ಸಚಿವ ಡಿಕೆ ಶಿವಕುಮಾರ್ ಅವರನ್ನು ವಶಕ್ಕೆ ಪಡೆದ ಮುಂಬೈ ಪೊಲೀಸ್

ಡಿಜಿಟಲ್ ಕನ್ನಡ ಟೀಮ್:

ಅತೃಪ್ತ ಶಾಸಕರನ್ನು ಭೇಟಿ ಮಾಡಲು ತೆರಳಿದ್ದ ಕರ್ನಾಟಕ ಜಲಸಂಪನ್ಮೂಲ, ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮುಂಬೈನ ಖಾಸಗಿ ಹೊಟೇಲ್ ನಲ್ಲಿ ತಂಗಿರುವ ಅತೃಪ್ತರನ್ನು ಭೇಟಿ ಮಾಡಲು ಸಚಿವ ಡಿಕೆಶಿ ಬುಧವಾರ ತೆರಳಿದ್ದರು. ಆದರೆ ಮುಂಬೈ ಪೊಲೀಸರು ಅವರನ್ನು ಹೊಟೇಲ್ ಒಳಗೆ ಪ್ರವೇಶಿಸಲು ಅನುಮತಿ ನೀಡಲಿಲ್ಲ. ಅತೃಪ್ತರನ್ನು ಭೇಟಿ ಮಾಡದೆ ಇಲ್ಲಿಂದ ಹೋಗುವುದಿಲ್ಲ ಎಂದು ಸಚಿವರು ಹೊಟೇಲ್ ಮುಂಭಾಗದಲ್ಲೇ ಕಾದು ಕುಳಿತಿದ್ದರು. ಡಿಕೆಶಿ ಅವರ ಬೆಂಬಲಕ್ಕೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಬೆಂಬಲವಾಗಿ ಅವರ ಜತೆ ಸೇರಿಕೊಂಡರು.

ಸುದೀರ್ಘ ಆರು ತಾಸುಗಳ ನಂತರ ಸೆಕ್ಷನ್ 144, ಹಾಗೂ ಭದ್ರತೆ ಕಾರಣ ನೀಡಿ ಮುಂಬೈ ಪೊಲೀಸರು ಸಚಿವರನ್ನು ವಶಕ್ಕೆ ಪಡೆದಿದ್ದಾರೆ.

ಡಿಕೆ ಶಿವಕುಮಾರ್ ಅವರ ಜತೆಗೆ ಸಚಿವ ಜಿಟಿ ದೇವೇಗೌಡ, ಜೆಡಿಎಸ್ ನಾಯಕ ಶಿವಲಿಂಗೇಗೌಡ ಹಾಗೂ ಬಾಲಕೃಷ್ಣ ಅವರನ್ನೂ ವಶಕ್ಕೆ ಪಡೆದ ಪೊಲೀಸರು, ಇವರನ್ನು ಮುಂಬೈ ವಿವಿ ಆವರಣಕ್ಕೆ ಪೊಲೀಸ್ ವಾಹನದಲ್ಲಿ ಕರೆದೊಯ್ದರು. ಸೆಕ್ಷನ್ 144 ಜಾರಿಯಲ್ಲಿದ್ದರು ಪ್ರತಿಭಟನಾ ನಿರತ ಜನರನ್ನು ನಿಭಾಯಿಸಲು ವಿಫಲವಾದ ಮಹಾರಾಷ್ಟ್ರ ಪೊಲೀಸರು, ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಕರ್ನಾಟಕದ ಸಚಿವರನ್ನು ವಶಕ್ಕೆ ಪಡೆದಿರುವುದನ್ನು ಕಾಂಗ್ರೆಸ್ ನಾಯಕರು ಖಂಡಿಸಿದ್ದಾರೆ.

Leave a Reply