ತಕ್ಷಣವೇ ರಾಜೀನಾಮೆ ಅಂಗೀಕಾರ ಇಲ್ಲ! ಸ್ಪೀಕರ್ ರಮೇಶ್ ಕುಮಾರ್  ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್:

‘ರಾಜೀನಾಮೆ ಕುರಿತು ನನಗೆ ಕೆಲವು ಗೊಂದಲವಿದೆ. ಸ್ಪಷ್ಟನೆ ಹಾಗೂ ನೈಜ್ಯತೆ ಮನವರಿಕೆ ಆದಾಗ ರಾಜೀನಾಮೆ ಅಂಗೀಕರಿಸುತ್ತೇನೆ. ಜನರ ಭಾವನೆ ಪರಿಗಣಿಸಿ ತೀರ್ಮಾನ ಮಾಡುತ್ತೇನೆ…’ ಎಂದು ಹೇಳುವ ಮೂಲಕ ವಿಧಾನಸಭೆ ಅಧ್ಯಕ್ಷ ರಮೇಶ್ ಕುಮಾರ್ ಅವರು ಅತೃಪ್ತರ ರಾಜೀನಾಮೆ ಸದ್ಯಕ್ಕೆ ಅಂಗೀಕಾರ ಸ್ವೀಕಾರ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಅತೃಪ್ತ ಶಾಸಕರ ಅಹವಾಲು ಆಲಿಸಿ ಮತ್ತೊಮ್ಮೆ ರಾಜೀನಾಮೆ ಸ್ವೀಕರಿಸಿದ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಿಷ್ಟು…

‘ರಾಜ್ಯದ ಸಾರ್ವಜನಿಕ ಜೀವನದಲ್ಲಿ ಇಂದು ವಿಶಿಷ್ಟ ಸನ್ನಿವೇಶ ಉಂಟಾಗಿದೆ. ವಿಧಾನಸಭೆ ಅಧ್ಯಕ್ಷನಾಗಿ ಯಾವ ವಿಚಾರದಲ್ಲಿ ಗೊಂದಲ ಆಗಿದೆ. ಈ ಬಗ್ಗೆ ಜನರಿಗೆ ಸ್ಪಷ್ಟನೆ ನೀಡುವುದು ನನ್ನ ಕರ್ತವ್ಯ.

ಯಾರನ್ನೋ ಉಳಿಸೋದು ಕಳುಸೋದು ನನ್ನ ಕೆಲಸ ಅಲ್ಲ. 40 ವರ್ಷಗಳ ಸಾರ್ವಜನಿಕ ಜೀವನದಲ್ಲಿ ಮರ್ಯಾದೆ ಯಿಂದ ಬದುಕಿದ್ದೇನೆ. ಇಂದು ಮಾಧ್ಯಮ ವರದಿಗಳನ್ನು ನೋಡಿ ಬೇಸರ ಆಗಿದೆ. ನಾನು ಉದ್ದೇಶ ಪೂರ್ವಕವಾಗಿ ವಿಳಂಬ ಧೋರಣೆ ತೋರಿದ್ದೇನೆ ಎಂದು ಹೇಳಲಾಗಿದೆ. ನಾನು ಎಲ್ಲಿ ವಿಳಂಬ ಮಾಡಿದ್ದೇನೆ.

ಜುಲೈ 6ರ ಶನಿವಾರದಂದು ನಾನು 10 ಗಂಟೆಯಿಂದ 12.30 ಕಚೇರಿಯಲ್ಲಿ ಕೆಲಸ ಮಾಡಿ ನಂತರ ನನ್ನ ಕೆಲಸದ ನಿಮಿತ್ತ ಹೋದೆ. ಆದರೆ ರಾಜೀನಾಮೆ ನೀಡಲು ಶಾಸಕರು ಮಧ್ಯಾಹ್ನ 2.30 ನಂತರ ನನ್ನ ಕಚೇರಿಗೆ ಆಗಮಿಸಿದರು. ಅವರು ನನ್ನ ಕಚೇರಿಗೆ ಆಗಮಿಸುವ ಬಗ್ಗೆ ಮುಂಚಿತವಾಗಿ ನನಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಹೀಗಾಗಿ ನಾನು ಅವರು ಬರುತ್ತಾರೆ ಎಂದು ಓಡಿಹೋಗಲಿಲ್ಲ.

ನಂತರ ಭಾನುವಾರ ರಜೆ ಇತ್ತು. ಸೋಮವಾರ ನನ್ನ ಕೆಲಸದ ನಿಮಿತ್ತ ನಾನು ಕಚೇರಿಗೆ ಬರಲಿಲ್ಲ. ಮಂಗಳವಾರ ಕಚೇರಿಗೆ ಬಂದು ರಾಜೀನಾಮೆ ಪತ್ರ ಪರಿಶೀಲಿಸಿದೆ. ಅದರಲ್ಲಿ ಕರ್ನಾಟಕ ನಡಾವಳಿ ಪ್ರಕಾರ 8 ಶಾಸಕರು ರಾಜೀನಾಮೆ ನೀಡಿರಲಿಲ್ಲ.

ಈ ಬಗ್ಗೆ ನಾನು 8 ಶಾಸಕರಿಗೆ ಸೂಚನೆ ರವಾನಿಸಿದೆ. ಅವರು ಸರಿಯಾದ ಕ್ರಮದಲ್ಲಿ ರಾನೀನಾಮೆ ನೀಡದೆ ಮುಂಬೈಗೆ ಹೋಗಿ, ಅಲ್ಲಿಂದ ಸುಪ್ರೀಂ ಕೋರ್ಟ್ ಮೂಲಕ ನನ್ನನ್ನು ಭೇಟಿಯಾಗಬೇಕೆ?

ನಾನು ಯಾರನ್ನೂ ಕಚೇರಿಗೆ ಬರಬೇಡಿ ಎಂದು ತಡೆದಿಲ್ಲ. ಸರಿಯಾದ ಕ್ರಮದಲ್ಲಿ ರಾಜೀನಾಮೆ ನೀಡಿದವರ ಪೈಕಿ ಕೆಲವರಿಗೆ 12ರಂದು ಭೇಟಿ ಮಾಡಲು ಸೂಚಿಸಿದ್ದೇನೆ. ಇನ್ನು 13 ಮತ್ತು 14 ಸಾರ್ವಜನಿಕ ರಜೆ ಹಿನ್ನೆಲೆಯಲ್ಲಿ 15ರಂದು ಸಮಯ ನೀಡಿದ್ದೇನೆ. ನಾನು ಎಲ್ಲಿ ವಿಳಂಬ ಧೋರಣೆ ಅನುಸರಿಸಿದ್ದೇನೆ?
ಶಾಸಕರ ಸಂವಿಧಾನದ 190ರ ಪ್ರಕಾರ ವಿಚಾರಣೆ ಮಾಡಿ ಅದನ್ನು ಪ್ರಮಾಣಿಕರಿಸುವ ಜವಾಬ್ದಾರಿ ನನ್ನದು.

ಸುಪ್ರೀಂ ಕೋರ್ಟ್ ಅನ್ನು ನಾನು ಗೌರವಿಸುತ್ತೇನೆ. ಹೀಗಾಗಿ ಅದರ ಸೂಚನೆ ಮೇರೆಗೆ ಅತೃಪ್ತರ ರಾಜೀನಾಮೆ ಪಡೆದಿದ್ದೇನೆ. ಆದರೆ ಕೂಡಲೇ ತೀರ್ಮಾನ ತೆಗೆದುಕೊಳ್ಳಿ ಎಂದರೆ ಅದು ಸಾಧ್ಯವಿಲ್ಲ. ಈ ಬಗ್ಗೆ ಕೋರ್ಟ್ ಗೆ ಮನವಿ ಸಲ್ಲಿಸಿದ್ದೇನೆ.

ಸದ್ಯದ ರಾಜಕೀಯ ಬೆಳವಣಿಗೆಯಲ್ಲಿ ಅನೇಕ ಗೊಂದಲಗಳು ಇವೆ. ಇವುಗಳ ಬಗ್ಗೆ ನನಗೆ ಸ್ಪಷ್ಟನೆ ಹಾಗೂ ನೈಜ್ಯತೆ ಮನವರಿಕೆಯಾದ ಬಳಿಕ ನಾನು ರಾಜೀನಾಮೆ ಅರ್ಜಿ ಕುರಿತು ತೀರ್ಮಾನ ಮಾಡುತ್ತೇನೆ.

ಇಲ್ಲಿ ನಾನು ಯಾರನ್ನು ಮೆಚ್ಚಿಸಲು ಅತಿವರ್ಗ ವಾಗಿ ಕೆಲಸ ಮಾಡಬೇಕು? ನಾನು ಯಾವುದೇ ಶಕ್ತಿಗೆ ಬಗ್ಗುವುದಿಲ್ಲ. ಜನರ ಭಾವನೆ, ಕಾನೂನಿಗೆ ಗೌರವ ಕೊಡಬಾರದೆ. ನಾನು ಜನರು, ಸಂವಿಧಾನ ಹಂಗಿನಲ್ಲಿದ್ದೇನೆ. ಹೀಗಾಗಿ ಅದರ ವ್ಯಾಪ್ತಿಯಲ್ಲಿ ಪಾರದರ್ಶಕವಾಗಿ ನಡೆಯುತ್ತೇನೆ.

ಶಾಸಕರು ಮುಂಬೈಗೆ ಯಾಕೆ ಹೋದರೊ ಗೊತ್ತಿಲ್ಲ. ಅವರಿಗೆ ಒತ್ತಡಗಳು, ಅಭದ್ರತೆ ಭಯ ಇದ್ದರೆ ನನಗೆ ಹೇಳಿದ್ದರೆ ನಾನೇ ರಕ್ಷಣೆ ನೀಡುತ್ತಿದ್ದೆ.

ಬೇರೆ ರಾಜ್ಯಗಳಲ್ಲಿ ವರ್ಷಗಟ್ಟಲೆ ರಾಜೀನಾಮೇ ಅಂಗೀಕರಿಸಿಲ್ಲ. ನಾನು 2-3 ದಿನ ತೆಗೆದುಕೊಂಡಿದ್ದೇನೆ ಅದಕ್ಕೆ ಭೂಕಂಪವಾಗಿದೆ ಎಂಬಂತೆ ಆಡಿ ಸುಪ್ರೀಂ ಕೋರ್ಟ್ ಹೋಗಿದ್ದಾರೆ.

ಶಾಸಕರು ರಾಜೀನಾಮೆ ನೀಡಿದ್ದಾರೆ. ಎಲ್ಲ ಪ್ರಕ್ರಿಯೆ ರೆಕಾರ್ಡ್ ಆಗಿದ್ದು, ಪಾರದರ್ಶಕವಾಗಿದೆ. ರಾಜೀನಾಮೆ ಶಾಸಕರು ಅಂಗೀಕರಿಸಿ ಎಂದು ಕೇಳಿದರು. ಆದರೆ ಅವರ ರಾಜೀನಾಮೆ ನನಗೆ ಪ್ರಾಮಾಣಿಕವಾಗಿದೆ ಎಂದು ಅರಿವಾಗಬೇಕು.

Leave a Reply