ರಾಜ್ಯ ಸಭೆಯಲ್ಲೂ ಬಹುಮತದ ಸನಿಹದಲ್ಲಿ ಎನ್ಡಿಎ! ಇನ್ನು ಮೋದಿ ಸರ್ಕಾರ ಹಿಡಿಯೋರು ಯಾರು?

ಡಿಜಿಟಲ್ ಕನ್ನಡ ಟೀಮ್:

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಮೊದಲ ಅವಧಿ ಆಡಳಿತದಲ್ಲಿ ಸರ್ಕಾರಕ್ಕೆ ದೊಡ್ಡ ಹಿನ್ನಡೆ ಆಗಿದ್ದು ರಾಜ್ಯಸಭೆಯಲ್ಲಿ ಬಹುಮತದ ಕೊರತೆ. ಆದರೆ ಈಗ ಎರಡನೇ ಅವಧಿಯ ಆರಂಭದಲ್ಲೇ ಎನ್ ಡಿಎಗೆ ಬಹುಮತ ಸಿಗುವ ಸಾಧ್ಯತೆ ಇದ್ದು, ನರೇಂದ್ರ ಮೋದಿ ಸರ್ಕಾರವನ್ನು ಸಂಸತ್ತಿನಲ್ಲಿ ನಿಯಂತ್ರಿಸುವವರೇ ಇಲ್ಲದಂತಾಗಲಿದೆ.

ಕಳೆದ ಮೂರ್ನಾಲ್ಕು ಅಧಿವೇಶನಗಳಲ್ಲಿ ಕೇಂದ್ರ ಸರ್ಕಾರ ತ್ರಿವಳಿ ತಲಾಕ್ ನಿಷೇಧ ಮಸೂದೆಯನ್ನು ಮಂಡಿಸುತ್ತಲೇ ಬಂದಿದೆ. ಆದರೆ ರಾಜ್ಯ ಸಭೆಯಲ್ಲಿ ಅಂಗೀಕಾರವಾಗದೇ ಈ ಮಸೂದೆಗೆ ಅಂತಿಮ ಮುದ್ರೆ ಬೀಳಲು ಸಾಧ್ಯವಾಗಿಲ್ಲ. ಹೀಗಾಗಿ ಈಗ ರಾಜ್ಯಸಭೆಯಲ್ಲಿ ಬಹುಮತ ಪಡೆಯಲು ಬಿಜೆಪಿ ಗಮನ ಹರಿಸಿದೆ.

ಲೋಕಸಭೆ ಚುನಾವಣೆ ಫಲಿತಾಂಶದ ನಂತರ ಪಶ್ಚಿಮ ಬಂಗಾಳ, ಒಡಿಶಾ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಇತರೆ ಪಕ್ಷದ ಸಂಸದರು ಹಾಗೂ ನಾಯಕರು ಕಮಲ ಪಾಳಯಕ್ಕೆ ಜಿಗಿಯಲಾರಂಭಿಸಿದ್ದಾರೆ. ಅದರಲ್ಲೂ ಪಶ್ಚಿಮ ಬಂಗಾಳದಲ್ಲಿ ಸಂಸದರಿಂದ ಹಿಡಿದು ಪಾಲಿಕೆ ಸದಸ್ಯರವರೆಗೂ ಸಾಲು ಸಾಲಾಗಿ ನಾಯಕರುಗಳು ಬಿಜೆಪಿ ಬಾಗಿಲು ತಟ್ಟುತ್ತಿದ್ದಾರೆ.

ಇನ್ನು ಇತ್ತೀಚೆಗೆ ನಾಲ್ವರು ಟಿಡಿಪಿ ಮತ್ತು ಓರ್ವ ಐಎನ್ಎಲ್ ಡಿ ಸಂಸದರು ಬಿಜೆಪಿ ಸೇರಿದ್ದಾರೆ. ಇನ್ನು ನಾಲ್ವರು ಜು.5ರ ಬಜೆಟ್ ಮಂಡನೆ ವೇಳೆಗೆ ಬಿಜೆಪಿ ಸೇರುವ ಸಾಧ್ಯತೆ ಇದೆ. ಇದರಿಂದ ರಾಜ್ಯ ಸಭೆಯಲ್ಲಿ ಎನ್ಡಿಎ ಬಹುಮತದತ್ತ ಸಾಗುವ ವಿಶ್ವಾಸ ಹೊಂದಿದೆ. ಸದ್ಯ ಭಾನುವಾರದವರೆಗೂ 235 (10 ಸದಸ್ಯತ್ವ ಖಾಲಿ) ಸದಸ್ಯರ ರಾಜ್ಯ ಸಭೆಯಲ್ಲಿ ಎನ್ಡಿಎ ಬಲ 111 ಇತ್ತು. ಜುಲೈ 5ರ ವೇಳೆಗೆ ಈ ಬಲ 115 ಆಗಲಿದೆ. ಇನ್ನು ಒಟ್ಟಾರೆ ಸದಸ್ಯತ್ವದಲ್ಲಿ ಬಹುಮತ ಪಡೆಯಲು ಎನ್ ಡಿಎಗೆ ಕೇವಲ 8 ಸದಸ್ಯರ ಕೊರತೆ ಇದೆ. ಹೀಗಾಗಿ ರಾಜ್ಯಸಭೆಯಲ್ಲಿ ತಮ್ಮ ಮಸೂದೆಗಳನ್ನು ಪಾಸ್ ಮಾಡಿಕೊಳ್ಳಲು ಯುಪಿಎಯೇತ್ತರ ಪಕ್ಷಗಳ ಬೆಂಬಲ ಪಡೆಯಲು ಮುಂದಾಗಿದೆ.

ಇದರೊಂದಿಗೆ ಶೀಘ್ರದಲ್ಲೇ ಬಿಜೆಪಿ ನೇತೃತ್ವದ ಎನ್ ಡಿಎ ಸಂಸತ್ತಿನ ಎರಡೂ ಸದನಗಳಲ್ಲಿ ಪಾರಮ್ಯ ಮೆರೆಯಲಿದ್ದು, ಇನ್ನು ಮೋದಿ ಆಡಳಿತದ ಮಹತ್ವದ ಮಸೂದೆಗಳಿಗೆ ಅನುಮೋದನೆ ಹಾದಿ ಸುಗಮವಾಗಲಿದೆ.

Leave a Reply