ನನ್ನ ಬೆಂಬಲ ಬಿಜೆಪಿಗೆ ಎಂದ ಪಕ್ಷೇತರ ಶಾಸಕ! ಬದಲಾಯ್ತು ಸಂಖ್ಯಾಬಲ!

ಡಿಜಿಟಲ್ ಕನ್ನಡ ಟೀಮ್:

ಇತ್ತೀಚೆಗಷ್ಟೇ ಮೈತ್ರಿ ಸರ್ಕಾರದಲ್ಲಿ ಮಂತ್ರಿ ಸ್ಥಾನ ಪಡೆದು ಬೀಗಿದ್ದ ಪಕ್ಷೇತರ ಶಾಸಕ ನಾಗೇಂದ್ರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಬಿಜೆಪಿಗೆ ತಮ್ಮ ಬೆಂಬಲ ಎಂದು ತಿಳಿಸಿದ್ದಾರೆ.

ರಾಜ್ಯ ರಾಜಕೀಯದಲ್ಲಿ ಕ್ಷಿಪ್ರ ಬೆಳವಣಿಗೆ ನಂತರ ತಮ್ಮ ಮಂತ್ರಿಗಿರಿ ಶಾಶ್ವತ ಅಲ್ಲ ಎಂಬ ಆತಂಕ ಎದುರಾಗುತ್ತಿದ್ದಂತೆ ಮೈತ್ರಿ ಸರ್ಕಾರಕ್ಕೆ ನೀಡಿದ್ದ ತಮ್ಮ ಬೆಂಬಲವನ್ನು ವಾಪಸ್ ಪಡೆದಿದ್ದಾರೆ. ಈ ಬಗ್ಗೆ ರಾಜ್ಯಪಾಲರಿಗೆ ಪತ್ರ ಬರೆದಿರುವ ನಾಗೇಶ್, ಹೇಳಿದ್ದಿಷ್ಟು…

‘ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂದೆ ಪಡೆಯುತ್ತಿದ್ದೇನೆ. ಅಲ್ಲದೆ ಬಿಜೆಪಿಗೆ ನನ್ನ ಬೆಂಬಲ ನೀಡುತ್ತಿದ್ದೇನೆ.’

ಹೀಗೆ ರಾಜ್ಯಪಾಲರಿಗೆ ತಿಳಿಸಿರುವ ನಾಗೇಶ್, ಇಂದು ಮಧ್ಯಾಹ್ನ ಎಚ್ಎಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ಮುಂಬೈಗೆ ತೆರಳಿ ಅತೃಪ್ತ ಶಾಸಕರ ಗುಂಪು ಸೇರಲಿದ್ದಾರೆ ಎಂಬ ವರದಿಗಳು ಬಂದಿವೆ.

ನಾಗೇಶ್ ಬೆಂಬಲದೊಂದಿಗೆ ವಿಧಾನಸಭೆಯಲ್ಲಿ ಬಿಜೆಪಿ ಸಂಖ್ಯಾಬಲ 106ಕ್ಕೆ ಏರಿಕೆಯಾಗಿದ್ದು, ಮತ್ತೊಬ್ಬ ಪಕ್ಷೇತರ ಶಾಸಕ ಆರ್.ಶಂಕರ್ ನಡೆ ಏನು ಎಂಬ ಕುತೂಹಲ ಮೂಡಿಸಿದೆ. ಇನ್ನು ರಾಜೀನಾಮೆ ನೀಡಿರುವ ಶಾಸಕರ ಸಂಖ್ಯೆ ಕಳೆದರೆ ಮೈತ್ರಿ ಸರ್ಕಾರದ ಬಲ 105ಕ್ಕೆ ಕುಸಿದಿದೆ. ಇದರೊಂದಿಗೆ ದೋಸ್ತಿ ಸರ್ಕಾರ ಅಲ್ಪ ಮತಕ್ಕೆ ಕುಸಿದಿದೆ. ಇನ್ನು ಸೌಮ್ಯ ರೆಡ್ಡಿ ಸೇರಿದಂತೆ ಇತರೆ ಶಾಸಕರು ರಾಜೀನಾಮೆ ನೀಡಿದ್ದೇ ಆದರೆ, ಕುಮಾರಸ್ವಾಮಿ ಸರ್ಕಾರಕ್ಕೆ ಅಪಾಯ ಖಚಿತ. ಹೀಗಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಈ ಸಮಸ್ಯೆಯನ್ನು ಹೇಗೆ ಎದುರಿಸುತ್ತಾರೆ ಎಂಬ ಕುತೂಹಲ ಮೂಡಿದೆ.

Leave a Reply