ಮೈತ್ರಿ ಸರ್ಕಾರ ಪತನ ಸುಲಭವಲ್ಲ ಅಂತಿದೆ ನಂಬರ್ ಗೇಮ್!

ಡಿಜಿಟಲ್ ಕನ್ನಡ ಟೀಮ್:

ಕಾಂಗ್ರೆಸ್ ಶಾಸಕರಾದ ಆನಂದ್ ಸಿಂಗ್, ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿರುವ ಬೆನ್ನಲ್ಲೇ ರಾಜ್ಯದ ದೋಸ್ತಿ ಸರ್ಕಾರ ಪತನಕ್ಕೆ ಕ್ಷಣಗಣನೆ ಆರಂಭವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಮೈತ್ರಿ ಸರ್ಕಾರ ಪತನ ಮಾತನಾಡಿದಷ್ಟು ಸುಲಭವೇ? ಅಲ್ಲ ಎನ್ನುತ್ತಿದೆ ನಂಬರ್ ಗೇಮ್!

ಹೌದು, 224 ವಿಧಾನಸಭಾ ಕ್ಷೇತ್ರಗಳ ಪೈಕಿ ಇಬ್ಬರ ರಾಜೀನಾಮೆಯಿಂದ ವಿಧಾನಸಭೆ ಸಂಖ್ಯಾಬಲ 222ಕ್ಕೆ ಕುಸಿದಿದೆ. ಬಿಜೆಪಿ 105 ಸ್ಥಾನಗಳನ್ನು ಹೊಂದಿದ್ದು, ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದರೆ, ಕನಿಷ್ಠ ಇನ್ನು 13 ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ರಾಜೀನಾಮೆ ನೀಡಬೇಕು. ವಿಧಾನಸಭೆ ಚುನಾವಣೆ ಮುಗಿಸಿ ಇನ್ನು ಒಂದು ವರ್ಷವಾಗಿದೆ. ಲೋಕಸಭೆ ಚುನಾವಣೆ ಮುಗಿಸಿ ಸರಿಯಾಗಿ ಮೂರು ತಿಂಗಳೂ ಕಳೆದಿಲ್ಲ. ಅಷ್ಟರಲ್ಲಿ ಮತ್ತೆ ವಿಧಾನಸಭೆ ಚುನಾವಣೆ ಎದುರಿಸಲು ಯಾವ ಶಾಸಕನಿಗೂ ತನು, ಮನ ಹಾಗೂ ಧನದ ಶಕ್ತಿ ಇಲ್ಲ.

ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿಯನ್ನು ನಂಬಿಕೊಂಡು ಶಾಸಕರು ರಾಜೀನಾಮೆ ನೀಡುವುದು ಮೂರ್ಖತನದ ಪರಮಾವಧಿ ಎಂದೇ ಹೇಳಲಾಗುತ್ತಿದೆ. ಕಳೆದ ಒಂದುವರ್ಷದಲ್ಲಿ ರಾಜಕೀಯ ವಿದ್ಯಮಾನಗಳನ್ನು ನೋಡಿ ಬೇಸತ್ತಿರುವ ಮತದಾರ ತಮ್ಮನ್ನೇ ಮತ್ತೆ ಆಯ್ಕೆ ಮಾಡುತ್ತಾರೆ ಎಂಬ ಆತ್ಮವಿಶ್ವಾಸವೂ ಶಾಸಕರಲ್ಲಿ ಉಳಿದಿಲ್ಲ.

ಒಂದು ವೇಳೆ ಬಿಜೆಪಿ 13 ಶಾಸಕರನ್ನು ಗುಡ್ಡೆ ಹಾಕಿ ರಾಜೀನಾಮೆ ಕೊಡಿಸುವ ಪ್ರಯತ್ನ ಮಾಡಿದರೂ ತಕ್ಷಣವೇ ಕಾಂಗ್ರೆಸ್ ನ ನಿಷ್ಠಾವಂತರು ತಮ್ಮ ಸಚಿವ ಸ್ಥಾನ ತ್ಯಾಗ ಮಾಡಿ ಅದನ್ನು ಅತೃಪ್ತರಿಗೆ ನೀಡಿ ಸಮಾಧಾನ ಮಾಡಬಹುದು. ಇನ್ನು ಕಾಂಗ್ರೆಸ್ ಕೂಡ ಬಿಜೆಪಿಯ ಶಾಸಕರನ್ನು ತನ್ನ ತೆಕ್ಕೆಗೆ ಹಾಕಿಕೊಂಡು ರಾಜೀನಾಮೆ ಕೊಡಿಸಿದರೆ, ಬಿಜೆಪಿಗೆ ಮತ್ತೆ ಹೊಸ ಸವಾಲು ಎದುರಾಗಲಿದೆ.

ಇನ್ನು ಬಿಜೆಪಿ ಹೈಕಮಾಂಡ್ ಗೂ ಕೂಡ ಸದ್ಯ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರುವ ಯಾವ ಆಸಕ್ತಿಯೂ ಇಲ್ಲ. ಲೋಕಸಭೆಯಲ್ಲಿ ರಾಜ್ಯದಿಂದ ಭರ್ಜರಿ ಜಯ ಸಿಕ್ಕಿಯಾಗಿದೆ. ಇನ್ನು ಯಡಿಯೂರಪ್ಪನವರನ್ನು ರಾಜ್ಯ ರಾಜಕೀಯದಲ್ಲಿ ಮುಂಚೂಣಿ ನಾಯಕರಾಗಿ ಮುಂದುವರಿಸುವ ಇಚ್ಛೆಯೂ ಇಲ್ಲ. ಹೀಗಾಗಿ ಈಗ ಬಿಜೆಪಿ ಸರ್ಕಾರ ರಚನೆ ಮಾಡಬೇಕಾದರೆ ಅವರು ಈಗಾಗಲೇ ಮಾತು ಕೊಟ್ಟಂತೆ ಯಡಿಯೂರಪ್ಪನವರಿಗೆ ಮಣೆ ಹಾಕಿ ಸಿಎಂ ಮಾಡಬೇಕು. ಇದು ಬಿಜೆಪಿಯ ಅನೇಕ ಬಣಗಳಿಗೆ ಅಸಮಾಧಾನ ತರಲಿದೆ. ಇನ್ನು ಬಿಎಸ್ ವೈಗೆ ಪರ್ಯಾಯ ನಾಯಕನನ್ನು ಕಂಡುಕೊಳ್ಳುವ ಸವಾಲು ಬಿಜೆಪಿ ಹೈಕಮಾಂಡ್ ಮೇಲಿದೆ.

Leave a Reply