ಡಿಜಿಟಲ್ ಕನ್ನಡ ಟೀಮ್:
‘ರಾಜೀನಾಮೆ ನೀಡಿರುವ ನಾಯಕರುಗಳು ಈಗಲೇ ವಾಪಸ್ ಬನ್ನಿ ಜತೆಗೆ ತಮ್ಮ ರಾಜೀನಾಮೆ ನಿರ್ಧಾರ ಬದಲಿಸಿ. ಇಲ್ಲವಾದರೆ ಮುಂದಿನ ಕಾನೂನು ಪರಿಣಾಮ ಎದುರಿಸಿ…’ ಇದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅತೃಪ್ತ ಶಾಸಕರಿಗೆ ಕೊಟ್ಟ ಎಚ್ಚರಿಕೆ.
ಇಂದು ವಿಧಾನ ಸಭೆ ಅಧಿವೇಶನದ ವಿಚಾರವಾಗಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಸಿದೆವು. ಇದರಲ್ಲಿ ಅತೃಪ್ತ ಶಾಸಕರು ಹೊರತುಪಡಿಸಿ ಉಳಿದ ಎಲ್ಲಾ ಶಾಸಕರು ಸಭೆಗೆ ಹಾಜರಾಗಿದ್ದರು ಎಂದರು. ಈ ವೇಳೆ ಅವರು ಹೇಳಿದ್ದಿಷ್ಟು…
‘ಪ್ರಜಾಪ್ರತಿನಿಧಿ ಕಾಯಿದೆ ಪ್ರಕಾರ ಬೇರೆ ಪಕ್ಷದ ಆಮಿಷ, ಒತ್ತಡಕ್ಕೆ ಮಣಿದು ರಾಜೀನಾಮೆ ನೀಡಿದರೆ ಅದು ಪಕ್ಷಾಂತರ ನಿಷೇಧ ಕಾಯ್ದೆ ಉಲ್ಲಂಘನೆಯಾಗುತ್ತದೆ. ಹೀಗಾಗಿ ಈಗಲೂ ನಮ್ಮ ಪಕ್ಷದ ನಾಯಕರಿಗೆ ಮನವಿ ಮಾಡಿಕೊಳ್ಳುತ್ತೇನೆ. ಬಿಜೆಪಿ ಒತ್ತಡಕ್ಕೆ ಮಣಿಯದೆ ವಾಪಸ್ ಬಂದು ರಾಜೀನಾಮೆ ಪಡೆಯಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ.
ನೀವು ರಾಜೀನಾಮೆ ನೀಡಿರುವುದು ಕಾನೂನು ಉಲ್ಲಂಘನೆ ಆಗಿದ್ದು ನೀವು ರಾಜೀನಾಮೆ ಹಿಂಪಡೆಯದಿದ್ದರೆ ಮುಂದಿನ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.
ಬಿಜೆಪಿಯವರು ಈಗಾಗಲೇ ಐದು ಬಾರಿ ನಮ್ಮ ಸರ್ಕಾರ ಅಸ್ಥಿರಗೊಳಿಸಲು ಪ್ರಯತ್ನಿಸಿದ್ದು ಇದು ಆರನೇ ಬಾರಿ. ಶಾಸಕರಿಗೆ ಹಣದ ಆಮಿಷ ಒಡ್ಡಿದ್ದಾರೆ. ಈ ಹಣ ಯಾರದ್ದು? ನ್ಯಾಯಯುತವಾದ ಹಣದಿಂದ ಈ ಕಾರ್ಯ ನಡೆಸುತ್ತಿದ್ದಾರೆಯೇ? ಕಪ್ಪು ಹಣದ ಹೋರಾಟ ಮಾಡುವ ಮೋದಿ, ಆಪರೇಷನ್ ಕಮಲಕ್ಕೆ ಕುಮ್ಮಕ್ಕು ನೀಡಿದ್ದಾರೆ.’