ಯಾರು ಯಾವ ಚೆಸ್ ಪಾನ್ ನಡೆಸುತ್ತಿದ್ದಾರೆ ಗೊತ್ತಿದೆ: ಸಚಿವ ಡಿಕೆ ಶಿವಕುಮಾರ್

ಡಿಜಿಟಲ್ ಕನ್ನಡ ಟೀಮ್:

ರಾಜ್ಯ ಸರ್ಕಾರ ಸುಭದ್ರವಾಗಿದ್ದು ಶಾಸಕರ ಮನವೊಲಿಸುವ ಅವಶ್ಯಕತೆ ಇಲ್ಲ. ಯಾರು ಯಾವ ಆಟ ಆಡುತ್ತಿದ್ದಾರೆ ಅಂತಾ ಗೊತ್ತಿದೆ ಎಂದು ಜಲಸಂಪನ್ಮೂಲ, ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಕಾಂಗ್ರೆಸ್ ಶಾಸಕರಾದ ಆನಂದ್ ಸಿಂಗ್, ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಮಂಗಳವಾರ ಮಾಧ್ಯಮದವರ ಜತೆ ಮಾತನಾಡಿದ ಸಚಿವರು ಹೇಳಿದ್ದಿಷ್ಟು…

‘ಸರ್ಕಾರ ಉಳಿಯಬೇಕು ಎಂಬುದು ಎಲ್ಲ ಶಾಸಕರ ಇಚ್ಛೆ. ಹೀಗಾಗಿ ಎಲ್ಲ ಶಾಸಕರು ಸ್ವಯಂ ಪ್ರೇರಿತರಾಗಿ ಪಕ್ಷದಲ್ಲೇ ಉಳಿಯುವ ಮನಸ್ಸು ಮಾಡಿದ್ದಾರೆ. ಯಾವ ಶಾಸಕರನ್ನು ಮನವೊಲಿಸುವ ಅವಶ್ಯಕತೆ ಇಲ್ಲ.

ಯಾರು ಯಾವ ಆಟ ಆಡುತ್ತಿದ್ದಾರೆ. ಯಾರು ಯಾವ ಚೆಸ್ ಪಾನ್ ನಡೆಸುತ್ತಿದ್ದಾರೆ. ಬಿಜೆಪಿ ನಾಯಕರು ಏನು ಮಾಡುತ್ತಿದ್ದಾರೆ ಎಂಬುದು ಗೊತ್ತಿದೆ. ನಾವು ಕಣ್ಣು ಮುಚ್ಚಿ ರಾಜಕೀಯ ನಡೆಸುತ್ತಿಲ್ಲ. ಎಲ್ಲದಕ್ಕೂ ಔಷಧಿ ಇದೆ. ಅದಕ್ಕೆ ಸಮಯ ಸಂದರ್ಭ ಬಂದಾಗ ಉತ್ತರ ನೀಡುತ್ತೇನೆ.

ರಾಜ್ಯ ಉಸ್ತುವಾರಿ ಹೊತ್ತಿರುವ ವೇಣುಗೋಪಾಲ್ ರಾವ್ ಅವರು ಏನು ಮಾಡಬೇಕೋ, ಏನು ನಿರ್ದೇಶನ ನೀಡಬೇಕೋ ನೀಡಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಅವರು ಬರುವ ಅಗತ್ಯ ಇಲ್ಲ. ನಾವಿದ್ದೇವೆ ನಾವು ನಿಭಾಯಿಸುತ್ತೇವೆ. ದಿನೇಶ್ ಗುಂಡೂರಾವ್ ಅವರು ಖಾಸಗಿ ಕಾರ್ಯಕ್ರಮಕ್ಕಾಗಿ ವಿದೇಶಕ್ಕೆ ತೆರಳಿದ್ದಾರೆ. ಅವರಿಗೂ ಖಾಸಗಿ ಜೀವನವಿದೆ. ಸದ್ಯ ಸರ್ಕಾರ ಸುಭದ್ರವಾಗಿದೆ, ಪಕ್ಷದಲ್ಲಿ ಸಮಸ್ಯೆ ಇಲ್ಲ ಅಂತಾ ಗೊತ್ತಿದೆ. ಹೀಗಾಗಿ ಅವರು ವಿದೇಶಕ್ಕೆ ಹೋಗಿದ್ದಾರೆ. ಸಿಎಂ ಕುಮಾರಸ್ವಾಮಿ ನಿರಂತರ ಸಂಪರ್ಕದಲ್ಲಿದ್ದು ನಾಲ್ಕೈದು ಬಾರಿ ಮಾತನಾಡಿದ್ದೇವೆ. ಅವರು ಎಲ್ಲ ಶಾಸಕರ ಜತೆ ಮಾತನಾಡಿದ್ದಾರೆ. ಹೀಗಾಗಿ ಯಾರು ಆತಂಕ ಪಡುವ ಅಗತ್ಯವಿಲ್ಲ. ಈ ಸರ್ಕಾರ ಪೂರ್ಣ ಅವಧಿ ಪೂರೈಸಲಿದೆ.

ನಾಗೇಂದ್ರ ವಿದ್ಯಾವಂತ, ಬುದ್ಧಿವಂತ, ಪ್ರಜ್ಞಾವಂತ ನಾಯಕ. ಮಹೇಶ್ ಕುಮಟಳ್ಳಿ ಕಾಂಗ್ರೆಸ್ ನಾಯಕ ಅವರುಗಳು ಪಕ್ಷ ಬಿಡಲ್ಲ. ನನ್ನ ಜತೆ ಅವರು ಮಾತನಾಡುತ್ತಾರೆ. ಸದ್ಯ ನಾನು ಮದ್ದೂರಿಗೆ ಹೋಗಿ ಅಲ್ಲಿ ದಿವಂಗತರಾದ ಎಸ್.ಎಂ ಶಂಕರ್ ಅವರ ಕಾರ್ಯದಲ್ಲಿ ಭಾಗಿಯಾಗಿ ಮರಳುತ್ತೇನೆ.

ಆನಂದ್ ಸಿಂಗ್ ಅವರು ಈಗಲೂ ನನಗೆ ಆತ್ಮೀಯರು. ಈಗಲೂ ನನಗೆ ವಿಶ್ವಾಸವಿದೆ ಅವರು ತಮ್ಮ ನಿರ್ಧಾರ ಮರುಪರಿಶೀಲಿಸಿ ಪಕ್ಷದಲ್ಲೇ ಉಳಿತಾರೆ. ರಾಜೀನಾಮೆ ಹಿಂಪಡೆಯುತ್ತಾರೆ ಎಂಬ ನಂಬಿಕೆ ಇದೆ.’

Leave a Reply