ಸ್ಪೀಕರ್ ಗೆ ಆದೇಶ ನೀಡಲು ಸಾಧ್ಯವಿಲ್ಲ: ವಿಧಾನಸಭಾಧ್ಯಕ್ಷ! ನ್ಯಾಯಾಂಗ ವರ್ಸಸ್ ಶಾಸಕಾಂಗ ಸಮರ ಆರಂಭ?

ಡಿಜಿಟಲ್ ಕನ್ನಡ ಟೀಮ್:

ಅತೃಪ್ತರ ರಾಜೀನಾಮೆ ಅಂಗೀಕಾರ ವಿಚಾರವಾಗಿ ಗುರುವಾರ ಹೈಡ್ರಾಮಾ ನಡೆಯುತ್ತಿದ್ದು, ಶಾಸಕಾಂಗ ವರ್ಸಸ್ ನ್ಯಾಯಾಂಗ ನಡುವಣ ಸಮರಕ್ಕೆ ಈ ವಿಚಾರ ವೇದಿಕೆಯಾಗುವ ಸೂಚನೆ ನೀಡಿದೆ.

ಅತೃಪ್ತ ಶಾಸಕರು ತಮ್ಮ ರಾಜೀನಾಮೆ ಅರ್ಜಿ ವಿಚಾರವಾಗಿ ಸ್ಪೀಕರ್ ವಿರುದ್ಧ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಇಂದು ಸಂಜೆ 6 ಗಂಟೆ ಒಳಗೆ ರಾಜೀನಾಮೆ ಅಂಗೀಕಾರ ಅಥವಾ ತಿರಸ್ಕಾರದ ಕುರಿತ ನಿರ್ಣಯ ಕೈಗೊಳ್ಳಿ ಎಂದು ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ನಿರ್ದೇಶನ ನೀಡಿತ್ತು.

ಸುಪ್ರೀಂ ಆದೇಶದ ಬೆನ್ನಲ್ಲೇ ರಾಜ್ಯ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಅತೃಪ್ತರು ಮುಂಬೈ ಹೊಟೇಲ್ ನಿಂದ ಮಧ್ಯಾಹ್ನ 2.45ಕ್ಕೆ ಹೊರಟು ಸಂಜೆ 5 ಗಂಟೆ ಒಳಗೆ ಸ್ಪೀಕರ್ ಮುಂದೆ ಹಾಜರಾಗಲು ಮುಂದಾದರು.

ಈ ವೇಳೆ ಸ್ಪೀಕರ್ ಅವರು ಸುಪ್ರೀಂ ಕೋರ್ಟ್ ಗೆ ಅರ್ಜಿ ಹಾಕಿ, ಸ್ಪೀಕರ್ ಅಧಿಕಾರ ವ್ಯಾಪ್ತಿಯಲ್ಲಿ ನ್ಯಾಯಾಲಯ ಆದೇಶ ನೀಡುವಂತಿಲ್ಲ. ಇನ್ನು ರಾಜೀನಾಮೆ ನೀಡಿರುವ ಶಾಸಕರ ಅನರ್ಹತೆ ದೂರನ್ನು ವಿಚಾರಣೆ ನಡೆಸಬೇಕಿದ್ದು, ಇಂದು ಸಂಜೆ ಒಳಗೆ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ. ಇದಕ್ಕೆ ಹೆಚ್ಚುವರಿ ಕಾಲಾವಕಾಶ ಬೇಕು ಎಂದು ವಿವರಣೆ ನೀಡಿ ತಕ್ಷಣವೇ ಈ ಅರ್ಜಿ ವಿಚಾರಣೆ ನಡೆಸಿ ಎಂದು ಮನವಿ ಮಾಡಲಾಗಿತ್ತು. ಸ್ಪೀಕರ್ ಪರವಾಗಿ ವಕೀಲರಾದ ಅಭಿಷೇಕ್ ಮನುಸಿಂಘ್ವಿ ವಾದ ಮಂಡಿಸಿದರು.

ಆದರೆ ತಕ್ಷಣ ವಿಚಾರಣೆಗೆ ನಿರಾಕರಿಸಿದ ಸುಪ್ರೀಂಕೋರ್ಟ್ ನ್ಯಾಯಾಲಯ ಕೇವಲ ರಾಜೀನಾಮೆ ನೀಡಿರುವ ಶಾಸಕರು ಸ್ಪೀಕರ್ ಮುಂದೆ ಹಾಜರಾಗಬೇಕು ಸರಿಯಾದ ರೀತಿಯಲ್ಲಿ ರಾಜೀನಾಮೆ ನೀಡಲು ಸೂಚಿಸಲಾಗಿದೆ. ಅಲ್ಲದೆ ವಿಚಾರಣೆ ಆರಂಭಿಸಲು ಸೂಚನೆ ನೀಡಲಾಗಿದೆ. ಆದರೆ ಇಂತಹುದೇ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಹೇಳಿಲ್ಲ ಎಂದಿದೆ.

ಇದರೊಂದಿಗೆ ರಾಜೀನಾಮೆ ಅರ್ಜಿ ವಿಚಾರದ ಚೆಂಡು ಸ್ಪೀಕರ್ ಅಂಗಳಕ್ಕೆ ಬಂದು ನಿಂತಿದೆ. ಇಂದಿನ ಬೆಳವಣಿಗೆಗಳ ಮೇಲೆ ನಾಳೆ ನಡೆಯಲಿರುವ ನ್ಯಾಯಾಲಯ ವಿಚಾರಣೆ ಸಾಕಷ್ಟು ಕುತೂಹಲ ಮೂಡಿಸಿದೆ. ಇದರೊಂದಿಗೆ ಮುಂದಿನ ದಿನಗಳಲ್ಲಿ ಶಾಸಕಾಂಗ ಹಾಗೂ ನ್ಯಾಯಾಂಗ ನಡುವಣ ತಿಕ್ಕಾಟಕ್ಕೆ ದಾರಿ ಹುಟ್ಟಿಕೊಳ್ಳುವುದೇ ಎಂಬ ಆತಂಕ ಮೂಡಿದೆ.

Leave a Reply