ಅಧಿವೇಶನಕ್ಕೆ ಅತೃಪ್ತರು ಗೈರು? ಮುಂದೇನು?

ಡಿಜಿಟಲ್ ಕನ್ನಡ ಟೀಮ್:

ರಾಜೀನಾಮೆ ಸಲ್ಲಿಸಿ ಅತೃಪ್ತರು ಮುಂಬೈಗೆ ಪ್ರಯಾಣ.. ಶುಕ್ರವಾರದ ಅಧಿವೇಶನದಲ್ಲಿ ಹಣಕಾಸು ವಿಧೇಯಕ ಮಂಡನೆಗಾಗಿ ಆಡಳಿತ ಪಕ್ಷಗಳಿಂದ ವಿಪ್ ಜಾರಿ.. ಅತೃಪ್ತರ ರಾಜೀನಾಮೆ ಸದ್ಯಕ್ಕೆ ಅಗೀಕರಿಸದ ಸ್ಪೀಕರ್.. ಈ ಎಲ್ಲ ಬೆಳವಣಿಗೆಗಳು ರಾಜ್ಯ ರಾಜಕೀಯವನ್ನು ರೋಚಕತೆಯ ಉತ್ತುಂಗಕ್ಕೆ ತೆಗೆದುಕೊಂಡು ಹೋಗಿದೆ.

ಅತೃಪ್ತರು ಅಧಿವೇಶನಕ್ಕೆ ಬಾರದೇ ಹೋದಾಗ ಮೈತ್ರಿ ಸರ್ಕಾರ ಪತನ ಆಗುತ್ತಾ? ಅಧಿವೇಶನಕ್ಕೆ ಬಾರದ ಅತೃಪ್ತರ ವಿರುದ್ಧ ಅನರ್ಹತೆಯ ಅಸ್ತ್ರ ಪ್ರಯೋಗವಾಗುತ್ತಾ? ಅನರ್ಹತೆ ಅಸ್ತ್ರ ಪ್ರಯೋಗವಾದರೆ ಸ್ಪೀಕರ್ ನಡೆ ಏನು? ಅತೃಪ್ತರ ಮುಂದಿನ ರಾಜಕೀಯ ಭವಿಷ್ಯವೇನು? ಇಷ್ಟೆಲ್ಲಾ ಪ್ರಶ್ನೆಗಳು ಪುಂಖಾನುಪುಂಖವಾಗಿ ಮೂಡುತ್ತಿದೆ.

ಅತೃಪ್ತ ಶಾಸಕರು ಹೊಸದಾಗಿ ನೀಡಿರುವ ರಾಜೀನಾಮೆಗಳು ಕ್ರಮಬದ್ಧವಾಗಿವೆ ಎಂದು ಸ್ಪೀಕರ್ ಒಪ್ಪಿಕೊಂಡಿದ್ದಾರೆ. ಹಾಗಿದ್ದಲ್ಲಿ ಅದನ್ನು ಅಂಗೀಕರಿಸಲೇಬೇಕಾಗುತ್ತದೆ. ರಾಜೀನಾಮೆ ಪತ್ರಗಳು ಅಂಗೀಕಾರವಾದಲ್ಲಿ ಶಾಸಕರು ತಮ್ಮ ಸದಸ್ಯತ್ವ ಕಳೆದುಕೊಳ್ಳುವುದರಿಂದ ಪಕ್ಷಗಳ ವಿಪ್ ಅನ್ವಯವಾಗುವುದಿಲ್ಲ ಎಂದು ಅತೃಪ್ತ ಶಾಸಕರು ವಾದಿಸುತ್ತಿದ್ದಾರೆ.
ರಾಜೀನಾಮೆ ಅಂಗೀಕಾರವಾದರೆ ವಿಧಾನಸಭೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರಕಾರ ಬಹುಮತ ಸಾಬೀತು ಮಾಡಬೇಕಾಗುತ್ತದೆ. ಈ ಬಗ್ಗೆ ರಾಜ್ಯಪಾಲರು ನಿರ್ದೇಶನ ನೀಡಬಹುದು. ಅಗತ್ಯ ಸಂಖ್ಯಾಬಲವಿಲ್ಲದ ಕಾರಣ ಸರಕಾರ ಕುಸಿಯಬಹುದು.

ರಾಜೀನಾಮೆ ಅಂಗೀಕಾರವಾಗದಿದ್ದರೆ, ಅತೃಪ್ತರ ವಿರುದ್ಧ ಅನರ್ಹತೆ ಅಸ್ತ್ರ ಪ್ರಯೋಗಿಸಿ ಅವರನ್ನು ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಅನರ್ಹಗೊಳಿಸಬಹುದು. ಆದರೆ ಈಗಾಗಲೇ ಅತೃಪ್ತರು ರಾಜೀನಾಮೆ ನೀಡಿರುವ ವಿಚಾರವಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ತಾವು ವಿಪ್ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ವಾದಿಸಬಹುದು. ಇದು ಸಹಜವಾಗಿಯೇ ಕಾನೂನು ಸಮರಕ್ಕೆ ದಾರಿ ಮಾಡಿಕೊಡಲಿದೆ.

Leave a Reply