ಸಿಎಂ, ಸುಪ್ರೀಂ ಏಟಿಗೆ ಕಕ್ಕಾಬಿಕ್ಕಿಯಾದ ಕಮಲಪಡೆ!

ಡಿಜಿಟಲ್ ಕನ್ನಡ ಟೀಮ್:

ರಾಜ್ಯ ರಾಜಕಾರಣದಲ್ಲಿ ಗೊಂದಲದ ಪರಿಸ್ಥಿತಿ ಉದ್ಬವ ಆಗಿದ್ದು, ಶಾಸಕಾಂಗ- ನ್ಯಾಯಾಂಗದ ಸಂಘರ್ಷ ಎದುರಾಗುವ ಭೀತಿ ಕಾಡ್ತಿದೆ. ಸಂಘರ್ಷ ತಪ್ಪಿಸುವ ಸಲುವಾಗಿ ಸುಪ್ರೀಂಕೋರ್ಟ್ ಯಾವುದೇ ನಿರ್ಧಾರ ಮಾಡದೆ ಯಥಾಸ್ಥಿತಿ ಕಾಪಾಡುವಂತೆ ಸೂಚನೆ ಕೊಟ್ಟಿದೆ, ಹೀಗಾಗಿ ಶಾಸಕರ ರಾಜೀನಾಮೆಯನ್ನೂ ಅಂಗೀಕರಿಸುವಂತಿಲ್ಲ, ರಾಜೀನಾಮೆ ಕೊಟ್ಟ ಶಾಸಕರನ್ನು ಅನರ್ಹರನ್ನಾಗಿಯೂ ಮಾಡುವಂತಿಲ್ಲ. ಇದರಿಂದ ಯಾರಿಗೂ ಸಂಭ್ರಮ ಅಥವಾ ದುಃಖದ ಆದೇಶ ಸಿಕ್ಕಂತಾಗಿಲ್ಲ.

ಸುಪ್ರೀಂಕೋರ್ಟ್ ತೀರ್ಪು ಹೊರ ಬೀಳುತ್ತಲೇ ವಿಧಾನಸಭಾ ಮಳೆಗಾಲದ ಅಧಿವೇಶನ ಆರಂಭವಾಯ್ತು. ಇಂದಿನ ಕಾರ್ಯಕಲಾಪ ಪಟ್ಟಿಯಲ್ಲಿ ನಿಧನವೊಂದಿದ ಗಣ್ಯರಿಗೆ ಸಂತಾಪ ಸೂಚನೆ ಇತ್ತು. ಸಂತಾಪ ಸೂಚನೆಗೂ ಮೊದಲು ಮಾತನಾಡಿದ ಸಿಎಂ ಕುಮಾರಸ್ವಾಮಿ ಬಿಜಿಪಿ ವಿರುದ್ಧ ಭರ್ಜರಿ ದಾಳ ಉರುಳಿಸಿದ್ರು.

‘ಅನಿವಾರ್ಯ ಪರಿಸ್ಥಿತಿಯಲ್ಲಿ ನಾನು ಮಾತನಾಡ್ತಿದ್ದೇನೆ ಸಂತಾಪ ಸೂಚನೆಗೂ ಮೊದಲು ಒಂದು ವಿಚಾರ ಪ್ರಸ್ತಾಪ ಮಾಡಬೇಕಿದೆ’ ಎಂದು ಮಾತು ಆರಂಭಿಸಿದ ಸಿಎಂ ಕುಮಾರಸ್ವಾಮಿ, ‘ಶಾಸಕರು ರಾಜೀನಾಮೆ ನೀಡಿದ್ದಾರೆ. ಬಿಜೆಪಿ ನಾಯಕರು ಸರ್ಕಾರ ವಿಶ್ವಾಸ ಕಳೆದುಕೊಂಡಿದೆ ಎನ್ನುತ್ತಿದ್ದಾರೆ. ಆದ್ರೆ ವಿಶ್ವಾಸ ಮತ ಯಾಚನೆಗೆ ಒತ್ತಾಯ ಮಾಡ್ತಿಲ್ಲ. ಹೀಗಾಗಿ ನಾನೇ ಸ್ವಯಂ ವಿಶ್ವಾಸ ಮತ ಯಾಚನೆ ಮಾಡಲು ಸಮಯ ಕೊಡಬೇಕು’ ಎಂದು ಸ್ಪೀಕರ್‌ಗೆ ಮನವಿ ಮಾಡಿದ್ದಾರೆ.

ಸಿಎಂ ಕುಮಾರಸ್ವಾಮಿ ಎಸೆದ ಗೂಗ್ಲಿಯಿಂದ ಕಂಗಾಲಾಗಿರುವ ಕಮಲ ಪಡೆ ಮುಂದೇನು ಮಾಡಬೇಕು ಅನ್ನೋ ಚಿಂತೆಯಲ್ಲಿ ಮುಳುಗಿದೆ. ಸರ್ಕಾರವೇ ವಿಶ್ವಾಸ ಮತ ಯಾಚಿಸಲು ಮುಂದಾಗಿರೋದ್ರಿಂದ ಕಾನೂನು ಪ್ರಕಾರ ಮುಂದೇನು ಮಾಡಬೇಕು ಅನ್ನೋ ಚಿಂತಿಸೋಣ. ಅದಕ್ಕೂ ಮೊದಲು ನಾವು ನಮ್ಮ ಶಾಸಕರನ್ನು ರಕ್ಷಣೆ ಮಾಡಿಕೊಳ್ಳೋದು ಮುಖ್ಯ ಎನ್ನುವ ತೀರ್ಮಾನಕ್ಕೆ ಬಂದಿದೆ.

ಆಪರೇಷನ್ ಹಸ್ತದ ಭೀತಿಯಲ್ಲಿರುವ ಕೇಸರಿಪಡೆ ಎಲ್ಲಾ ಶಾಸಕರನ್ನು ರೆಸಾರ್ಟ್‌ಗೆ ಶಿಫ್ಟ್ ಮಾಡುವ ನಿರ್ಧಾರ ಮಾಡಿದೆ. ವಿಧಾನಸಭೆಯಲ್ಲಿ ಬಿಜೆಪಿ‌ ಮಹತ್ವದ ಸಭೆ ನಡೆಸುತ್ತಿದ್ದು, ಯಾವ ರೆಸಾರ್ಟ್‌ಗೆ ಶಿಫ್ಟ್ ಮಾಡಬೇಕು ಅನ್ನೋ ಬಗ್ಗೆ ನಿರ್ಧಾರ ಮಾಡಲಾಗ್ತಿದೆ. ಒಟ್ಟಾರೆ ಸುಪ್ರೀಂಕೋರ್ಟ್ ಮಂಗಳವಾರ ಮತ್ತೆ ವಿಚಾರಣೆ ನಡೆಸಿ ಏನು ತೀರ್ಪು ನೀಡುತ್ತೋ ಅನ್ನೋ ಚಿಂತನೆಯಲ್ಲಿದ್ದ ಅತೃಪ್ತರು ಹಾಗೂ ಬಿಜೆಪಿ ನಾಯಕರಿಗೆ ಸಿಎಂ ಸರಿಯಾಗೇ ಠಕ್ಕರ್ ಕೊಟ್ಟಿದ್ದಾರೆ.

Leave a Reply