ಆಪರೇಷನ್ ಕಾಟ.. ಶಿಷ್ಯನ ದಾಳ.. ಸರ್ಕಾರ ಪತನ ಮೊದಲೇ ಗೊತ್ತಿತ್ತಾ..?

ಡಿಜಿಟಲ್ ಕನ್ನಡ ಟೀಮ್:

ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಆಪರೇಷನ್​ ಕಮಲ ಮಾಡಲು ಬಿಜೆಪಿ ನಾಯಕರು ನಿರಂತರ ಸಂಪರ್ಕ ಮಾಡಿದ್ರು. ಆದರೂ ಸರ್ಕಾರ ತೆವಳುತ್ತಾ, ಕುಂಟುತ್ತಾ ಸಾಗಿತ್ತು. ಅಂತಿಮವಾಗಿ ನಿನ್ನೆ 14 ಮಂದಿ ಶಾಸಕರು ರಾಜೀನಾಮೆ ನೀಡಿ ಮುಂಬೈಗೆ ತೆರಳುವ ಮೂಲಕ ಸರ್ಕಾರ ಪತನ ಆಗೋದು ಕನ್ಫರ್ಮ್​ ಆಗಿದೆ. ಕುಮಾರಸ್ವಾಮಿ ಅಮೆರಿಕದಿಂದ ವಾಪಸ್​ ಬರುತ್ತಿದ್ದಂತೆ ಸಚಿವ ಸಂಪುಟ ಸಭೆ ನಡೆಸಲಿದ್ದು, ಎಲ್ಲಾ ಸಾಧ್ಯಸಾಧ್ಯತೆ ಬಗ್ಗೆ ಚರ್ಚೆ ನಡೆಸಿದ ಬಳಿಕ ಶುಕ್ರವಾರದಿಂದ ಶುರುವಾಗುವ ಅಧಿವೇಶನದಲ್ಲಿ ಅಂತಿಮ ಭಾಷಣ ಮಾಡಿ, ರಾಜಭವನಕ್ಕೆ ತೆರಳಿ ರಾಜೀನಾಮೆ ಪತ್ರ ಸಲ್ಲಿಸ್ತಾರೆ ಅನ್ನೋದು ಜೆಡಿಎಸ್ ಮೂಲಗಳೇ ಕೊಡ್ತಿರೋ ಮಾಹಿತಿಯಾಗಿದೆ.

ಇನ್ನೂ ಬಿಜೆಪಿ ನಾಯಕರು ಮಾತ್ರ ಶಾಸಕರ ರಾಜೀನಾಮೆಗೂ ನಮಗೂ ಯಾವುದೇ ಸಂಬಂಧವಿಲ್ಲ ಎನ್ನುತ್ತಿದ್ದಾರೆ. ಬಿಜೆಪಿ ಮಾತಿಗೆ ಬೆಂಬಲವಾಗಿ ಕಾಂಗ್ರೆಸ್​ ನಾಯಕ ರಾಮಲಿಂಗಾರೆಡ್ಡಿ ಸೇರಿದಂತೆ ಗೋಪಾಲಯ್ಯ ರಾಜೀನಾಮೆ ಕೊಟ್ಟಿರೋದು ಆಪರೇಷನ್​ ಕಮಲ ನಡೆದಿಲ್ಲ ಎನ್ನಬಹುದು. ಆದರೆ ರಾಜೀನಾಮೆ ನೀಡಿದ ಬಳಿಕ ರಾಜ್ಯಪಾಲರನ್ನು ಭೇಟಿ ಮಾಡಿದ ಬಂಡಾಯ ಶಾಸಕರು ನೇರವಾಗಿ ಹೆಚ್​ಎಎಲ್​ ಏರ್​ಪೋರ್ಟ್​ಗೆ ತೆರಳಿದ್ರು. ಅಲ್ಲಿ ಬಿಜೆಪಿ ರಾಜ್ಯಸಭಾ ಸದಸ್ಯ ರಾಜೀವ್​ ಚಂದ್ರಶೇಖರ್​ ಅವರ ವಿಶೇಷ ವಿಮಾನಗಳು ಶಾಸಕರನ್ನು ಕರೆದೊಯ್ಯಲು ರೆಡಿಯಾಗಿದ್ದವು. ಎಲ್ಲರನ್ನೂ ಕರೆದುಕೊಂಡು ಮುಂಬೈ ಕಡೆಗೆ ಹಾರಿದವು. ಅದಕ್ಕೂ ಮಿಗಿಲಾಗಿ ಕಳೆದ ಬಾರಿ ಮುಂಬೈನಲ್ಲಿ ಬಂಡಾಯ ಶಾಸಕರನ್ನು ಹಿಡಿದಿಟ್ಟುಕೊಂಡು ಆಪರೇಷನ್ ಕಮಲ ಮಾಡಲು ನಿಯೋಜನೆಗೊಂಡಿದ್ದ ಶಾಸಕ ಅಶ್ವತ್ ನಾರಾಯಣ ಕೂಡ ಬಂಡಾಯ ಶಾಸಕರಿಗೆ ಜೊತೆಯಾಗಿದ್ದಾರೆ. ಇತ್ತ ಶಾಸಕ ಮುನಿರತ್ನ ಆರ್​. ಅಶೋಕ್​ ನಿವಾಸಕ್ಕೆ ಭೇಟಿ ನೀಡಿ ಚರ್ಚೆ ನೀಡಿದ ಬಳಿಕ ಬಿ.ಎಸ್ ಯಡಿಯೂರಪ್ಪ ನಿವಾಸಕ್ಕೂ ಆಗಮಿಸಿದ್ರು. ಇನ್ನೂ ಆಪರೇಷನ್ ಕಮಲದ ರೂವಾರಿಗಳಾದ ಬಿಎಸ್​ವೈ ಆಪ್ತ ಸಂತೋಷ್​ ಹಾಗೂ ಮಾಜಿ ಶಾಸಕ ಯೋಗೇಶ್ವರ್​, ಶಾಸಕರನ್ನು ಮುಂಬೈಗೆ ಹತ್ತಿಸಿದ ಬಳಿಕ ಬಿಎಸ್​ವೈ ನಿವಾಸಕ್ಕೆ ಆಗಮಿಸಿ ಎಲ್ಲಾ ವಿವರನ್ನು ಒಪ್ಪಿಸಿದ್ದಾರೆ.

ಆಪರೇಷನ್ ಕಮಲ ಇಷ್ಟು ದಿನ ಸಕ್ಸಸ್​ ಆಗಿರಲಿಲ್ಲ, ಎಷ್ಟೆ ಶಾಸಕರು ಬಂಡಾಯ ಎದ್ದರೂ ಸಮಾಧಾನ ಮಾಡಲಾಗ್ತಿತ್ತು. ಆದ್ರೆ ಸಿದ್ದರಾಮಯ್ಯ ಸರ್ಕಾರದ ಮೇಲೆ ಹಿಡಿತ ಬಿಗಿ ಮಾಡಲು ಸಿದ್ದರಾಮಯ್ಯ ಮುಂದಾಗಿದ್ರು. ಅದನ್ನು ನೇರವಾಗಿ ದೆಹಲಿಗೆ ದೇವೇಗೌಡರು ತಲುಪಿಸಿದ ಮೇಲೆ ಸಿದ್ದರಾಮಯ್ಯ ಕುಪಿತರಾದ್ರು. ತಮ್ಮ ಆಪ್ತರನ್ನೇ ದಾಳವಾಗಿ ಬಳಸಿಕೊಂಡ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜೀನಾಮೆ ಕೊಡಿಸುವ ಮೂಲಕ ಆಪರೇಷನ್​ ಕಮಲಕ್ಕೆ ಕೈಜೋಡಿಸಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿವೆ. ಅದರಲ್ಲೂ ಶಾಸಕ ಮುನಿರತ್ನ, ಭೈರತಿ ಬಸವರಾಜು, ಎಸ್​.ಟಿ ಸೋಮಶೇಖರ್​ ರಾಜೀನಾಮೆ ನೀಡಿದ್ದಾರೆ. ರಾಮಲಿಂಗಾರೆಡ್ಡಿ ಅತೃಪ್ತರ ಜೊತೆ ಕೈಜೋಡಿಸಿದ್ದು ಬೇರೆ ವಿಚಾರಕ್ಕೆ ಆದರೂ ಸಿದ್ದರಾಮಯ್ಯ ಶಿಷ್ಯರು ಕೈಜೋಡಿಸಿದ್ರಿಂದಲೇ ಅತೃಪ್ತರ ಸಂಖ್ಯೆ ಹೆಚ್ಚಾಗಲು ಕಾರಣ ಅನ್ನೋ ಮಾತಿದೆ. ಇಲ್ಲದಿದ್ದರೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಶಾಸಕರನ್ನು ರಾಜೀನಾಮೆ ಕೊಡಿಸಲು ಆಗುತ್ತಿರಲಿಲ್ಲ ಅನ್ನೋ ಮಾತುಗಳು ಕೇಳಿಬಂದಿದೆ. ಸಿದ್ದರಾಮಯ್ಯನ ಆಟ ಮಾಜಿ ಪ್ರಧಾನಿ ದೇವೇಗೌಡರಿಗೆ ಮೊದಲೇ ಗೊತ್ತಿದ್ರಿಂದ ಮಧ್ಯಂತರ ಚುನಾವಣೆ ಮಾತನಾಡಿದ್ರು ಅನ್ನೋ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿರುವ ಮಾತು. ಒಟ್ಟಾರೆ, ಸರ್ಕಾರ ಬೀಳಿಸಲು ಸಿದ್ದರಾಮಯ್ಯ ತಂತ್ರಗಾರಿಕೆ ಮಾಡ್ತಿದ್ದಾರೆ ಅನ್ನೋ ಮಾಹಿತಿ ಸಿಎಂ ಕುಮಾರಸ್ವಾಮಿ ಅವರಿಗೆ ಗೊತ್ತಿದ್ದರೂ ಅಮೆರಿಕ ಪ್ರವಾಸ ಮಾಡಿದ್ದಾರೆ ಅನ್ನೋ ವಿಚಾರವೂ ಕೇಳಿಬಂದಿದೆ.

Leave a Reply