ಡಿಜಿಟಲ್ ಕನ್ನಡ ಟೀಮ್:
ಅತೃಪ್ತ ಶಾಸಕರಿರುವ ಮುಂಬೈ ಹೊಟೇಲ್ ಗೆ ಪ್ರವೇಶಿಸಲು ಮುಂದಾದ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಮುಂಬೈ ಪೊಲೀಸರು ತಡೆದ ಪರಿಣಾಮ ಹೊಟೇಲ್ ಮುಂಭಾಗದಲ್ಲಿ ನಾಟಕೀಯ ಬೆಳವಣಿಗೆ ನಡೆದಿದೆ.
ತಮ್ಮನ್ನು ತಡೆದ ಪೊಲೀಸರ ಜತೆ ಸಂಯಮದಿಂದಲೇ ಮಾತನಾಡಿ ಹೊಟೇಲ್ ದ್ವಾರದಲ್ಲೇ ಕಾಯುತ್ತಿರುವ ಡಿ.ಕೆ.ಶಿವಕುಮಾರ್, ಬಿಜೆಪಿ ವಿರುದ್ಧ ಕಿಡಿ ಕಾರಿದರು. ಈ ವೇಳೆ ಅವರು ಹೇಳಿದ್ದಿಷ್ಟು…
‘ಮಹಾರಾಷ್ಟ್ರ ಪೊಲೀಸರು ಉತ್ತಮ ಅಧಿಕಾರಿಗಳು. ಸರ್ಕಾರದ ಆದೇಶವನ್ನು ಅವರು ಪಾಲಿಸುತ್ತಿದ್ದಾರೆ. ನಾವು ಯಾರನ್ನು ಬಲವಂತವಾಗಿ ಎಳೆದುಕೊಂಡು ಹೋಗಲು ಬಂದಿಲ್ಲ. ನಮ್ಮ ರೂಮ್ ಮುಂಗಡವಾಗಿ ಕಾಯ್ದಿರಿಸಲಾಗಿದೆ. ನಾವು ಹೋಗುತ್ತೇವೆ. ನಾವೇನು ವೆಪನ್ಸ್ ತಂದಿಲ್ಲ.
ಬಿಜೆಪಿ ನಾಯಕರಿಗೆ ಪ್ರವೇಶ ನೀಡಲಾಗಿದೆ. ಆದರೆ ನಮಗೆ ನೀಡುತ್ತಿಲ್ಲ. ಯಾಕೆ? ನಮ್ಮ ಪಕ್ಷದ ಶಾಸಕರು ಹೊಟೇಲ್ ಒಳಗೆ ಇದ್ದಾರೆ. ಅವರು ನಮ್ಮ ಸ್ನೇಹಿತರು. ಯಾರನ್ನೂ ಬೆದರಿಸಿ ಎಳೆದುಕೊಂಡು ಹೋಗಲು ಬಂದಿಲ್ಲ. ಸಣ್ಣ ಸಮಸ್ಯೆ ಇದೆ, ನಾವು ಮಾತುಕತೆಗಳನ್ನು ನಡೆಸುತ್ತೇವೆ. ಬೆದರಿಕೆ ಹಾಕುವ ಪ್ರಶ್ನೆಯೇ ಇಲ್ಲ, ನಾವು ಪರಸ್ಪರ ಪ್ರೀತಿಸುತ್ತೇವೆ ಮತ್ತು ಗೌರವಿಸುತ್ತೇವೆ. ಬೇಕಾದರೆ ಪೊಲೀಸ್ ಅಧಿಕಾರಿಗಳು ನಮ್ಮ ಜತೆ ಬರಲಿ. ಒಳಗೆ ಬಿಡದಿದ್ದರೆ, ಎಷ್ಟೇ ಹೊತ್ತಾದರೂ ಸರಿಯೇ ನಾನು ಇಲ್ಲೇ ಕಾಯುತ್ತೇನೆ’ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಸಚಿವ ಡಿಕೆ ಶಿವಕುಮಾರ್ ಜತೆಗೆ ಸಚಿವ ಜಿ.ಟಿ.ದೇವೇಗೌಡ ಮತ್ತು ಜೆಡಿಎಸ್ ಶಾಸಕ ಶಿವಲಿಂಗೇಗೌಡ ಅವರು ಮುಂಬಯಿಗೆ ತೆರಳಿದ್ದು ಅವರಿಗೂ ಹೊಟೇಲ್ ಒಳಪ್ರವೇಶಿಸಲು ಅವಕಾಶ ನಿರಾಕರಿಸಲಾಗಿದೆ. ಹೊಟೇಲ್ ಎದುರು ಭಾರಿ ಸಂಖ್ಯೆಯ ಪೊಲೀಸರನ್ನುನಿಯೋಜಿಸಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಇನ್ನು ಹೊಟೇಲ್ ಹೊರಗೆ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಗೋ ಬ್ಯಾಕ್ , ಗೋಬ್ಯಾಕ್ ಎಂಬ ಘೋಷಣೆಗಳನ್ನು ಜೆಡಿಎಸ್ ಶಾಸಕ ನಾರಾಯಣ ಗೌಡ ಅವರ ಬೆಂಬಲಿಗರು ಕೂಗಿದ್ದಾರೆ. ರಾಜೀನಾಮೆ ನೀಡಿರುವ ಶಾಸಕರು ಪೊಲೀಸರಿಗೆ ದೂರು ನೀಡಿದ್ದು, ಭದ್ರತೆ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ. ಡಿ.ಕೆ.ಶಿವಕುಮಾರ್ ಮತ್ತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನಮ್ಮನ್ನು ಬಲತ್ಕಾರವಾಗಿ ಎಳೆದೊಯ್ಯಲಿದ್ದಾರೆ, ನಮಗೆ ಭದ್ರತೆ ನೀಡಿ ಎಂದು ದೂರು ನೀಡಿದ್ದರು ಮತ್ತು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.