ಕಾಂಗ್ರೆಸ್‌ನಲ್ಲಿ ತಲ್ಲಣ, ಸಿಎಂ ವಾಪಸ್ ಬರುವ ಹೊತ್ತಿಗೆ ಸರ್ಕಾರ ಪತನ..!?

ಡಿಜಿಟಲ್ ಕನ್ನಡ ಟೀಮ್:

ರಾಜ್ಯ ಸರ್ಕಾರ ಅಳಿವಿನಂಚಿಗೆ ಬಂದು ನಿಂತಿದ್ದು ಕುಮಾರಸ್ವಾಮಿ ವಿದೇಶ ಪ್ರವಾಸ ಮುಗಿಸಿ ಭಾರತಕ್ಕೆ ವಾಪಸ್ ಬರುವ ಹೊತ್ತಿಗೆ ಸರ್ಕಾರ ಅಸ್ತಿತ್ವ ಕಳೆದುಕೊಳ್ಳುವುದು ಖಚಿತವಾಗಿದೆ. ಬಿಜೆಪಿ ನಾಯಕರು ಆಪರೇಷನ್ ಕಮಲಕ್ಕೆ ಶುಕ್ರವಾರದ ಡೆಡ್‌ಲೈನ್ ಕೊಟ್ಟಿದ್ದು, ಅತೃಪ್ತ ಶಾಸಕರೆಲ್ಲರೂ ಶುಕ್ರವಾರದೊಳಗೆ ರಾಜೀನಾಮೆ ನೀಡುವಂತೆ ಸೂಚನೆ ನೀಡಲಾಗಿದೆ. ರಮೇಶ್ ಜಾರಕಿಹೊಳಿ ಮೂಲಕ ಈ ಸೂಚನೆ ರವಾನಿಸಿದ್ದು, ಅಧಿವೇಶನ ಆರಂಭಕ್ಕೂ ಮುನ್ನ‌ ರೆಬೆಲ್‌ ಶಾಸಕರುಗಳ ರಾಜೀನಾಮೆ ಕೊಡಿಸಿ, ಸರ್ಕಾರವನ್ನ ಅಧಿವೇಶನದಲ್ಲೆ ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ನಿರ್ಧಾರ ಮಾಡಿದೆ. ಆಪರೇಷನ್ ಮಾಡಲು
ಬಿಜೆಪಿ ನಾಯಕರೊಬ್ಬರನ್ನು ನೇಮಿಸಿದ್ದು, ಆ ನಾಯಕರು ರೆಬೆಲ್ ಶಾಸಕರುಗಳ ಜೊತೆ ನಿರಂತರ ಸಂಪರ್ಕ ಸಾಧಿಸುತ್ತಿದ್ದಾರೆ ಎನ್ನಲಾಗಿದೆ.

ಅಮೆರಿಕದಲ್ಲಿರುವ ಸಿಎಂ ಕುಮಾರಸ್ವಾಮಿ ಎಲ್ಲಾ ಅತೃಪ್ತ ಶಾಸಕರಿಗೂ ಕರೆ ಮಾಡಿ ಮಾತನಾಡಿದ್ದು, ನಾನು ವಾಪಸ್ ಬರುವ ತನಕ ಯಾವುದೇ ನಿರ್ಧಾರ ಕೈಗೊಳ್ಳದಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಇತ್ತ ಬೆಂಗಳೂರಿನಲ್ಲಿ ಕಾಂಗ್ರೆಸ್ ನಾಯಕರಲ್ಲಿ ಆತಂಕ ಹುಟ್ಟಿಸಿದ್ದು, ಒಬ್ಬರಾದ ಮೇಲೆ ಒಬ್ಬರು ರಾಜೀನಾಮೆ ನೀಡ್ತಿರೋದಕ್ಕೆ ಕಾರಣವೇನೆಂದು ತಿಳಿಯದೆ ಕಂಗಾಲಾಗಿದ್ದಾರೆ. ಬೆಂಗಳೂರಿನಲ್ಲಿ ಡಿಸಿಎಂ ಪರಮೇಶ್ವರ್ ಮಾತನಾಡಿ, ರಾಜೀನಾಮೆ ಕೊಟ್ಟ ಶಾಸಕರನ್ನ ಮನವೊಲಿಕೆ ಮಾಡುತ್ತೇವೆ. ಯಾವ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಗೊತ್ತಿಲ್ಲ. ಮೊದಲಿನಿಂದಲೂ ಬಿಜೆಪಿ ಆಪರೇಷನ್ ಕಮಲ ಮಾಡುತ್ತಿದೆ ಎಂದಿದ್ದಾರೆ. ಇದಕ್ಕೂ ಮೊದಲು ಡಿಕೆ ಶಿವಕುಮಾರ್ ಜೊತೆಗೆ ಚರ್ಚೆ ನಡೆಸಿ, ಬಳಿಕ ಸಿದ್ದರಾಮಯ್ಯ ಅವರ ಕಾವೇರಿ ನಿವಾಸಕ್ಕೆ ತೆರಳಿದ್ದಾರೆ. ಇದೀಗ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ‌ಆಗಮಿಸಿದ್ದು ಆಪರೇಷನ್ ಕಮಲ ತಡೆಯುವ ಬಗ್ಗೆ ಚರ್ಚೆ ನಡೆಸಿದ್ದಾರೆ‌.

ರಾಜೀನಾಮೆ ಪರ್ವ ಆರಂಭ ಆಗ್ತಿದ್ದ ಹಾಗೆ ಅತೃಪ್ತ ಬಣದಲ್ಲಿ ಗುರುತಿಸಿಕೊಂಡಿದ್ದ ನಾಯಕರು ಒಬ್ಬೊಬ್ಬರೇ ಬೆಂಗಳೂರಿನ ಹಾದಿ ಹಿಡಿಯುತ್ತಿರೋದು ನಾಯಕರು ದಿಗಿಲುಗೊಳ್ಳುವಂತೆ ಮಾಡಿದೆ. ಅಮೆರಿಕದಲ್ಲಿರುವ ಸಿಎಂ ಕುಮಾರಸ್ವಾಮಿ ಕೂಡ ಪ್ರವಾಸ ಮೊಟಕುಗೊಳಿಸಿ ಬೆಂಗಳೂರಿಗೆ ವಾಪಸ್ ಬರುವ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ದಿನೇಶ್ ಗುಂಡೂರಾವ್ ಮಾತನಾಡಿ, ನಮಗೂ ಆಪರೇಷನ್ ಮಾಡುವ ಶಕ್ತಿಯಿದೆ ಎಂದು ರಾಜಕೀಯ ಹೈಡ್ರಾಮಾದ ಸುಳಿವು ನೀಡಿದ್ದಾರೆ. ಇನ್ನು ಕಾಗವಾಡ ಶಾಸಕ ಶ್ರೀಮಂತ ಪಾಟೀಲ್, ರಮೇಶ್ ಜಾರಕಿಹೊಳಿ ಅವರಿಗೆ ಆಪ್ತರಾಗಿದ್ದು, ರಮೇಶ್ ರಾಜೀನಾಮೆ ಬೆನ್ನಲ್ಲೇ ಸ್ಪೀಕರ್ ಭೇಟಿಗೆ ಸಮಯ ಕೇಳಿರೋದು ಕಾಂಗ್ರೆಸ್‌ನಲ್ಲಿ ಸಂಚಲನ ಮೂಡಿಸಿದೆ. ಇನ್ನೊಂದು ಕಡೆ ನಾಗೇಂದ್ರ ಮಂತ್ರಿ ಆಗ್ತಾರೆ ಅಂತ ಮಾಜಿ ಶಾಸಕ ಸಿ.ಪಿ ಯೋಗೀಶ್ವರ್ ಹೇಳಿರುವ ಮಾತು ಆಪರೇಷನ್ ಕಮಲಕ್ಕೆ ಹಿಡಿದ ಕೈಗನ್ನಡಿ ಹಿಡಿದಂತಿದೆ. ಒಟ್ಟಾರೆ ಮುಂದಿನ ಒಂದು ವಾರ ಕಾಲ ರಾಜಕೀಯ ಹೈಡ್ರಾಮಾ, ರೆಸಾರ್ಟ್ ರಾಜಕೀಯ ನಡೆಯೋದ್ರಲ್ಲಿ ಯಾವುದೇ ಅನುಮಾನವಿಲ್ಲ.

Leave a Reply