ದೋಸ್ತಿಗಳ ಮುಂದೆ ಉಳಿದಿರೋ ದಾಳ ಇದೊಂದೆ!

ಡಿಜಿಟಲ್ ಕನ್ನಡ ಟೀಮ್:

ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಇನ್ನಿಲ್ಲದ ಪ್ರಯತ್ನ ಮಾಡುತ್ತಲೇ ಇದ್ದಾರೆ. ಆದರೆ ಅವರ ಯಾವ ಪ್ರಯತ್ನಗಳು ನಿರೀಕ್ಷಿತ ಫಲಿತಾಂಶ ನೀಡುತ್ತಿಲ್ಲ. ಹೀಗಾಗಿ ದೋಸ್ತಿಗಳು ತಮ್ಮ ಬತ್ತಳಿಕೆಯರೊ ಕಡೇ ಅಸ್ತ್ರವನ್ನು ಪ್ರಯೋಗಿಸಲು ಮುಂದಾಗಿದ್ದಾರೆ.

ಮೈತ್ರಿ ಸರ್ಕಾರ ಉಳಿಸಲು ಇರೋ ಕಡೇ ಅಸ್ತ್ರ ಏನಪ್ಪಾ ಅಂದ್ರೆ, ರಾಮಲಿಂಗಾ ರೆಡ್ಡಿ ಮನವೊಲಿಕೆ ಹಾಗೂ ಆ ಮೂಲಕ ಅತೃಪ್ತರನ್ನು ವಾಪಸ್ ಪಕ್ಷಕ್ಕೆ ಕರೆತರುವುದು.

ಹೌದು, ನನಗೆ ಯಾವುದೇ ಹುದ್ದೆ ಆಕಾಂಕ್ಷೆ ಇಲ್ಲ. ಆದರೆ ಪಕ್ಷದಲ್ಲಿನ ಆಂತರಿಕ ನ್ಯೂನ್ಯತೆಗಳಿಂದ ರಾಜೀನಾಮೆ ನೀಡಿರುವುದಾಗಿ ತಿಳಿಸಿರುವ ರಾಮಲಿಂಗಾ ರೆಡ್ಡಿ ಅವರ ಅಂತಿಮ ನಿರ್ಧಾರ ಮೈತ್ರಿ ಸರ್ಕಾರದ ಅಳಿವು ಉಳಿವನ್ನು ನಿರ್ಧರಿಸುತ್ತದೆ.

ಎಂಟಿಬಿ ನಾಗರಾಜ್, ಸುಧಾಕರ್ ಸೇರಿದಂತೆ ಅತೃಪ್ತರ ಮನವೊಲಿಕೆಗೆ ಪ್ರಯತ್ನಿಸಿ ಸುಸ್ತಾದ ಕೈ ನಾಯಕರು, ಈಗ ರಾಮಲಿಂಗಾ ರೆಡ್ಡಿ ಅವರ ಮನವೊಲಿಕೆಗೆ ಮುಂದಾಗಿದ್ದಾರೆ. ರೆಡ್ಡಿ ಅವರ ಮನವೊಲಿಕೆಯಾದರೆ ಬೆಂಗಳೂರಿನ ನಾಲ್ಕೈದು ಶಾಸಕರು ಗೂಡಿಗೆ ಮರಳುವುದು ಬಹುತೇಕ ಖಚಿತ. ಇನ್ನು ಅತೃಪ್ತರ ಗುಂಪಿನಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಳ್ಳುತ್ತಿರುವ ಎಸ್.ಟಿ ಸೋಮಶೇಖರ್ ಕೂಡ ರಾಮಲಿಂಗಾ ರೆಡ್ಡಿ ಅವರ ಹಾದಿ ಹಿಡಿಯುವ ಸಾಧ್ಯತೆ ಹೆಚ್ಚಾಗಿದ್ದು, ಇದು ನಿಜವಾದರೆ ಅತೃಪ್ತರ ಕ್ಯಾಂಪ್ ಅರ್ಧಕ್ಕರ್ಧ ಖಾಲಿ ಆಗಲಿದೆ.

ಸ್ವತಃ ರಾಮಲಿಂಗಾ ರೆಡ್ಡಿ ತಮ್ಮ ನಿರ್ಧಾರದ ಕಾರಣವನ್ನು ನೇರವಾಗಿ ಹೇಳಿಕೊಂಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಅದನ್ನು ಸರಿಪಡಿಸುವ ಭರವಸೆ ಕೊಟ್ಟರೆ ರೆಡ್ಡಿ ರಾಜೀನಾಮೆ ಹಿಂಪಡೆಯುವ ಸಾಧ್ಯತೆ ಹೆಚ್ಚಾಗಿದೆ.

ಇಂದು ರಾಜೀನಾಮೆ ಅರ್ಜಿ ವಿಚಾರಣೆಗಾಗಿ ಸ್ಪೀಕರ್ ಭೇಟಿ ಮಾಡಲಿರುವ ರಾಮಲಿಂಗಾ ರೆಡ್ಡಿ, ಅಂತಿಮವಾಗಿ ಯಾವ ನಿರ್ಧಾರಕ್ಕೆ ಬರ್ತಾರೆ ಎಂಬ ಕುತೂಹಲ ಹೆಚ್ಚಿದೆ.

Leave a Reply