ವಿಶ್ವನಾಥ್ ಜೊತೆ ಜೆಡಿಎಸ್ ಪಕ್ಷ ಬಿಡೋದು ಯಾರು..!?

ಡಿಜಿಟಲ್ ಕನ್ನಡ ಟೀಮ್:

ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್‌ ವಿಶ್ವನಾಥ್ ಜೆಡಿಎಸ್ ಪಕ್ಷ ತೊರೆದು ಬಿಜೆಪಿ ಸೇರೋದು ಬಹುತೇಕ ಖಚಿತ ಆಗ್ತಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಬಳಿಕ ಬಹಿರಂಗವಾಗಿ ಸರ್ಕಾವನ್ನು ಟೀಕಿಸುತ್ತಿದ್ದ ಹೆಚ್. ವಿಶ್ವನಾಥ್, ಅಲ್ಲೊಮ್ಮೆ ಇಲ್ಲೊಮ್ಮೆ ಬಿಜೆಪಿ ನಾಯಕರನ್ನು ಸ್ನೇಹದ ಹೆಸರಲ್ಲಿ ಭೇಟಿ ಮಾಡಿ ಚರ್ಚೆ ನಡೆಸುತ್ತಿದ್ರು. ಶ್ರೀನಿವಾಸ್ ಪ್ರಸಾದ್ ನಿವಾಸದಲ್ಲಿ ಆಪರೇಷನ್ ರೂವಾರಿಗಳಾದ ಸಿ.ಪಿ ಯೋಗೇಶ್ವರ್ ಹಾಗೂ ಬಿ.ಎಸ್ ಯಡಿಯೂರಪ್ಪ ಆಪ್ತ ಸಂತೋಷ್ ಜೊತೆಗೂ ಗೌಪ್ಯ ಮಾತುಕತೆ ನಡೆಸಿದ್ರು. ಇದೀಗ ವಿಶ್ವನಾಥ್ ಹೆಜ್ಜೆ ಕಮಲ ಪಥಕ್ಕೆ ಚಲಿಸುತ್ತಿರೋದು ಹೆಚ್ಚು ಕಡಿಮೆ ಬಹಿರಂಗವಾಗುವ ಕಾಲ ಸನಿಹ ಆಗ್ತಿದೆ. ಗೌಹಾತಿಯ ಕಾಮಾಕ್ಯ ದೇವಸ್ಥಾನಕ್ಕೆ ತೆರಳಿದ್ದ ಹೆಚ್. ವಿಶ್ವನಾಥ್, ಇಂದು ದೆಹಲಿಗೆ ತೆರಳಿ ಹಲವು ಬಿಜೆಪಿ ನಾಯಕರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ರು. ಸಂಸತ್‌ನ ಲಾಂಜ್‌ನಲ್ಲೇ ರಾಘವೇಂದ್ರ, ಶ್ರೀನಿವಾಸ ಪ್ರಸಾದ್, ಬಸವರಾಜು ಸೇರಿದಂತೆ ಹಲವು ಬಿಜೆಪಿ ಸಂಸದರನ್ನು ಭೇಟಿ ಮಾಡಿದ ಬಳಿಕ ಜೆಡಿಎಸ್ ತೊರೆಯುವ ಸುಳಿವು ಕೊಟ್ರು.

ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್. ವಿಶ್ವನಾಥ್, ರಾಜ್ಯ ರಾಜಕೀಯದಲ್ಲಿ ಅರಾಜಕತೆ ಉಂಟಾಗಿದೆ. ಮೈತ್ರಿಯನ್ನು ಕಾಪಾಡಿಕೊಳ್ಳುವಲ್ಲಿ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹಾಗೂ ಸಿಎಂ ಕುಮಾರಸ್ವಾಮಿ ವಿಫಲರಾಗಿದ್ದಾರೆ ಎಂದು ಸಿದ್ದರಾಮಯ್ಯ ಹಾಗೂ ಸಿಎಂ ವಿರುದ್ಧ ಚಾಟಿ ಬೀಸಿದ್ದಾರೆ. ಇನ್ನೂ ರಾಜ್ಯ ರಾಜಕಾರಣಕ್ಕೆ ಒಂದೂವರೆ ವರ್ಷದಿಂದ ಗ್ರಹಣ ಹಿಡಿದಿದೆ. ಸರ್ಕಾರ ಬೀಳುತ್ತೆ ಅನ್ನೋದಕ್ಕಿಂತ ಸರ್ಕಾರವನ್ನು ಬೀಳಿಸಿಕೊಳ್ಳೋಕೆ ರೆಡಿಯಾಗಿದ್ದಾರೆ. ಮೂತ್ರಿ ಪಕ್ಷದಲ್ಲಿ ಯಾರೂ ಕೂಡ ಜವಾಬ್ದಾರಿಯುತವಾಗಿ ವರ್ತಿಸುತ್ತಿಲ್ಲ. ಬಹಳ ಜನ ಶಾಸಕರು ಅಸಮಾಧಾನ ಹೊಂದಿದ್ದಾರೆ, ಆದರೆ ಸಮಾಧಾನ ಪಡಿಸುವವರು ಇಲ್ಲವಾಗಿದೆ. ಮೈತ್ರಿ ಸರ್ಕಾರ ಉಳಿಸಿಕೊಂಡು ಹೋಗುವ ವಿಷಯದಲ್ಲಿ ಎರಡೂ ಪಕ್ಷಗಳು ಗಂಭೀರವಾಗಿಲ್ಲ ಎಂದು ಚುಚ್ಚಿದ್ದಾರೆ. ಮೈತ್ರಿಯಲ್ಲಿ ಗೊಂದಲ ನಿರ್ಮಾಣವಾಗಿದೆ. ಮೈತ್ರಿ ಸರ್ಕಾರ ರಾಷ್ಟ್ರ ಮಟ್ಟದಲ್ಲಿ ನಗೆಪಾಟಿಲಿಗೆ ಈಡಾಗಿದೆ ಎಂದು ಟೀಕಿಸಿದ್ದಾರೆ. ವಿಶ್ವನಾಥ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರಗೆ ನಿಂತು ವಾಗ್ದಾಳಿ ಮಾಡ್ತಿದ್ದಾರೆ ಅಂದ್ರೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರೋದು ಪಕ್ಕ ಎನ್ನಲಾಗ್ತಿದೆ. ಇನ್ನು ಈ ನಡುವೆ ಮತ್ತೋರ್ವ ನಾಯಕ ಕೂಡ ಬಿಜೆಪಿ ಸೇರೋ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ಆಪರೇಷನ್ ಕಮಲ ನಡೆಯುತ್ತಿದೆ ಅನ್ನೋದು ಇಡೀ ದೇಶಕ್ಕೇ ಗೊತ್ತಿರೋ ಸಂಗತಿ. ಇದನ್ನು ಬಿಜೆಪಿ ಹೈಕಮಾಂಡ್ ನೇರವಾಗಿ ಭಾಗಿಯಾಗುವ ಮೂಲಕ ಕುದುರೆ ವ್ಯಾಪಾರಕ್ಕೆ ಸಾಥ್ ಕೊಡ್ತಿದೆ ಅನ್ನೋದು ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ನ ಬಹುತೇಕ ನಾಯಕರ ಆರೋಪ. ಆದ್ರೆ ಬಿಜೆಪಿ ನಾಯಕರು ಆಪರೇಷನ್ ಕಮಲ ಮಾಡ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಡಲಯ ಸಾಕಷ್ಟು ಕೆಲಸಗಳಿವೆ. ಸುಖಾಸುಮ್ಮನೆ ಆರೋಪ ಮಾಡುವುದು ಸರಿಯಲ್ಲ ಅನ್ನೋದು ಸಚಿವ ಜಿ.ಟಿ ದೇವೇಗೌಡರ ಮಾತು. ಮೊದಲಿಗೆ ಸಿದ್ದರಾಮಯ್ಯ ವಿರೋಧಿ ಆಗಿರುವ ಜಿ.ಟಿ ದೇವೇಗೌಡರು, ಮಾಜಿ ಸಿಎಂಗೆ ಕೌಂಟರ್ ಕೊಡುವ ಸಲುವಾಗಿಯೇ ಈ ರೀತಿಯ ಹೇಳಿಕೆ ನೀಡಿದ್ದಾರೆ ಎನ್ನಲಾಗಿತ್ತು. ಆದ್ರೆ ಸಿದ್ದರಾಮಯ್ಯ ಸ್ಪಷ್ಟನೆ ಕೊಟ್ಟ ಬಳಿಕ ಮತ್ತೆ ತನ್ನ ವಾದಕ್ಕೆ ಅಂಟಿಕೊಂಡಿದ್ದಾರೆ. ಜಿ.ಟಿ ದೇವೇಗೌಡನಿಗೆ ಆಪರೇಷನ್ ಕಮಲದ ಮಾಹಿತಿ‌ ಇಲ್ಲದೆ ಇರಬಹುದು ಆ ಕಾರಣಕ್ಕಾಗಿ ಆ ರೀತಿ ಹೇಳಿದ್ದಾರೆ ಎಂದು ಸಿದ್ದರಾಮಯ್ಯ ಬೆಣ್ಣೆಯಲ್ಲಿ ಕೂದಲು ತೆಗೆದಂತೆ ಮಾತನಾಡಿದ್ರೂ, ಜಿಟಿಡಿ ಮಾತ್ರ ಆಪರೇಷನ್ ಕಮಲ ಅನ್ನೋದೇ ನಡೀತಿಲ್ಲ. ಅದೆಲ್ಲಾ ಊಹಾ ಪೋಹ ಎಂದು ಬಿಟ್ಟಿದ್ದಾರೆ. ಒಟ್ಟಾರೆ ನಮ್ಮ ಜೆಡಿಎಸ್ ಕಾರ್ಯಕರ್ತರು ಬಿಜೆಪಿ ಅಭ್ಯರ್ಥಿಗೆ ಮತ ಹಾಕಿದ್ದಾರೆ ಎಂದು ವಿವಾದ ಹುಟ್ಟಿಸಿದ್ದ ಸಚಿವ ಜಿ.ಟಿ ದೆಡವೇಗೌಡ, ಇದೀಗ ಬಿಜೆಪಿ ಶಾಸಕರ ಜೊತೆ ಸೇರಿಕೊಂಡು ಅಭಿವೃದ್ಧಿ ಕಾರ್ಯಕ್ರಮದ ಜೊತೆಗೆ ಸಾಕಷ್ಟು ನಗರ ಪ್ರದಕ್ಷಿಣೆ ಹಾಕುತ್ತಾ ಕಮಲದತ್ತ ಜಾರುತ್ತಿದ್ದಾರೆ ಎನ್ನಲಾಗ್ತಿದೆ. ಒಟ್ಟಾರೆ ಹಳೇ ಮೈಸೂರು ಭಾಗದಲ್ಲಿ ಪಕ್ಷ ಬಲವರ್ಧನೆಗೆ ಮುಂದಾಗಿರುವ ಬಿಜೆಪಿ ಗಾಳ ಇಬ್ಬರನ್ನು ತಲುಪಿದೆ ಅನ್ನೋ ಮಾಹಿತಿ ಇದೆ.

Leave a Reply