ರೆಡಿ ಆಗ್ತಿದೆ ಮತ್ತೋರ್ವ ಸಚಿವನ ರಾಜೀನಾಮೆ ಪತ್ರ..!?

ಡಿಜಿಟಲ್ ಕನ್ನಡ ಟೀಮ್:

ಜಿಂದಾಲ್‌ಗೆ ಸರ್ಕಾರ ಭೂಮಿ ಪರಭಾರೆ ಮಾಡಿದ ನಿರ್ಧಾರವನ್ನು ವಿರೋಧಿಸಿ ಹಾಗೂ ಇನ್ನಿತರೆ ಸಣ್ಣಪುಟ್ಟ ಮನಸ್ತಾಪಗಳಿಂದ ಶಾಸಕ ಆನಂದ್ ಸಿಂಗ್ ರಾಜೀನಾಮೆ ನೀಡಿದ್ದಾರೆ. ಸ್ಪೀಕರ್ ಆಗಿ ರಮೇಶ್ ಕುಮಾರ್‌ಗೆ ನೀಡಿರುವ ರಾಜೀನಾಮೆ ಇನ್ನೂ ಕೂಡ ಅಂಗೀಕಾರ ಆಗಿಲ್ಲ. ರಾಜೀನಾಮೆ ಅಂಗೀಕಾರಕ್ಕೂ ಮೊದಲು ನನ್ನ ಸಮಸ್ಯೆ ಏನೆಂದು ಆಲಿಸಿ ಪರಿಹರಿಸುವ ಭರವಸೆ ಸಿಕ್ಕರೆ ನಾನು ರಾಜೀನಾಮೆ ವಾಪಸ್ ಪಡೆಯುತ್ತೇನೆ ಎಂದು ಸ್ವತಃ ಆನಂದ್ ಸಿಂಗ್ ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದರು. ಸ್ವಂತ ಪಕ್ಷ ಅಧಿಕಾರದಲ್ಲಿ ಇದ್ದರೂ ಸಮಸ್ಯೆ ಬಗೆಹರಿಸಿಕೊಳ್ಳಲು ರಾಜೀನಾಮೆ ನಾಟಕ ಅನ್ನೋದು ಈ ಪ್ರಕರಣದಲ್ಲಿ ಬೆಳಕಿಗೆ ಬಂದಿತ್ತು. ಇದೀಗ ತನ್ನ ಸಮಸ್ಯೆ ಬಗೆಹರಿಸಿಕೊಡದಿದ್ದರೆ ತಾನೂ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡ್ತೇನೆ ಎಂದು ಸಚಿವರೊಬ್ಬರು ಸರ್ಕಾರಕ್ಕೆ ಬ್ಲಾಕ್‌ಮೇಲ್ ಮಾಡುವ ಮೂಲಕ ಸುದ್ದಿಯಾಗಿದ್ದಾರೆ.

ಕೋಟೆ ನಾಡು ಚಿತ್ರದುರ್ಗದ ವಾಣಿ ವಿಲಾಸ ಸಾಗರಕ್ಕೆ ನೀರು ತುಂಬಿಸುವಂತೆ ಆಗ್ರಹಿಸಿ ಹಾಗೂ ಭದ್ರಾ ಮೇಲ್ದಂಡೆ ಯೋಜನೆ ತ್ವರಿತವಾಗಿ ಮುಗಿಸಲು ಆಗ್ರಹಿಸಿ ಹಿರಿಯೂರು ವಕೀಲರ ಸಂಘ ಉಪವಾಸ ಸತ್ಯಾಗ್ರಹ ಮಾಡ್ತಿದೆ. ವಕೀಲರ ಅಹವಾಲು ಸ್ವೀಕರಿಸಲು ಸಚಿವ ವೆಂಕಟರಮಣಪ್ಪ ತೆರಳಿದ್ದರು. ಈ ವೇಳೆ ಮಾತನಾಡಿದ ಸಚಿವರು, ಆಗಸ್ಟ್ 10 ರೊಳಗಾಗಿ ವಾಣಿ ವಿಲಾಸ ಸಾಗರಕ್ಕೆ ನೀರು ಹರಿಸದಿದ್ದರೆ ರಾಜಿನಾಮೆ ನೀಡ್ತೇನೆ ಎಂದು ಘೋಷಣೆ ಮಾಡಿಬಿಟ್ಟರು. ತುಂಬಿದ ಸಭೆಯಲ್ಲಿ ರಾಜಿನಾಮೆ ಮಾತಾಡಿದ‌ ಸಚಿವ ವೆಂಕಟರಮಣಪ್ಪ ಅವರಿಗೆ ಚಪ್ಪಾಳೆಗಳ ಮಹಾಪೂರವೇ ಹರಿದುಬಂತು. ಜುಲೈ 30 ರ ವೇಳೆಗೆ ಉತ್ತಮವಾಗಿ ಮಳೆ ಆಗುತ್ತೆ. ಆ ನಂತರ ವಾಣಿ ವಿಲಾಸ ಸಾಗರಕ್ಕೆ ನೀರು ಬರುತ್ತೆ. ಆಗಸ್ಟ್ 10 ರ‌ ಒಳಗಾಗಿ ‌ನೀರು ಬರದಿದ್ದರೆ‌ ಜಿಲ್ಲಾ ಉಸ್ತುವಾರಿ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಹೋಗುತ್ತೇನೆ. ನನ್ನ ಮಾತು ತಪ್ಪುವುದಿಲ್ಲ. ನಾನು ಕೂಡಾ ರೈತನ ಮಗ ಎಂದು ವೆಂಕಟರಮಣಪ್ಪ ಘೋಷಣೆ ಮಾಡಿದ್ರು. ಸಭೆಯಲ್ಲಿ ಮಾಜಿ ಸಚಿವ ಟಿಬಿ ಜಯಚಂದ್ರ. ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಉಪಸ್ಥಿತರಿದ್ದರು.

ಕೊಟ್ಟ ಮಾತಿಗೆ ಕಟಿಬದ್ಧರಾಗ್ತಾರಾ ಸಚಿವ..?

ಸಚಿವ ವೆಂಕಟರಮಣಪ್ಪ ಮಾತನಾಡುವ ಭರದಲ್ಲಿ ಈ ರೀತಿಯ ಹೇಳಿಕೆ ಕೊಡಬೇಕಿತ್ತಾ ಅನ್ನೋ ಪ್ರಶ್ನೆ ಮೂಡೋದು ಸಹಜ. ಆದ್ರೆ ವೆಂಕಟರಮಣಪ್ಪ ಬುದ್ಧಿವಂತಿಕೆ ಬಳಸಿ ಮಾತನಾಡಿದ್ದಾರೆ. ಆಗಸ್ಟ್ 10 ರೊಳಗಾಗಿ ನೀರು ಬರದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವುದಿಲ್ಲ, ಶಾಸಕ ಸ್ಥಾನಕ್ಕೂ ರಾಜೀನಾಮೆ ಕೊಡುವುದಿಲ್ಲ. ಬದಲಾಗಿ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡ್ತೇನೆ ಎಂದು ಜನರನ್ನು ಮರುಳು ಮಾಡುವ ಹೇಳಿಕೆ ನೀಡಿದ್ದಾರೆ.

Leave a Reply