ಡಿಜಿಟಲ್ ಕನ್ನಡ ಟೀಮ್:
ಭರ್ಜರಿ ಬಹುಮತದೊಂದಿಗೆ ಎರಡನೆ ಬಾರಿ ಅಧಿಕಾರ ಗದ್ದುಗೆಗೆ ಹಿಡಿದಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ಮೊದಲ ಬಜೆಟ್ ಜು.5ರಂದು ಮಂಡನೆಯಾಗಲಿದ್ದು, ಈ ಬಜೆಟ್ ಮೇಲಿನ ನಿರೀಕ್ಷೆ ಗಗನಕ್ಕೇರಿದೆ.
ಜಾಗತಿಕ ಆರ್ಥಿಕ ಹಿನ್ನೆಡೆ ಪರಿಣಾಮ ಭಾರತೀಯ ಆರ್ಥಿಕ ಪ್ರಗತಿಗೆ ಅಡ್ಡ ಪರಿಣಾಮ ಬೀರಿದ್ದು, ಪ್ರಸ್ತುತ ದೇಶದ ಆರ್ಥಿಕ ಪ್ರಗತಿ ಶೇ.6.8ರಷ್ಟಿದೆ. ಹೀಗಾಗಿ ಹಳಿ ತಪ್ಪಿರುವ ಆರ್ಥಿಕತೆಯನ್ನು ಸರಿ ದಾರಿಗೆ ತಂದು ಬೆಳವಣಿಗೆ ಸಾಧಿಸಬೇಕಾದ ದೊಡ್ಡ ಜವಾಬ್ದಾರಿ ಎನ್ಡಿಎ ಸರ್ಕಾರದ ಮೇಲಿದೆ.
ಆರ್ಥಿಕ ವಿಚಾರವಾಗಿ ಸಾಕಷ್ಟು ಪರಿಣಿತಿ ಹೊಂದಿರುವ ನಿರ್ಮಲಾ ಸೀತರಾಮನ್ ಅವರ ಹೆಗಲಿಗೆ ವಿತ್ತ ಖಾತೆಯನ್ನು ಕೊಟ್ಟಾಗಲೇ ಇದೊಂದು ಉತ್ತಮ ಆಯ್ಕೆ ಎಂದು ಪ್ರಶಂಸೆ ಮಾಡಲಾಗಿತ್ತು. ಅಲ್ಲದೆ ದೇಶದ ಪ್ರಪ್ರಥಮ ವಾಣಿಜ್ಯ ಸಚಿವೆ ಎಂಬ ಖ್ಯಾತಿಗೂ ನಿರ್ಮಲಾ ಸೀತರಾಮನ್ ಅವರು ಪಾತ್ರರಾಗಿದ್ದರು. ಹೀಗಾಗಿ ಇವರು ಮಂಡಿಸಲಿರುವ ಪೂರ್ಣ ಪ್ರಮಾಣದ ಬಜೆಟ್ ಮೇಲೆ ಎಲ್ಲರ ಗಮನ ನೆಟ್ಟಿದೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ.7ರಷ್ಟು ಆರ್ಥಿಕ ಬೆಳವಣಿಗೆ ಸಾಧಿಸುವ ಗುರಿ ಹೊಂದಲಾಗಿದ್ದರೂ ಈ ಹಾದಿ ಕಠಿಣವಾಗಿದೆ. ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ಅನೇಕ ಸವಾಲುಗಳನ್ನು ಎದುರಿಸಬೇಕಾಗಿದೆ.
ಮೊದಲ ಅವಧಿಗೆ ಅಧಿಕಾರದಲ್ಲಿದ್ದ ಎನ್ಡಿಎ ಸರ್ಕಾರ ಮಹತ್ವಾಕಾಂಕ್ಷಿ ಯೋಜನೆಗಳಿಗಾಗಿ ಸಾಕಷ್ಟು ಹಣಕಾಸು ಖರ್ಚು ಮಾಡಿ ಅವುಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿತ್ತು.ಇದರಿಂದ ಸರ್ಕಾರದ ಬೊಕ್ಕಸಕ್ಕೆ ಸಾಕಷ್ಟು ಹೊರೆ ಬಿದ್ದಿತು.
ಲೋಕಸಭಾ ಚುನಾವಣೆಗೂ ಮುನ್ನ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಫೆ.1ರಂದು ಮಧ್ಯಂತರ ಬಜೆಟ್ ಮಂಡಿಸಿದ್ದರು. ಇದು ಮತದಾರರನ್ನು ಓಲೈಸುವ ಉದ್ದೇಶದ ಬಜೆಟ್ ಎಂದು ಕರೆಯಲಾಗಿತ್ತು. ಈಗ ನಿರ್ಮಲಾ ಸೀತಾರಾಮನ್ ಅವರು ಪರಿಪೂರ್ಣ ಬಜೆಟ್ ಮಂಡಿಸಲಿದ್ದು, ಯಾವ ರೀತಿ ಇರಲಿದೆ ಎಂಬ ಕುತೂಹಲ ಮೂಡಿದೆ.
ಕಳೆದ ಐದು ತಿಂಗಳ ಅವಧಿಯಲ್ಲಿ ಆರ್ಥಿಕ ಪರಿಸ್ಥಿತಿಗಳು ಸಾಕಷ್ಟು ಬದಲಾಗಿವೆ. ಈ ಬಾರಿ ಬಜೆಟ್ನಲ್ಲಿ ಅನಗತ್ಯ ಖರ್ಚು-ವೆಚ್ಚಗಳಿಗೆ ಕಡಿವಾಣ ಹಾಕಿ ಅಗತ್ಯ ಯೋಜನೆಗಳು ಮತ್ತು ಸುಧಾರಣೆಗಳಿಗೆ ಮಾತ್ರ ಹಣಕಾಸು ಸದ್ಬಳಕೆ ಮಾಡಿಕೊಳ್ಳುವಂತೆ ಈಗಾಗಲೇ ಮೋದಿ ವಾಣಿಜ್ಯ ಇಲಾಖೆಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.
ಸರ್ಕಾರದ ಮುಂದೆ ನಿರುದ್ಯೋಗ ಸಮಸ್ಯೆ ಬೃಹದಾಕಾರವಾಗಿ ನಿಂತು ಕಾಡುತ್ತಿದೆ. ಸದ್ಯ ದೇಶದಲ್ಲಿ ಶೇ.6.1 ರಷ್ಟು ನಿರುದ್ಯೋಗ ಸಮಸ್ಯೆ ಇದ್ದು, ಕಳೆದ ನಾಲ್ಕು ದಶಕಗಳಲ್ಲಿ ಹೆಚ್ಚಿನ ಪ್ರಮಾಣದ್ದಾಗಿದೆ.
ಇನ್ನು ಕೃಷಿ, ಗ್ರಾಮೀಣಾಭಿವೃದ್ಧಿ, ರೈತರ ಹಿತಾಸಕ್ತಿ ಕೇಂದ್ರ ಸರ್ಕಾರದ ಪ್ರಥಮ ಆದ್ಯತೆಯಾಗಿದೆ. ಜು.5ರ ಬಜೆಟ್ನಲ್ಲಿ ಈ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಹೊಸ ಯೋಜನೆಗಳನ್ನು ಪ್ರಕಟಿಸುವ ನಿರೀಕ್ಷೆ ಇದೆ. ಇನ್ನು ರೈತರು, ಮಧ್ಯಮ ವರ್ಗದವರಿಗೆ ಪಿಂಚಣಿ ನೀಡುವ ಬಹು ನಿರೀಕ್ಷೆಯ ಯೋಜನೆ ಬಜೆಟ್ ನ ಕೇಂದ್ರ ಬಿಂದುವಾಗಿದ್ದು, ಆರ್ಥಿಕತೆಯ ಸವಾಲುಗಳ ಮಧ್ಯೆ ಈ ಯೋಜನೆಯನ್ನು ಹೇಗೆ ನಿಭಾಯಿಸುತ್ತಾರೆ ಎಂಬುದು ಸದ್ಯದ ಪ್ರಶ್ನೆಯಾಗಿದೆ.
ಇನ್ನು ಆರೋಗ್ಯ, ಕೈಗಾರಿಕಾ ವಲಯ, ಬಂಡವಾಳ ಹೂಡಿಕೆ, ನವೋದ್ಯಮ, ಮೂಲಭೂತ ಸೌಕರ್ಯಗಳ ಸುಧಾರಣೆ, ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ (ಎಂಎಸ್ಎಂಇ) ವಲಯಗಳ ಸಮಸ್ಯೆಗಳ ನಿವಾರಣೆ , ವಿದೇಶಿ ನೇರ ಬಂಡವಾಳ (ಎಫ್ಡಿಐ) ಆಕರ್ಷಣೆ, ಜಿಎಸ್ಟಿ ಸರಳೀಕರಣ, ಯುವ ಶಕ್ತಿಯ ಸದ್ಬಳಕೆ, ಮಹಿಳಾ ಸಬಲೀಕರಣ ಮೊದಲಾದ ಕ್ಷೇತ್ರಗಳು ಕೂಡ ಎನ್ಡಿಎ ಸರ್ಕಾರದ ಆದ್ಯತಾ ವಲಯಗಳಾಗಿದ್ದು, ಇವುಗಳಲ್ಲಿ ಯಾವ ರೀತಿಯ ಸುಧಾರಣೆ ಕಾಣಬಹುದು ಎಂಬುದನ್ನು ಜನಸಾಮಾನ್ಯರು ಎದುರು ನೋಡುತ್ತಿದ್ದಾರೆ. ಈ ಎಲ್ಲ ಪ್ರಶ್ನೆಗಳಿಗೆ ಜುಲೈ 5ರಂದು ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಅವರು ತಮ್ಮ ಬಜೆಟ್ ಮೂಲಕವೇ ಉತ್ತರಿಸಲಿದ್ದಾರೆ.