ಅತೃಪ್ತರ ಸಂಖ್ಯೆ ಹೆಚ್ಚಳ, ಮುಂಬೈ ಬೀದಿಯಲ್ಲಿ ನಿಂತು ಹೋರಾಡುತ್ತಿರುವ ಡಿಕೆಶಿ

ಡಿಜಿಟಲ್ ಕನ್ನಡ ಟೀಮ್:

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈ ಹೋಟೆಲ್ ಸೇರಿರುವ ಶಾಸಕರ ಸಂಖ್ಯೆ ನಿಧಾನವಾಗಿ ಏರಿಕೆಯಾಗ್ತಿದ್ದು, ರಾಜ್ಯ ಸರ್ಕಾರದ ಆಯುಷ್ಯ ಕಡಿಮೆಯಾಗುತ್ತಿದೆ. ಅತ್ತ ಮುಂಬೈ ಹೊಟೇಲ್ ಮುಂಡೆ ಸಚಿವ ಡಿಕೆ ಶಿವಕುಮಾರ್ ರಸ್ತೆಯಲ್ಲೇ ನಿಂತು ತಮ್ಮ ಪಟ್ಟು ಬಿಡದೆ ಅತೃಪರ ಭೇಟಿಗೆ ಹೋರಾಡುತ್ತಿದ್ದಾರೆ. ನಿರಂತರ ಐದು ಗಂಟೆಗಳ ಕಾಲ ರಸ್ತೆಯಲ್ಲೇ ನಿಂತ ಸಚಿವ ಡಿಕೆಶಿಗೆ ಕೊನೆಗೂ ಹೊಟೇಲ್ ನಲ್ಲಿ ಕೊಠಡಿ ನೀಡಲಾಗಿದೆ ಎಂಬ ವರದಿಗಳು ಬಂದಿವೆ.

ಇವತ್ತು ಬೆಳಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಶಾಸಕ ರಮೇಶ್ ಜಾರಕಿಹೊಳಿ, ‘ನಾವು ಯಾವುದೇ ಕಾರಣಕ್ಕೂ ವಾಪಸ್ ಹೋಗೋದಿಲ್ಲ, ಮತ್ತೆ ನಾಲ್ವರು ಮುಂಬೈಗೆ ಬರಲಿದ್ದಾರೆ’ ಅನ್ನೋ ಸ್ಪೋಟಕ ಹೇಳಿಕೆ ನೀಡಿದ್ರು‌. ಅದಾದ ಕೆಲವೇ ನಿಮಿಷಗಳಲ್ಲಿ ಕೋಲಾರದ ಜೆಡಿಎಸ್ ಶಾದಕ ಶ್ರೀನಿವಾಸ ಗೌಡ ಏರ್ ಪೋರ್ಟ್‌ನಲ್ಲಿ ಬಿ.ಎಸ್ ಯಡಿಯೂರಪ್ಪ ಪುತ್ರ ವಿಜಯೇಂದ್ರ ಜೊತೆಗೆ ಮಾತುಕತೆ ನಡೆಸಿ ನಿಲ್ದಾಣದ ಒಳಗೆ ಹೋಗಿದ್ದು, ಮುಂಬೈನತ್ತ ಪ್ರಯಾಣ ಬೆಳಸಿದ್ದಾರೆ.

ಆದ್ರೆ ಹೋಗುವ ಅವಸರದಲ್ಲಿ ಮಾತನಾಡಿದ ಶ್ರೀನಿವಾಸ ಗೌಡ, ನಾನು ಮುಂಬೈಗೆ ಹೋಗ್ತಿಲ್ಲ, ದೆಹಲಿಗೆ ಹೋಗ್ತಿದ್ದೇನೆ ಎಂದಿದ್ದಾರೆ. ಸರ್ಕಾರ ಉಳಿಸಿಕೊಳ್ಳಲು ಸಚಿವ ಡಿ.ಕೆ ಶಿವಕುಮಾರ್ ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದು, ಮುಂಬೈನ ಹೋಟೆಲ್ ಎದುರು ಕಾದು ಕುಳಿತಿದ್ದಾರೆ. ನನ್ನ ಶಾಸಕ ಮಿತ್ರರು ಅಸಮಾಧಾನಗೊಂಡು ರಾಜೀನಾಮೆ ಕೊಟ್ಟು ಇಲ್ಲಿಗೆ ಬಂದಿದ್ದಾರೆ. ನಾನು ಅವರೊಟ್ಟಿಗೆ ಮಾತನಾಡಲೇ ಬೇಕು ಎಂದು ಹಠ ಹಿಡಿದಿರುವ ಡಿಕೆ ಶಿವಕುಮಾರ್ ಅವರಿಗೆ ಹೋಟೆಲ್ ಪ್ರವೇಶ ನಿರಾಕರಿಸಲಾಗಿದೆ. ನಾನು ಹೋಟೆಲ್‌ನಲ್ಲಿ ರೂಂ ಬುಕ್ ಮಾಡಿದ್ದೇನೆ. ಓರ್ವ ಗ್ರಾಹಕನಾಗಿ ನನ್ನನ್ನು ಒಳಗೆ ಬಿಡಿ ಎಂದು ಡಿಕೆಶಿ ಆಗ್ರಹಿಸಿದ್ದಾರೆ. ಆದ್ರೆ ಹೋಟೆಲ್ ಆಡಳಿತ ಮಂಡಳಿ ಡಿಕೆಶಿ ರೂಮ್ ಬುಕ್ಕಿಂಗ್ ರದ್ದು ಮಾಡಿದ್ದು, ಒಳಗೆ ಬಾರದಂತೆ ಮುಂಬೈ ಪೊಲೀಸ್ ಮೂಲಕ ಹೊರಗಡೆ ತಡೆಯಲಾಗಿದೆ. ಇನ್ನು ಬಂಡಾಯ ಶಾಸಕರ ಭೇಟಿ ಮಾಡದೆ ನಾನು ಇಲ್ಲಿಂದ ಹೋಗುವುದೇ ಇಲ್ಲ ಪಟ್ಟು ಹಿಡಿದಿರುವ ಡಿ.ಕೆ ಶಿವಕುಮಾರ್, ಮಳೆಯನ್ನೂ ಲೆಕ್ಕಿಸದೆ ಹೋಟೆಲ್ ಹೊರಗೆ ಕಾಯುತ್ತಾ ಕುಳಿತಿದ್ದಾರೆ. ಹೊರಗಡೆಯೇ ತಿಂಡಿ ತರಿಸಿಕೊಂಡು ಬೀದಿಯಲ್ಲೇ ಉಪಾಹಾರ ಸೇವಿಸಿದ್ದಾರೆ. ನಂತರ ಡಿಕೆ ಶಿವಕುಮಾರ್ ಅವರಿಗೆ ಅತೃಪ್ತರ ಕೊಠಡಿ ಇರುವ ಕಟ್ಟಡ ಬಿಟ್ಟು ಪಕ್ಕದ ಕಟ್ಟಡದಲ್ಲಿ ಕೊಠಡಿ ನೀಡಲಾಗಿದೆ ಎಂದು ವರದಿಗಳು ಬಂದಿವೆ.

ಇತ್ತ ಬಿಜೆಪಿ ನಾಯಕರು ಮಹಾತ್ಮ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದ ಬಿಜೆಪಿ ನಾಯಕರು, ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡಿದೆ. ಕೂಡಲೇ ಸಿಎಂ ಕುಮಾರಸ್ವಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹೋಗಬೇಕು. ಬಹುಮತ ಹೊಂದಿರುವ ಬಿಜೆಪಿಗೆ ಸರ್ಕಾರ ರಚನೆಗೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಪಡಿಸಿದ್ದಾರೆ. ಇನ್ನೊಂದು ಕಡೆ ಐಟಿ ಅಧಿಕಾರಿಗಳನ್ನು ಬಳಸಿಕೊಂಡು ಶಾಸಕರನ್ನು ಬೆದರಿಸುವ ಕೆಲಸವನ್ನು ಬಿಜೆಪಿ ನಾಯಕರು ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಬೆಂಗಳೂರಿನ ಐಟಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ಸ್ವತಃ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಸೇರಿದಂತೆ ಸಾಕಷ್ಟು ನಾಯಕರು ಭಾಗಿಯಾಗಿದ್ದು, ಆಪರೇಷನ್ ಕಮಲ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಲೋಕಸಭೆಯಲ್ಲೂ ಕರ್ನಾಟಕ ರಾಜಕೀಯ ಹೈಡ್ರಾಮಾ ಪ್ರತಿಧ್ವನಿಸಿದ್ದು, ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷದ ಸದಸ್ಯರು ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುವ ಮೂಲಕ ಸದನದಲ್ಲಿ ಗದ್ದಲ ಉಂಟು ಮಾಡಿದ್ದಾರೆ.

Leave a Reply