ಆನಂದ್ ರಾಜೀನಾಮೆ ನನಗೆ ಶಾಕ್!: ಸಚಿವ ಡಿಕೆಶಿ

ಡಿಜಿಟಲ್ ಕನ್ನಡ ಟೀಮ್:

ಆನಂದ್ ಸಿಂಗ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ನೋಡಿದ್ದೇನೆ. ಇದು ನನಗೆ ದೊಡ್ಡ ಶಾಕ್. ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ ಎಂದು ಜಲಸಂಪನ್ಮೂಲ, ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಹೊಸಪೇಟೆ ಶಾಸಕ ಆನಂದ್ ಸಿಂಗ್ ರಾಜೀನಾಮೆ ನೀಡಿರುವ ವಿಚಾರವಾಗಿ ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಬಳ್ಳಾರಿ ಉಸ್ತುವಾರಿ ಸಚಿವರೂ ಆಗಿರುವ ಡಿಕೆ ಶಿವಕುಮಾರ್ ಹೇಳಿದ್ದಿಷ್ಟು…

‘ಆನಂದ್ ಸಿಂಗ್ ರಾಜೀನಾಮೆ ಕೊಟ್ಟಿರುವ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ನೋಡಿದೆ. ನಂಬಲಿಕ್ಕೆ ಸಾಧ್ಯ ಆಗುತ್ತಿಲ್ಲ. ಅವರು ನಮ್ಮ ಪಕ್ಷ ಬಿಟ್ಟು ಹೋಗುವುದಿಲ್ಲ ಅಂತಾ ಹೇಳಿದ್ದರು. ಆದರೆ ವೈಯಕ್ತಿಕವಾಗಿ ಏನೇನು ಸಮಸ್ಯೆ ಇದ್ದವೋ ಗೊತ್ತಿಲ್ಲ. ಈ ಸಮಸ್ಯೆಗಳ ಬಗ್ಗೆ ಹೇಳುತ್ತಿಲ್ಲ.

ಅವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇನೆ. ಆದರೆ ಸಿಗುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ನಾನು ಅವರನ್ನು ಭೇಟಿಯಾಗಿಲ್ಲ. ಇನ್ನು ನನಗೆ ಆರೋಗ್ಯ ಸಮಸ್ಯೆ ಇದ್ದಿದ್ದರಿಂದ ಚಿಕಿತ್ಸೆಗೆ ಆಸ್ಪತ್ರೆಯಲ್ಲಿದ್ದೆ.

ರಾಜೀನಾಮೆ ವಿಚಾರ ನನಗೆ ಶಾಕ್. ಈಗಲೂ ಇದನ್ನು ನಂಬಲಿಕ್ಕೆ ಸಾಧ್ಯ ಆಗುತ್ತಿಲ್ಲ. ಅವರೊಂದಿಗೆ ಮಾತನಾಡಲು ಸಿಗುತ್ತಿಲ್ಲ. ಬೇರೆಯವರೊಂದಿಗೆ ಮಾತನಾಡುತ್ತಿದ್ದೇನೆ.’

*ಜಿಂದಾಲ್ ವೈಯಕ್ತಿಕ ವಿಚಾರ ಅಲ್ಲ!*

ಜಿಂದಾಲ್ ವಿಚಾರವಾಗಿ ಆನಂದ್ ಸಿಂಗ್ ಅಸಮಾಧಾನಗೊಂಡು ರಾಜೀನಾಮೆ ನೀಡಿದ್ದಾರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಸಚಿವ ಡಿಕೆಶಿ ಉತ್ತರಿಸಿದ್ದು ಹೀಗೆ…

‘ಜಿಂದಾಲ್ ವೈಯಕ್ತಿಕ ವಿಚಾರ ಅಲ್ಲ. ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಕೈಗಾರಿಕೆಗಳ ಅಭಿವೃದ್ಧಿಗೆ ನೆರವಾಗಲು ಜಿಂದಾಲ್ ಗೆ ಭೂಮಿ ನೀಡಲು ನಿರ್ಧರಿಸಲಾಗಿತ್ತು. ಗಣಿಗಾರಿಕೆಗಾಗಿ ಜಿಂದಾಲ್ ಗೆ ಭೂಮಿ ನೀಡಲಾಗಿದೆ ಅಂತಾ ಯಡಿಯೂರಪ್ಪನವರು ಹೇಳಿಕೆ ನೀಡಿದ್ದಾರೆ. ಈ ಭೂಮಿಯನ್ನು ಜಿಂದಾಲ್ ಗೆ ಗಣಿಗಾರಿಕೆ ಮಾಡಲು ನೀಡುತ್ತಿಲ್ಲ. ಗಣಿಗಾರಿಕೆ ಜಾಗವನ್ನು ಹರಾಜಿನಲ್ಲಿ ಬಿಡ್ ಮಾಡಬೇಕು. ಈ ರೀತಿ ಗಣಿಗಾರಿಕೆಗೆ ಜಮೀನು ನೀಡುವುದು ನಿಷಿದ್ಧ.

ಈ ವಿಚಾರವಾಗಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಾನು ಇರಲಿಲ್ಲ. ನಂತರ ದಾಖಲೆ ಪರಿಶೀಲಿಸಿದ ಬಳಿಕ ಈ ಹಿಂದೆ ಯಡಿಯೂರಪ್ಪನವರು ಜಮೀನು ನೀಡಲು ಏನು ಸಹಿ ಮಾಡಿದ್ದರೋ ಅದನ್ನು ಇಂದು ಜಾರ್ಜ್ ಅವರು ಮುಂದುವರಿಸಿದ್ದಾರೆ. ಈ ಮಧ್ಯೆ ಎಚ್.ಕೆ ಪಾಟೀಲ್ ಅವರು ಕೆಲವು ಅಸಮಾಧಾನ ವ್ಯಕ್ತಪಡಿಸಿದರು. ಅದನ್ನು ಮತ್ತೆ ಪರಿಶೀಲಿಸಿ, ರಾಜ್ಯದಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಒತ್ತು ನೀಡಬೇಕು. ನಮ್ಮದು ಕೈಗಾರಿಕಾ ಸ್ನೇಹಿ ರಾಜ್ಯವಾಗಿ ಮಾಡಬೇಕು ಎಂದು ತೀರ್ಮಾನಿಸಿ ಮೊದಲು ನೀಡಲು ನಿರ್ಧರಿಸಿದ್ದ ಜಮೀನನ್ನು ಈಗ ಕನ್ಫರ್ಮ್ ಮಾಡಿದ್ದೀವಿ. ಅವರು ಮೊದಲೇ ದುಡ್ಡು ಕಟ್ಟಿದ್ದರು, ಅವರಿಗೆ ಭೂಮಿ ಮಂಜೂರು ಮಾಡಲಾಗಿತ್ತು. ಆದರೆ ಕೆಲವು ವಿಚಾರಗಳನ್ನು ನಾವು ಸರಿ ಮಾಡಿದ್ದೇವೆ. ಅಷ್ಟು ಮಾತ್ರ ನನಗೆ ಗೊತ್ತು.

ಮೊನ್ನೆ ಮುಖ್ಯಮಂತ್ರಿಗಳು ಈ ವಿಚಾರವಾಗಿ ಸಂಪುಟ ಸಮಿತಿ ರಚನೆ ಮಾಡಿ ಪರಿಶೀಲನೆ ಮಾಡಲು ಸೂಚಿಸಿದ್ದಾರೆ. ಅವರು ಪರಿಶೀಲನೆ ನಡೆಸಿ ಮುಂದಿನ ತೀರ್ಮಾನ ಹೇಳುತ್ತಾರೆ.

ಇದು ಕೇವಲ ಜಿಂದಾಲ್ ಒಂದೇ ವಿಚಾರ ಅಲ್ಲ. ಈ ರಾಜ್ಯಕ್ಕೆ ಕೈಗಾರಿಕೆಗಳು ಬೇಕಾ? ಬೇಡವಾ? ಆರ್ಥಿಕ ಪ್ರಗತಿ ವಿಚಾರದಲ್ಲಿ ಕರ್ನಾಟಕವನ್ನು ಇಡೀ ದೇಶ ನೋಡುತ್ತಿದೆ. ಇಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ಮಾಡಿ ಹೂಡಿಕೆ ಮಾಡಲು ಆಹ್ವಾನ ನೀಡಿದ್ದೇವೆ. ನನ್ನ ತಾಲೂಕಿನಲ್ಲೂ ಯಾರಾದರೂ ಬಂದು ಕೈಗಾರಿಕೆ ಶುರು ಮಾಡಿ ನಾಲ್ಕು ಜನಕ್ಕೆ ಕೆಲಸ ನೀಡಿ ಅಂತಾ ನಾನು ಕರಿಯುತ್ತಿದ್ದೇನೆ. ಬಳ್ಳಾರಿಯಲ್ಲಿ ಹೆಣ್ಣುಮಕ್ಕಳಿಗೆ ಉದ್ಯೋಗ ಸಿಗಬೇಕು ಅಂತಾ ಟೆಕ್ಸ್ ಟೈಲ್ಸ್ ಸಭೆ ಮಾಡಿದ್ದೆವು. ಅದೇ ರೀತಿ ರಾಜ್ಯದುದ್ದಕ್ಕೂ ಉತ್ತೇಜನ ನೀಡುತ್ತಿದ್ದೇವೆ. ನಾವು ಹಿಂದುಳಿದ ಜಿಲ್ಲೆಗಳ ಪಟ್ಟಿ ಮಾಡಿದ್ದು ಬಳ್ಳಾರಿಯನ್ನು ಸೇರಿಸಿದ್ದೇವೆ. ಅಲ್ಲಿ ಕೈಗಾರಿಕೆ ಆರಂಭಿಸಲು ಯಾರಾದರೂ ಮುಂದೆ ಬಂದರೆ ಅವರಿಗೆ ಪ್ರೋತ್ಸಾಹ ನೀಡುತ್ತೇವೆ.’

*ಯಾರಿಗೂ ಚುನಾವಣೆ ಬೇಡ*

ಆನಂದ್ ಸಿಂಗ್ ರಾಜೀನಾಮೆ ನಂತರ ಬಿಜೆಪಿ ನಾಯಕರು ಸರ್ಕಾರ ರಚನೆಗೆ ಉತ್ಸುಕರಾಗಿದ್ದಾರೆ ಎಂಬ ಪ್ರಶ್ನೆಗೆ ಸಚಿವರ ಪ್ರತಿಕ್ರಿಯೆ ಹೀಗಿತ್ತು…
‘ಬಿಜೆಪಿ ನಾಯಕರಾಗಲಿ ಯಾರು ಎಷ್ಟೇ ಉತ್ಸುಕರಾದರೂ ಪ್ರಯೋಜನ ಇಲ್ಲ. ಬಿಜೆಪಿ ಶಾಸಕರೆ ಖಾಸಗಿಯಾಗಿ ಏನು ಮಾತನಾಡುತ್ತಿದ್ದಾರೆ ಅಂತಾ ಗೊತ್ತು. ಯಾರಿಗೂ ಚುನಾವಣೆ ಬೇಕಿಲ್ಲ. ನಾನು ರಾಜೀನಾಮೆ ಕೊಟ್ಟರು, ಇನ್ನೊಬ್ಬರು ರಾಜೀನಾಮೆ ಕೊಟ್ಟರು ಈ ಸರ್ಕಾರಕ್ಕೆ ಏನು ಆಗೋಲ್ಲ. ಇವೆಲ್ಲ ತಾತ್ಕಾಲಿಕ ಘಟ್ಟಗಳು. ವೈಯಕ್ತಿಕ ಕಾರಣಗಳು ನೋವುಗಳು ಇರುತ್ತವೆ. ಅವುಗಳನ್ನು ಸರಿ ಮಾಡೋಣ. ಎಲ್ಲ ಸಂದರ್ಭಗಳಲ್ಲೂ ನಮ್ಮ ಪ್ರಯತ್ನ ಯಶಸ್ವಿಯಾಗಲ್ಲ. ನನ್ನಂತ ನೂರೈವತ್ತು ಮಂದಿ ಹುಟ್ಟುಕೊಳ್ಳುತ್ತಾರೆ.

ಆನಂದ್ ನನ್ನ ಸ್ನೇಹಿತ, ನಮ್ಮ ಶಾಸಕ, ರಾಹುಲ್ ಗಾಂಧಿ ನೇತೃತ್ವದಲ್ಲಿ ಪಕ್ಷ ಸೇರಿದ್ದರು ಅದರಲ್ಲಿ ಯಾವುದೇ ಅನುಮಾನವಿಲ್ಲ. ಈಗಲೂ ಆತ ಪಕ್ಷ ತೊರೆಯುತ್ತಾನೆ ಅಂತಾ ನಂಬಿಕೆ ಇಲ್ಲ. ತಕ್ಷಣವೇ ಆನಂದ್ ಸಂಪರ್ಕಿಸಿ ಸಮಸ್ಯೆ ಬಗೆಹರಿಸಲು ಪ್ರಯತಿಸುತ್ತೇನೆ.

ಯಾರೂ ಕೂಡ ಒತ್ತಡ ಇಲ್ಲದೆ ರಾಜೀನಾಮೆ ನೀಡುವುದಿಲ್ಲ. ಯಾರಿಗೂ ಚುನಾವಣೆ ಬೇಡ. ರಾಜೀನಾಮೆ ನೀಡೋದು ಮುಖ್ಯ ಅಲ್ಲ. ಮತ್ತೆ ಚುನಾವಣೆ ಎದುರಿಸಿ ಗೆಲ್ಲೋದು ಮುಖ್ಯ. ಹೀಗಾಗಿ ಸದ್ಯ ಯಾರಿಗೂ ಆ ರಿಸ್ಕ್ ಬೇಡ. ಎಲೆಕ್ಷನ್ ಆದ್ಮೇಲೆ ಯಾರು ಏನೇನಾಗುತ್ತಾರೆ ಅಂತಾ ಬಿಜೆಪಿ ಶಾಸಕರನ್ನೇ ಕೇಳಿ ಅವರೇ ಹೇಳುತ್ತಾರೆ.

Leave a Reply