ನಿಮ್ಮೂರಲ್ಲಿ ಇನ್ಮುಂದೆ ಬ್ಯಾಂಕ್‌ನಲ್ಲಿ ಕನ್ನಡ ಮಾತಾಡ್ತಾರೆ..!!

ಡಿಜಿಟಲ್ ಕನ್ನಡ ಟೀಮ್:

ಖುಷಿ ಆಯ್ತಾ..! ಸ್ವಲ್ಪ ತಾಳಿ, ವಿಷಯ ಏನು ಅಂತಾ ಹೇಳಿ ಬಿಡ್ತೀವಿ. ಇಷ್ಟು ದಿನ ನೀವು ಬ್ಯಾಂಕ್‌ಗೆ ಹೋಗಿ ಏನಾದ್ರು ಕೇಳಿದ್ರೆ ಅರ್ಥವಾಗದ ಹಿಂದಿ, ಇಂಗ್ಲಿಷ್‌ನಲ್ಲಿ ಕೇಳ್ತಿದ್ರು. ಆಗ ಕನ್ನಡದವರು ಯಾರು ಬ್ಯಾಂಕ್ ಕೆಲಸಕ್ಕೆ ಸೇರೋದೇ ಇಲ್ವಾ ಅನ್ನೋ ಪ್ರಶ್ನೆ ಒಮ್ಮೆಯಾದ್ರೂ ನಿಮ್ಮನ್ನು ಕಾಡದೆ ಇರಲಾರದು. ಆದ್ರ‌ ಇನ್ಮುಂದೆ ಆ ಸಮಸ್ಯೆ ಕಡಿಮೆಯಾಗುವ ಕಾಲ ಸನಿಹವಾಗಿದೆ. ಕಾರಣ ಅಂದ್ರೆ ಕನ್ನಡಿಗರು ಬ್ಯಾಂಕ್ ಉದ್ಯೋಗಿಗಳಾಗಿ ಕೆಲಸ ಮಾಡಲಿದ್ದಾರೆ.

ಸಿಎಂ ಕುಮಾರಸ್ವಾಮಿ ಕಳೆದ ಬಾರಿ ದೆಹಲಿಗೆ ತೆರಳಿದ್ದ ಸಮಯದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಕನ್ನಡದಲ್ಲಿ ಪರೀಕ್ಷೆ ಬರೆಯಲು ಸರ್ಕಾರದ ಪರವಾಗಿ ಮನವಿ ಮಾಡಿದ್ರು. ಅದಕ್ಕೆ ಸಕಾರಾತ್ಮಕ ಸ್ಪಂದನೆ ಕೇಂದ್ರ ಸರ್ಕಾರದ ಕಡೆಯಿಂದ ಹೊರಬಿದ್ದಿದ್ದು, ಇನ್ಮುಂದೆ ಕನ್ನಡದಲ್ಲೂ ಬ್ಯಾಂಕಿಂಗ್ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗುವುದು ಎಂದು ರಾಜ್ಯಸಭೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ. ಸಿಎಂ ಕುಮಾರಸ್ವಾಮಿ ಕೂಟ ಟ್ವೀಟರ್‌ನಲ್ಲಿ ಧನ್ಯವಾದ ತಿಳಿಸಿದ್ದಾರೆ.

ಈ ಬಗ್ಗೆ ದೆಹಲಿಯಲ್ಲಿ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, ಕನ್ನಡದಲ್ಲಿ ಬ್ಯಾಂಕಿಂಗ್ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕೆಂದು ರಾಜ್ಯದ ಎಲ್ಲಾ ಸಂಸದರು ಪಕ್ಷಾತೀತವಾಗಿ ಒತ್ತಾಯಿಸಿದ್ದೆವು. ರಾಜ್ಯದ ಸಂಸದರ ಮನವಿಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಂದಿಸಿದ್ದಾರೆ. ಕನ್ನಡದಲ್ಲಿ ಬ್ಯಾಂಕಿಂಗ್ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ನಿರ್ಮಲಾ ಸೀತಾರಾಮನ್ ಅವರಿಗೆ ಅಭಿನಂದನೆಗಳು ಎಂದಿದ್ದಾರೆ.

ರಾಜ್ಯಸಭಾ ಸದಸ್ಯ ಜಿ.ಸಿ ಚಂದ್ರಶೇಖರ್ ಮಾತನಾಡಿ, ನಿರ್ಮಲಾ ಸೀತರಾಮನ್ ಅವರಿಗೆ ಅಭಿನಂದನೆ. ಕನ್ನಡದಲ್ಲಿ ಪರೀಕ್ಷೆ ಜೊತೆಗೆ ಕನ್ನಡಿಗರಿಗೆ ಉದ್ಯೋಗ ಸಿಗಬೇಕು. ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಅವಕಾಶ ಕೊಡಬೇಕು. ಕೇಂದ್ರದಿಂದ ಸಂಪೂರ್ಣ ನ್ಯಾಯ ಸಿಕ್ಕಿಲ್ಲ. 18 ಸಾವಿರ ಉದ್ಯೋಗದಲ್ಲಿ ಶೇಕಡಾ 85 ರಷ್ಟು ಕನ್ನಡಿಗರಿಗೆ ಉದ್ಯೋಗ ಸಿಗುತ್ತಿಲ್ಲ. ಈ ಮೊದಲು ಇದ್ದ ಕಾನೂನನ್ನು ಬಿಜೆಪಿ ಸರಕಾರ ಕಿತ್ತುಹಾಕಿದೆ. ಕನ್ನಡದಲ್ಲಿ ಬರೆಯೋಕೆ ಅವಕಾಶ ಸಿಕ್ಕ ತಕ್ಷಣ ಉದ್ಯೋಗ ಸಿಗಬೇಕಲ್ಲವೇ..? ಕನ್ನಡಿಗರಿಗೆ ಉದ್ಯೋಗಕ್ಕಾಗಿ ಹೋರಾಟ ಮುಂದುವರಿಸುತ್ತೇವೆ ಎನ್ನುವ ಮೂಲಕ ವಿರೋಧ ಪಕ್ಷದ ಕೆಲಸ ಮುಂದುವರಿಸಿದ್ದಾರೆ.

ಕನ್ನಡಿಗರಿಗೆ ಉದ್ಯೋಗ ಸಿಗಬೇಕು ಅನ್ನೋದರಲ್ಲಿ ಯಾವುದೇ ಮಾತಿಲ್ಲ. ಆದ್ರೆ ಕನ್ನಡದಲ್ಲಿ ಬ್ಯಾಂಕಿಂಗ್ ಪರೀಕ್ಷೆ ಬರೆಯಲು ಅವಕಾಶವೇ ಇಲ್ಲದೆ ಅದೆಷ್ಟೋ ಕನ್ನಡಿಗ ಅಭ್ಯರ್ಥಿಗಳು ವಂಚನೆಗೆ ಒಳಗಾಗ್ತಿದ್ರು. ಇದನ್ನು ಕೇಂದ್ರ ಸರ್ಕಾರ ಸರಿ ಮಾಡಿದೆ ಅನ್ನೋದಷ್ಟೆ ಸಮಾಧಾನದ ವಿಚಾರ. ಕನ್ನಡ ಭಾಷೆ ಜೊತೆ ಮತ್ತೆ 13 ಪ್ರಾದೇಶಿಕ ಭಾಷೆಗಳನ್ನೂ ಕೇಂದ್ರ ಪರಿಗಣಿಸಿದ್ದು, ಕನ್ನಡ, ಅಸ್ಸಾಂ, ಬೆಂಗಾಲಿ, ಗುಜರಾತಿ, ಕೊಂಕಣಿ, ಮಲಯಾಳಂ, ಮಣಿಪುರಿ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು ಹಾಗೂ ಉರ್ದುವಿನಲ್ಲಿಯೂ ಪರೀಕ್ಷೆ ನಡೆಯಲಿದೆ. ಬ್ಯಾಂಕಿಂಗ್ ಪರೀಕ್ಷೆ ನಡೆಸುವ ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ಇಂಗ್ಲಿಷ್ ಹಾಗೂ ಹಿಂದಿ ಜೊತೆಗೆ ಪ್ರಾದೇಶಿಕ ಭಾಷೆಯಲ್ಲೂ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಬೇಕಿದೆ. ಆದ್ರೆ ಗೂಗಲ್ ಭಾಷಾಂತರ ಮಾಡುವ ಮೂಲಕ ಕನ್ನಡವೇ ಅರ್ಥವಾಗದಂತೆ ಮಾಡದಿರಲಿ ಅನ್ನೋದಷ್ಟೆ ನಮ್ಮ ಕಳಕಳಿ.

Leave a Reply