ಸೂಟ್‌ಕೇಸ್ ಬಿಟ್ಟು ಬಟ್ಟೆ ಬ್ಯಾಗ್ ಹಿಡಿದಿದ್ದು ಯಾಕೆ ನಿರ್ಮಲಾ ಸೀತಾರಾಮನ್..?

ಡಿಜಿಟಲ್ ಕನ್ನಡ ಟೀಮ್:

ಇವತ್ತು ಕೇಂದ್ರ ಬಜೆಟ್ ಮಂಡಿಸಲಾಯ್ತು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಬಜೆಟ್ ಮಂಡನೆ ಮಾಡಿದ್ದಾರೆ. ಮೊದಲ ಪರಿಪೂರ್ಣ ಹಣಕಾಸು ಸಚಿವೆ ಆಗಿರುವ ನಿರ್ಮಲಾ ಸೀತಾರಾಮನ್, ಅಚ್ಚರಿಯ ಬೆಳವಣಿಗೆಗೆ ಕಾರಣರಾದರು. ಬಜೆಟ್ ಅಂದ್ರೆ ಹಣಕಾಸು ಸಚಿವರು ಬಜೆಟ್ ಪ್ರತಿಯನ್ನು ಕೆಂಪು ಸೂಟ್‌ಕೇಸ್‌ನಲ್ಲಿ ತರುವುದು ವಾಡಿಕೆಯಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಪ್ರಧಾನಿಯಾದ ಬಳಿಕವೂ ಅರುಣ್ ಜೇಟ್ಲಿಯವರು ಅದನ್ನೇ ಪಾಲಿಸಿಕೊಂಡು ಬಂದಿದ್ದರು. ಇದೇ ವರ್ಷ ಫೆಬ್ರವರಿಯಲ್ಲಿ ಪಿಯೂಷ್ ಗೋಯಲ್ ಬಜೆಟ್ ಮಂಡಿಸಿದಾಗಲೂ ಸೂಟ್‌ಕೇಸ್‌ನಲ್ಲೇ ಬಜೆಟ್ ಪ್ರತಿ ತರಲಾಗಿತ್ತು. ಆದ್ರೆ ಈ ಬಾರಿ ಸೂಟ್‌ಕೇಸ್ ಇತಿಶ್ರೀ ಹಾಡಿದ್ದಾರೆ ಹಣಕಾಸು‌ ಸಚಿವೆ ನಿರ್ಮಲಾ ಸೀತಾರಾಮನ್.

ಈ ಬಾರಿ ರೇಷ್ಮೆ ಬಟ್ಟೆಯಲ್ಲಿ ಮಾಡಿದ ಬ್ಯಾಗ್ ತಂದಿರುವ ನಿರ್ಮಲಾ ಸೀತಾರಾಮನ್. ಹಣಕಾಸು ಇಲಾಖೆಯ ಲಾಂಛನ ಹಾಕಿಸಿದ್ದಾರೆ. ಆದ್ರೆ ಬಣ್ಣ ಮಾತ್ರ ಬದಲಾಗಿಲ್ಲ. ಕೆಂಪು ಬಣ್ಣದ ರೇಷ್ಮೆ ಬಟ್ಟೆಯಲ್ಲಿ ಮಾಡಿದ ಸೂಟ್‌ಕೇಸ್ ಆಕಾರದ ಬ್ಯಾಗ್‌ನಲ್ಲಿ ಬಜೆಟ್ ಪ್ರತಿ ತಂದಿದ್ದಾರೆ. ಬೆಳಗ್ಗೆ ಸಂಸತ್‌ಗೆ ಹೊರಡುವ ಮುಂಚೆ ವಿತ್ತ ಸಚಿವಾಲಯದಲ್ಲಿ ಸಭೆ ನಡೆಸಿದ ನಿರ್ಮಲಾ ಸೀತಾರಾಮನ್, ಹಣಕಾಸು ಖಾತೆ ರಾಜ್ಯ ಸಚಿವ ಠಾಕೂರ್ ಹಾಗೂ ಹಿರಿಯ ಅಧಿಕಾರಿಗಳ ಜೊತೆ ಮಾಧ್ಯಮಗಳ ಎದುರು ಬಂದಾಗ ಸೂಟ್‌ಕೇಸ್ ಶಾಕ್ ಕೊಟ್ಟರು. ಇದು ಯಾವ ಕಾರಣಕ್ಕೆ ಇರಬಹುದು ಅನ್ನೋ ಬಗ್ಗೆ ಸಾಕಷ್ಟು ಚರ್ಚೆಗಳೂ ನಡೆದವು.

ಮೇಡ್ ಇಂಡಿಯಾ ಯೋಜನೆಗೆ ಮೋದಿ ನೇತೃತ್ವದ ಸರ್ಕಾರ ಪ್ರಾಮುಖ್ಯತೆ ಕೊಟ್ಟಿರುವ ಕಾರಣ ದೇಸಿ ಬ್ಯಾಗ್‌ನಲ್ಲಿ ತಂದಿದ್ದಾರೆ. ಜೊತೆಗೆ ರೇಷ್ಮೆ ಭಾರತದ ಹೆಮ್ಮೆ ಆಗಿದ್ದು ಸಿಂಬಲ್ ಆಫ್ ಮೈಸೂರು ಎನ್ನಲಾಗುತ್ತದೆ. ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್, ಕರ್ನಾಟಕದ ಹೆಮ್ಮೆಯಾಗಿರೋ ರೇಷ್ಮೆಯ ಬ್ಯಾಗ್ ಬಳಸಿದ್ದಾರೆ ಎನ್ನುವ ಚರ್ಚೆಗಳೂ ಸಾಗಿವೆ. ಇನ್ನು ಸೂಟ್‌ಕೇಸ್ ತಯಾರು ಮಾಡಲು ಪ್ರಾಣಿಗಳ ಚರ್ಮ ಬಳಸಲಾಗುತ್ತದೆ. ಗೋಹತ್ಯೆ ವಿರೋಧಿಸುವ ಆರ್‌ಎಸ್‌ಎಸ್ ಸಂಘಟನೆಯಿಂದ ಬೆಳೆದು ಬಂದಿರುವ ನಿರ್ಮಲಾ ಸೀತಾರಾಮನ್ ಚರ್ಮದ ಸೂಟ್‌ಕೇಸ್ ಬಳಕೆ ಮಾಡದೆ ಸಂಸ್ಕೃತಿಯ ಸೆಲೆಯಾದ ರೇಷ್ಮೆ ಬಟ್ಟೆಯ ಬ್ಯಾಗ್ ಬಳಸಿದ್ದಾರೆ ಅನ್ನೋ ಮಾತುಗಳೂ ಕೇಳಿಬಂದಿವೆ. ನಿರ್ಮಲಾ ಸೀತಾರಾಮನ್ ಸ್ವತಂತ್ರ್ಯ ಭಾರತದ ಆರಂಭದಿಂದಲೂ ಚಾಲ್ತಿಯಲ್ಲಿದ್ದ ಕೆಂಪು ಸೂಟ್‌ಕೇಸ್ ಪದ್ಧತಿಯನ್ನು ಕೈಬಿಟ್ಟಿದ್ದು ಯಾಕೆ ಅನ್ನೋದನ್ನು ಅವರೇ ಖಚಿತಪಡಿಸಬೇಕಿದೆ. ಆದ್ರೆ ಮುಂದೆ ಬರುವ ಹಣಕಾಸು ಸಚಿವರು ಇದನ್ನೇ ಬಳಸುತ್ತಾರ ಅಥವಾ ಮತ್ತೆ ಕೆಂಪು ಸೂಟ್‌ಕೇಸ್‌ಗೆ ವಾಪಸ್ ಬರ್ತಾರಾ ಕಾದು ನೋಡಬೇಕು.

Leave a Reply