್ರೆಸ್ ಗೆ ದೊಡ್ಡ ಆಘಾತ ಎದುರಾಗಿದೆ. ಆನಂದ್ ಸಿಂಗ್ ಅವರ ರಾಜೀನಾಮೆ ಬೆನ್ನಲ್ಲೇ ಇತರೆ ಅತೃಪ್ತರ ನಡೆ ಏನು ಎಂಬ ಕುತೂಹಲ ಮೂಡಿದ್ದು, ಮೈತ್ರಿ ಸರ್ಕಾರಕ್ಕೆ ಅತೃಪ್ತರು ಕಂಟಕವಾಗ್ತಾರಾ ಎಂಬ ಪ್ರಶ್ನೆ ಉದ್ಭವಿಸಿದೆ.

ಈಗಾಗಲೇ ಆನಂದ್ ಸಿಂಗ್ ಅವರು ತಮ್ಮ ರಾಜೀನಾಮೆ ಪತ್ರವನ್ನು ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ರವಾನೆ ಮಾಡಿದ್ದು, ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೂ ನಂದ್ ರಾಜೀನಾಮೆ ನೀಡುವ ಸಾಧ್ಯತೆಯಿದೆ. ಈ ಬೆಳವಣಿಗೆಗಳ ನಡುವೆ ಆನಂದ್ ಸಿಂಗ್ ಕಾಂಗ್ರೆಸ್​ ತೊರೆದು ಶೀಘ್ರದಲ್ಲೇ ಬಿಜೆಪಿ ಸೇರಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಆ ಮೂಲಕ ರಾಜ್ಯದಲ್ಲಿ ಆಪರೇಷನ್ ಕಮಲಕ್ಕೆ ಹೊಸ ಉತ್ಸಾಹ ಬರಲಿದೆ.

ಕಳೆದ ವರ್ಷ ಆಪರೇಷನ್​ ಕಮಲಕ್ಕೆ ಕೈಹಾಕಿದ್ದ ಬಿಜೆಪಿಯ ಗಾಳಕ್ಕೆ ಸಿಲುಕಿದ್ದ ಶಾಸಕರಲ್ಲಿ ಆನಂದ್​ ಸಿಂಗ್ ಕೂಡ ಒಬ್ಬರಾಗಿದ್ದರು. ಅದೇ ಕಾರಣಕ್ಕೆ ಕಾಂಗ್ರೆಸ್ ನಾಯಕರು ತಮ್ಮ ಪಕ್ಷದ ಎಲ್ಲ ಶಾಸಕರನ್ನೂ ಬಿಡದಿ ಬಳಿಯ ಈಗಲ್ಟನ್ ರೆಸಾರ್ಟ್ಗೆ ಕರೆದೊಯ್ದಿದ್ದರು. ಈಗಲ್ಟನ್ ರೆಸಾರ್ಟ್ ನಲ್ಲಿ ಕಂಪ್ಲಿ ಗಣೇಶ್ ಜತೆ ಆನಂದ್ ಗಲಾಟೆ ಮಾಡಿಕೊಂಡಿದ್ದರು.

ಇತ್ತೀಚೆಗೆ ಜಿಂದಾಲ್ ಗೆ ಸಾವಿರಾರು ಎಕರೆ ಭೂಮಿ ನೀಡುವ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಆನಂದ್ ಸಿಂಗ್ ಈಗ ದಿಢೀರನೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆನಂದ್ ಸಿಂಗ್ ರಾಜೀನಾಮೆ ಬೆನ್ನಲ್ಲೇ ಮೈತ್ರಿ ಸರ್ಕಾರದ ಬಗ್ಗೆ ಅಸಮಾಧಾನ ಹೊಂದಿರುವ 7 ಶಾಸಕರು ರಾಜೀನಾಮೆ ನೀಡುವ ಸಾಧ್ಯತೆಯಿದೆ. ಇದಕ್ಕೆ ಪುಷ್ಠಿ ನೀಡುವಂತೆ ಕಾಂಗ್ರೆಸ್​ ನಾಯಕರಾದ ಬಿ.ಸಿ. ಪಾಟೀಲ್, ಕಂಪ್ಲಿ ಗಣೇಶ್ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಅಮೆರಿಕ ಪ್ರವಾಸದಲ್ಲಿದ್ದು, ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ಯಾವ ರೀತಿ ಹೆಜ್ಜೆ ಇಡಲಿದೆ ಎಂಬುದನ್ನು ಕಾದು ನೋಡಬೇಕು.

ನಂಗೆಯಾರೂ ರಾಜೀನಾಮೆ ಪತ್ರ ನೀಡಿಲ್ಲ

ಆನಂದ್ ಸಿಂಗ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ವಿಚಾರವಾಗಿ ಕೋಲಾರದಲ್ಲಿ ಪ್ರತಿಕ್ರಿಯೆ ನೀಡಿರುವ ವಿಧಾನಸಭೆ ಸ್ಪೀಕರ್ ರಮೇಶ್ ಕುಮಾರ್, ನಂಗೆ ಯಾರೂ ರಾಜಿನಾಮೆ ನೀಡಿಲ್ಲ. ರಾಜೀನಾಮೆ ವಿಚಾರವಾಗಿ ನನ್ನ ಯಾರು ಸಂಪರ್ಕ ಮಾಡಿಲ್ಲ. ಆನಂದ್ ಸಿಂಗ್ ರಾಜಿನಾಮೆ ನೀಡುವ ವಿಚಾರ ನಂಗೆ ಗೊತ್ತಿಲ್ಲ. ನನ್ನ ಮನೆಗೆ ಯಾರು ಬಂದಿಲ್ಲ, ನಂಗೆ ಸ್ವಂತ ಮನೆಯಿಲ್ಲ. ವಿಶಾಲಾಕ್ಷಿ ಅವ್ರಿಗೆ ರಾಜಿನಾಮೆ ಕೊಟ್ಟಿದ್ದರೆ ಅವ್ರನ್ನೇ ಕೇಳಿ ಎಂದು ತಿಳಿಸಿದ್ದಾರೆ.

Leave a Reply