ಯಥಾಸ್ಥಿತಿ ಕಾಪಾಡಿಕೊಳ್ಳಲು ಆದೇಶ ನೀಡಿ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್

  ಡಿಜಿಟಲ್ ಕನ್ನಡ ಟೀಮ್:

  ಸದ್ಯಕ್ಕೆ ಅತೃಪ್ತ ಶಾಸಕರ ವಿರುದ್ಧದ ಅರ್ಜಿ ವಿಚಾರಣೆ, ರಾಜೀನಾಮೆ ಅಂಗೀಕಾರ ವಿಚಾರಗಳಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದ್ದು, ಮಂಗಳವಾರ ವಿಚಾರಣೆ ಮುಂದೂಡಿದೆ.

  ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ವಿಚಾರಣೆ ಆರಂಭಿಸಿದ ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ತ್ರಿಸದಸ್ಯ ಪೀಠ ಸುಮಾರು ಒಂದು ಗಂಟೆ ಕಾಲ ವಾದ ಪ್ರತಿವಾದ ಆಲಿಸಿತು. ಸುಪ್ರೀಂ ಕೋರ್ಟ್ ನ ಈ ಆದೇಶ ಮೈತ್ರಿ ಸರ್ಕಾರ ಹಾಗೂ ಅತೃಪ್ತ ಶಾಸಕರಿಗೆ ರಿಲೀಫ್ ಸಿಕ್ಕಂತಾಗಿದೆ.

  ಅತೃಪ್ತರ ಪರ ಮುಕುಲ್ ರೋಹಟಗಿ, ಸ್ಪೀಕರ್ ಪರ ಅಭಿಷೇಕ್ ಮನು ಸಿಂಘ್ವಿ ಹಾಗೂ ಮುಖ್ಯಮಂತ್ರಿ ಪರವಾಗಿ ರಾಜೀವ್ ಅವರು ನ್ಯಾಯಾಲಯದಲ್ಲಿ ವಾದ ಮಂಡಿಸಿದರು.

  ಮೊದಲು ವಾದ ಆರಂಭಿಸಿದ ರೋಹಟಗಿ ಅವರು ಸ್ಪೀಕರ್ 2 ಕುದುರೆ ಮೇಲೆ ಸವಾರಿ ಮಾಡುತ್ತಿದ್ದಾರೆ. ಸರ್ಕಾರದ ಪರ ಕೈಜೋಡಿಸಿ ಉದ್ದೇಶಪೂರ್ವಕವಾಗಿ ರಾಜೀನಾಮೆ ಅಂಗೀಕಾರ ವಿಳಂಬ ಮಾಡುತ್ತಿದ್ದಾರೆ ಎಂದು ವಾದ ಮಂಡಿಸಿದರು.

  ನಂತರ ಪ್ರತಿವಾದ ನಡೆಸಿದ ಸಿಂಘ್ವಿ, ‘ಸ್ಪೀಕರ್ ಅವರಿಗೆ ಯಾವ ಆಧಾರದ ಮೇಲೆ ನ್ಯಾಯಾಲಯ ನಿರ್ದೇಶನ ನೀಡುತ್ತಿದೆ. ಸದನದ ವಿಚಾರದಲ್ಲಿ ಹಸ್ತಕ್ಷೇಪ ಮಾಡುವ ಅವಕಾಶ ಇಲ್ಲ ಎಂದು ವಾದ ಮಂಡಿಸಿದರು. ಈ ವೇಳೆ ಸ್ಪೀಕರ್ ಅವರು ರಾಜೀನಾಮೆ ಅರ್ಜಿಯನ್ನು ಶೀಘ್ರ ವಿಚಾರಣೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅಫಿಡವಿಟ್ ಸಲ್ಲಿಸಿದರು.

  ನಂತರ ವಾದ ಮಂಡಿಸಿದ ಸಿಎಂ ಪರ ವಕೀಲರು, ‘ರಾಜೀನಾಮೆ ನೀಡಿರುವ ಶಾಸಕರಲ್ಲಿ ಬಹುಕೋಟಿ ಹಣ ವಂಚನೆ ಪ್ರಕರಣದಲ್ಲಿ ಆರೋಪ ಹೊಂದಿದ್ದಾರೆ. ಈ ದೂರು ರಾಜಕೀಯ ಪ್ರೇರಿತ. ಸರ್ಕಾರ ಯಾವುದೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲ ಎಂದು ವಾದ ಮಂಡಿಸಿದರು.

  ಈ ಎಲ್ಲ ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ ಮಧ್ಯಂತರ ನಿರ್ದೇಶನ ನೀಡಿ ವಿಚಾರಣೆ ಮುಂದೂಡಿದೆ.

  Leave a Reply