ಕಾಂಗ್ರೆಸ್ ನ ಎಲ್ಲಾ ಸಚಿವರು ರಾಜೀನಾಮೆ! ಅತೃಪ್ತರಿಗೆ ಸಿದ್ದರಾಮಯ್ಯ ಕೊನೆ ಆಫರ್!

ಡಿಜಿಟಲ್ ಕನ್ನಡ ಟೀಮ್:

‘ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ ನ ಎಲ್ಲಾ ಸಚಿವರು ಸ್ವಯಂ ಪ್ರೇರಿತರಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅತೃಪ್ತರಲ್ಲಿ ಯಾರು ಅರ್ಹರಿದ್ದಾರೋ ಅವರಿಗೇ ಶಾಸಕ ಸ್ಥಾನ ನೀಡಲಾಗುವುದು…’ ಇದು ರಾಜೀನಾಮೆ ನೀಡಿರುವ ಅತೃಪ್ತರಿಗೆ ಸಿದ್ದರಾಮಯ್ಯ ನೀಡಿರುವ ಕೊನೆ ಆಫರ್!

ಸೋಮವಾರ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಅವರ ನಿವಾಸದಲ್ಲಿ ನಡೆದ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಮಾಹಿತಿ ನೀಡಿದ ಸಿದ್ದರಾಮಯ್ಯ ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಈ ವೇಳೆ ಅವರು ಹೇಳಿದ್ದಿಷ್ಟು…

‘ಕಳೆದ ಕೆಲವು ದಿನಗಳಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳಿಂದ ಕಾಂಗ್ರೆಸ್ ನ ಎಲ್ಲ ಸಚಿವರು ಸ್ವಯಂ ಪ್ರೇರೇಪಿತರಾಗಿ ರಾಜೀನಾಮೆ ನೀಡಲು ತೀರ್ಮಾನಿಸಿದ್ದಾರೆ. ಅಲ್ಲದೆ ಪಕ್ಷ ಸಚಿವ ಸಂಪುಟ ಪುನಾರಚನೆ ಮಾಡಲು ಸಂಪೂರ್ಣ ಬದ್ಧವಾಗಿದ್ದಾರೆ.

ಬಿಜೆಪಿ ನಾಯಕರು ಆರನೇ ಬಾರಿಗೆ ನಮ್ಮ ಮೈತ್ರಿ ಸರ್ಕಾರ ಬೀಳಿಸಲು ಪ್ರಯತ್ನಿಸುತ್ತಿದ್ದಾರೆ. ಈ ಬಾರಿಯೂ ಅವರ ಪ್ರಯತ್ನ ವಿಫಲವಾಗಲಿದೆ. ಈ ಬಾರಿ ಅವರು ತಮಗೆ ಏನೂ ಗೊತ್ತಿಲ್ಲ ಎಂಬ ನಾಟಕ ಆಡುತ್ತಿದ್ದಾರೆ. ಕಾಂಗ್ರೆಸ್ ಜೆಡಿಎಸ್ ಅವರು ತಾವೇ ರಾಜೀನಾಮೆ ನೀಡುತ್ತಿದ್ದಾರೆ. ಅವರು ರಾಜೀನಾಮೆ ನೀಡಿದರೆ ಸುಮ್ಮನಿರಲು ನಾವೂ ಸನ್ಯಾಸಿ ಅಲ್ಲ ಎಂದು ಹೇಳುತ್ತಿದ್ದಾರೆ.

ಕೇಂದ್ರ ಸರ್ಕಾರ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು, ಶಾಸಕರಿಗೆ ಆಮಿಷ ಒಡ್ಡಿ ರಾಜೀನಾಮೆ ನೀಡುವಂತೆ ಮಾಡುತ್ತಿದ್ದಾರೆ.

ಈಗ ಪಕ್ಷದ ಹೈಕಮಾಂಡ್ ಸಂಪುಟ ಪುನಾರಚನೆ ಮಾಡಲಿದ್ದು ಅದಕ್ಕೆ ಎಲ್ಲ ಶಾಸಕರು ಬದ್ಧರಾಗಿರಲು ಒಪ್ಪಿದ್ದಾರೆ. ಹೀಗಾಗಿ ರಾಜೀನಾಮೆ ನೀಡಿರುವ ಶಾಸಕರಲ್ಲಿ ಅರ್ಹರಿಗೆ ಸಚಿವ ಸ್ಥಾನ ನೀಡುತ್ತೇವೆ. ಬಿಜೆಪಿ ಬೆದರಿಕೆ ಒತ್ತಡಕ್ಕೆ ಮಣಿಯುವ ಅಗತ್ಯವಿಲ್ಲ.

ಅತೃಪ್ತರನ್ನು ಕರೆತರಲು ನಾವು ಹೋಗುವುದಿಲ್ಲ ಅವರೇ ಬರುತ್ತಾರೆ.

Leave a Reply