ಸರ್ಕಾರ ಉಳಿಸಲು ಸಿಎಂ ಬಳಿ ಇರುವ ಮೂರು ಆಯ್ಕೆ ಯಾವುವು..?

ಡಿಜಿಟಲ್ ಕನ್ನಡ ಟೀಮ್:

ರಾಜ್ಯ ಸರ್ಕಾರ ಪತನ ಆಗೋದು ಕನ್ಫರ್ಮ್​. ಯಾಕಂದ್ರೆ ಈಗಾಗಲೇ ಶಾಸಕರು ಸ್ಪೀಕರ್​ ಕಚೇರಿಯಲ್ಲಿ ರಾಜೀನಾಮೆ ಸಲ್ಲಿಸಿ ಆಗಿದೆ. ನೇರವಾಗಿ ಸ್ಪೀಕರ್​ಗೆ ರಾಜೀನಾಮೆ ಸಲ್ಲಿಸಬೇಕು ಎಂದು ಸ್ಪೀಕರ್​ ರಮೇಶ್​ ಕುಮಾರ್​ ಹೇಳಿದ್ದಾರೆ. ಹೌದು, ಸ್ಪೀಕರ್​ ಎದುರು ರಾಜೀನಾಮೆಗೆ ಕಾರಣ ಹಾಗೂ ಯಾರೂ ಕೂಡ ರಾಜೀನಾಮೆಗೆ ಬೆದರಿಕೆ ಅಥವಾ ಒತ್ತಡ ಹಾಕಿಲ್ಲ ಎಂದು ಪ್ರತ್ಯಕ್ಷವಾಗಿ ಹೇಳಬೇಕು. ಆದರೆ ಈಗಾಗಲೇ ಸ್ಪೀಕರ್​ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ಸಲ್ಲಿಸಿರುವ ಶಾಸಕರು ನೇರವಾಗಿ ಸ್ಪೀಕರ್​ ಎದುರು ಹಾಜರಾಗಿ ಮಾಹಿತಿ ನೀಡಬಹುದು. ಸ್ಪೀಕರ್​ ರಾಜೀನಾಮೆ ಅಂಗೀಕರಿಸಲೇ ಬೇಕು ಅನ್ನೋ ನಿಯಮವೇನಿಲ್ಲ. ಶಾಸಕರು ನೀಡಿರುವ ಹೇಳಿಕೆ ನನಗೆ ಸಮಾಧಾನ ತಂದಿಲ್ಲ ಅನ್ನೋ ಕಾರಣ ಕೊಟ್ಟು ಶಾಸಕರ ರಾಜೀನಾಮೆಯನ್ನು ತಾತ್ಕಾಲಿಕವಾಗಿ ತಡೆಯಬಹುದು. ಈ ಮೂಲಕ ಕೂಡ ಸರ್ಕಾರ ಉಳಿಸಿಕೊಳ್ಳುವ ಯತ್ನ ಮಾಡಬಹುದು.

ಸ್ಪೀಕರ್​ ಕಚೇರಿಯನ್ನು ದುರ್ಬಳಕೆ ಮಾಡಿಕೊಂಡ ಆರೋಪ ಸರ್ಕಾರಕ್ಕೆ ಬಂದರೂ ಕೆಲವು ದಿನಗಳ ಕಾಲ ಸರ್ಕಾರ ಉಳಿಸಿಕೊಳ್ಳಲು ಸಿಎಂ ಕುಮಾರಸ್ವಾಮಿ ಈ ಅಸ್ತ್ರ ಬಳಕೆ ಮಾಡಬಹುದು. ಅದರ ಜೊತೆ ಬಿಜೆಪಿ ಶಾಸಕರನ್ನು ಖರೀದಿ ಮಾಡ್ತಿದೆ. ಪಕ್ಷಾಂತರ ಕಾಯ್ದೆ ಅಡಿ ಶಾಸಕರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಕೋರ್ಟ್​ ಮೊರೆ ಹೋಗುವ ಮೂಲಕ ಶಾಸಕರನ್ನು ಕೋರ್ಟ್​ ಕಟಕಟೆಗೆ ಎಳೆದು ನಿಲ್ಲಿಸಬಹುದು. ಆಗ ಶಾಸಕರು ಶಾಸಕತ್ವವೂ ಇಲ್ಲ, ಇತ್ತ ರಾಜೀನಾಮೆ ಅಂಗೀಕಾರವೂ ಇಲ್ಲದೆ ಅತಂತ್ರ ಸ್ಥಿತಿಗೆ ತಲುಪುವಂತೆ ಮಾಡಿದ್ರೆ ಮುಂದಿನ ದಿನಗಳಲ್ಲಿ ಆಪರೇಷನ್​ಗೆ ಶಾಸಕರು ಬಲಿಯಾಗುವುದನ್ನು ತಡೆಯಬಹುದು. ಈ ನಡುವೆ ಬಿಜೆಪಿ ಕೂಡ ರಾಜಭವನಕ್ಕೆ ಎಡತಾಕುವ ಮೂಲಕ ಕೇಂದ್ರ ಗೃಹ ಇಲಾಖೆಗೆ ವರದಿ ಕಳುಹಿಸುವಂತೆ ಒತ್ತಡ ತಂದು ರಾಜ್ಯಪಾಲರ ಆಳ್ವಿಕೆ ಆಗುವಂತೆ ಮಾಡುವುದನ್ನು ಎಚ್ಚರಿಕೆಯಿಂದ ನೋಡಿಕೊಂಡು ನಿಭಾಯಿಸಬೇಕಿದೆ. ಇದ್ರ ಜೊತೆಗೆ ಸರ್ಕಾರ ಉಳಿಸಿಕೊಳ್ಳಲು ಸರ್ಕಾರದ ಬಳಿ ಮತ್ತೊಂದು ಬ್ರಹ್ಮಾಸ್ತ್ರ ಇದೆ.

ಸರ್ಕಾರ ಉಳಿಸಿಕೊಳ್ಳಲು ಸಿಎಂ ಕಣ್ಣೆದುರಿಗೆ ಇರೋದು ಇದೊಂದು ಬ್ರಹ್ಮಾಸ್ತ್ರ ಎಂದರೂ ತಪ್ಪೇನಿಲ್ಲ. ಸದ್ಯಕ್ಕೆ ರಾಜೀನಾಮೆ ಸಲ್ಲಿಸಿರುವ ಶಾಸಕರುಗಳು ನಮಗೆ ಸಚಿವ ಸ್ಥಾನ ಸಿಗಲಿಲ್ಲ, ಪಕ್ಷದಲ್ಲಿ ನಮ್ಮನ್ನು ಕಡೆಗಣಿಸಲಾಗ್ತಿದೆ ಅನ್ನೋ ಅಸಮಾಧಾನ ಹೊಂದಿದವರೇ ಆಗಿದ್ದಾರೆ. ಈ ಕಾರಣವನ್ನೇ ಮುಂದಿಟ್ಟುಕೊಂಡು ಸಿಎಂ ಕುಮಾರಸ್ವಾಮಿ ಸಚಿವ ಸಂಪುಟ ಪುನಾರಚನೆ ಮಾಡಲು ಮುಂದಾಗಬಹುದು. ರಾಜೀನಾಮೆ ಕೊಟ್ಟಿರುವ ಎಲ್ಲಾ ಶಾಸಕರುಗಳಿಗೂ ಸಚಿವ ಸ್ಥಾನ ನೀಡುವುದಾಗಿ ಹೇಳುವ ಮೂಲಕ ಸದ್ಯಕ್ಕೆ ಬಂಡಾಯ ಶಮನ ಮಾಡುವುದು. ಆ ಬಳಿಕ ಎಲ್ಲಾ ಶಾಸಕರನ್ನು ಕರೆದು ಬಹುತೇಕ ಶಾಸಕರಿಗೆ ಸಚಿವ ಸ್ಥಾನ ನೀಡುವುದು, ಆಪರೇಷನ್​ ಕಮಲಕ್ಕೆ ಬ್ರೇಕ್​ ಆಗುವುದು. ಅದಕ್ಕಾಗಿ ಜೆಡಿಎಸ್​ನಿಂದ ಐವರು ಹಾಗೂ ಕಾಂಗ್ರೆಸ್​ನಿಂದ ಐವರು ಹಾಲಿ ಸಚಿವರಿಂದ ರಾಜೀನಾಮೆ ಪಡೆಯುವುದು. ಈಗಾಗಲೇ ಕಾಂಗ್ರೆಸ್​ ಜೊತೆಗೆ ಈ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದ್ದು, ಜೆಡಿಎಸ್​ನಿಂದ ಸಾ.ರಾ ಮಹೇಶ್​ ಹಾಗೂ ಸಿ.ಎಸ್​ ಪುಟ್ಟರಾಜು ರಾಜೀನಾಮೆ ನೀಡಲಿದ್ದಾರೆ. ಇನ್ನುಳಿದ ಮೂವರ ಹೆಸರನ್ನು ಭಾನುವಾರ ಅಂತಿಮ ಮಾಡ್ತೇವೆ ಎಂದಿದ್ದಾರೆ. ಕಾಂಗ್ರೆಸ್​ನಿಂದ ಯಾವ ಸಚಿವರು ರಾಜೀನಾಮೆ ಕೊಡ್ತಾರೆ ಅನ್ನೋದನ್ನು ಕಾಂಗ್ರೆಸ್ ಪಕ್ಷವೇ ಅಂತಿಮ ಮಾಡಿ ನಮಗೆ ತಿಳಿಸಲಿ ಅನ್ನೋ ಸೂಚನೆ ಕೊಟ್ಟಿದ್ದಾರೆ ಅನ್ನೋ ಮಾಹಿತಿಯೂ ಇದೆ. ಸರ್ಕಾರ ಉಳಿಸಿಕೊಳ್ಳಲು ಸಿಎಂ ಆಸ್ತ್ರ ಬಳಸ್ತಾರೆ ಅನ್ನೋದನ್ನು ಕಾದು ನೋಡಬೇಕು.

Leave a Reply